Home ಜಿಲ್ಲೆ ಮಹಾಜಪಯೋಗದಿಂದ ಮಾನಸಿಕ ಸ್ಥಿತಿ ಸ್ಥಿರ: ಹರ್ಷಾನಂದ ಶ್ರೀಗಳು

ಮಹಾಜಪಯೋಗದಿಂದ ಮಾನಸಿಕ ಸ್ಥಿತಿ ಸ್ಥಿರ: ಹರ್ಷಾನಂದ ಶ್ರೀಗಳು

ಸಂಜೆ ವಾಣಿ ವಾರ್ತೆ
ಜಮಖಂಡಿ:ಫೆ.೧೯: ಮಹಾಶಿವರಾತ್ರಿ ನಿಮಿತ್ತ ಮಹಾಜಪಯೋಗ ಮಾಡಬೇಕು. ಮಹಾಜಪಯೋಗ ಮಾಡುವುದರಿಂದ ಮಾನಸಿಕ, ಶಾರೀರಿಕ ಸ್ಥಿತಿ ಸ್ಥಿರಗೊಳ್ಳುತ್ತವೆ. ಮಾಡುವ ಎಲ್ಲ ಕೆಲಸಗಳು ಯಶಸ್ವಿಯಾಗುತ್ತವೆ ಎಂದು ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ಹೇಳಿದರು.
ತಾಲ್ಲೂಕಿನ ಹುಲ್ಯಾಳ ಗ್ರಾಮದ ಸುಕ್ಷೇತ್ರ ವೇದಾಂತಕೇಸರಿ ಶ್ರೀಮಲ್ಲಿಕಾರ್ಜುನ ಗುರುದೇವಾಶ್ರಮದಲ್ಲಿ ಮಹಾಶಿವರಾತ್ರಿ ಮಹೋತ್ಸವ ಅಂಗವಾಗಿ ಭಾನುವಾರ ನಡೆದ ಮಹಾಜಪಯೋಗ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಆಶೀರ್ವಚನ ನೀಡಿದರು.
ಮೈಗೂರಿನ ಶಿವಾನಂದ ಮಠದ ಗುರುಪ್ರಸಾದ ಮಹಾವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಮಹಾಜಪಯೋಗಕ್ಕೆ ಜೀವನವನ್ನು ಪಾವನ ಮಾಡುವ ಶಕ್ತಿಯಿದೆ. ಮಹಾಜಪಯೋಗದಿಂದ ಎಲ್ಲ ಭವರೋಗಗಳು ದೂರವಾಗುತ್ತವೆ ಎಂದು ಆಶೀರ್ವಚನ ನೀಡಿದರು.
ಲಿಂಗನೂರಿನ ಶಿವಪುತ್ರ ಅವಧೂತ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಎಲ್ಲವನ್ನು ಕರುಣಿಸಿ ಉಪಭೋಗಿಸಲು ಅವಕಾಶ ಕಲ್ಪಿಸಿರುವ ಶಿವನಿಗೆ ಧನ್ಯವಾದ ಮತ್ತು ನಮಸ್ಕಾರ ಹೇಳುವುದೆ ಓಂ ನಮಶಿವಾಯಃ ಮಂತ್ರವಾಗಿದೆ ಎಂದು ಆಶೀರ್ವಚನ ನೀಡಿದರು.
ಸಿದ್ದಾಪುರ ಅಡವಿಸಿದ್ಧೇಶ್ವರ ಮಠದ ಮಾತೋಶ್ರೀ ಅಕ್ಕಮಹಾದೇವಿ ಆಶೀರ್ವಚನ ನೀಡಿದರು. ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿದರು. ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಋಷಿಕೇಶದ ಗಂಗಾನAದ ಮಹಾರಾಜರು, ಕುಂಚನೂರಿನ ಲಕ್ಕಪ್ಪ ಮುತ್ಯಾ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ಮಹಾಭಾರತದ ದ್ರೌಪದಿ ವಸ್ತ್ರಹರಣ ಸನ್ನಿವೇಶ ಕುರಿತು ಬೆಂಗಳೂರಿನ ಬಾಲಕಿ ರಿಷಿಕಾ ವಿ. ಬೀಳಗಿ ಭರತನಾಟ್ಯ ಪ್ರದರ್ಶಿಸಿದರು. ಗುರುದೇವ ಸಂಗೀತ ಬಳಗದ ಕಲಾವಿದರಾದ ಗುರುಬಸಗೌಡ ಪಾಟೀಲ, ಪರಮೇಶ್ವರ ತೇಲಿ, ರಾಮಚಂದ್ರ ಹೂಗಾರ, ಸಿದ್ದು ಉಪ್ಪಲದಿನ್ನಿ ಸಂಗೀತ ಸೇವೆ ಸಲ್ಲಿಸಿದರು.
ಮಹಾಪ್ರಸಾದ ದಾಸೋಹ ಮಾಡಿದ ಎಲ್ಲ ಸದ್ಭಕ್ತರನ್ನು ಸನ್ಮಾನಿಸಲಾಯಿತು. ಹುಲ್ಯಾಳ ಗ್ರಾಮದ ಯುವಕರು ಭಕ್ತಿಗೀತೆಗಳನ್ನು ಹಾಡಿದರು. ಗುರುಪಾದುಕಾ ಮಹಾಪೂಜೆ, ಸದ್ಭಕ್ತರಿಂದ ೧೨ ಜ್ಯೋತಿರ್ಲಿಂಗಗಳ ಮಹಾಪೂಜೆ, ೩೦ ಜನ ಸದ್ಭಕ್ತರಿಗೆ ಲಿಂಗದೀಕ್ಷೆ, ಸುಮಾರು ೨ ಸಾವಿರ ಜನ ಮುತೈದೆಯರ ಉಡಿತುಂಬುವ ಕಾರ್ಯಕ್ರಮಗಳು ನಡೆದವು.