
ಬೀದರ್: ಮೇ.20: ಭಾಲ್ಕಿ ತಾಲ್ಲೂಕಿನ ಮೇಹಕರ್‍ನ ಕಟ್ಟಿಮನಿ ಸಂಸ್ಥಾನ ಹಿರೇಮಠದ ಶ್ರೀ ರಾಜೇಶ್ವರ ಶಿವಾಚಾರ್ಯರ ಪಟ್ಟಾಭಿಷೇಕದ ರಜತ ಮಹೋತ್ಸವ ಮೇ 21ರಿಂದ 23ರ ವರೆಗೆ ಜರುಗಲಿದೆ.
ವಿರೂಪಾಕ್ಷೇಶ್ವರ ದೇವಸ್ಥಾನ ಅತ್ಯಂತ ಹಳೆಯ ಗುಡಿಯಾಗಿದ್ದು ಅಪಾರ ಭಕ್ತರ ಶ್ರದ್ಧಾ ಕೇಂದ್ರವಾಗಿದೆ.
ರಾಜೇಶ್ವರ ಶಿವಾಚಾರ್ಯರ ಪಟ್ಟಾಭಿಷೇಕ 1999ರಲ್ಲಿ ನಡೆದಿತ್ತು. ಇದೀಗ ಪಟ್ಟಾಭಿಷೇಕದ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬೆಳ್ಳಿ ಪಲ್ಲಕ್ಕಿಯಲ್ಲಿ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ.
‘ಕಟ್ಟಿಮನಿ ಸಂಸ್ಥಾನ ಹಿರೇಮಠವು ಗಡಿಭಾಗದ ಮಠ. ಸಾವಯವ ಕೃಷಿ, ಸಾಮಾಜಿಕ, ಧಾರ್ಮಿಕ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ’ ಎಂದು ಮಠದ ರಾಜೇಶ್ವರ ಶಿವಾಚಾರ್ಯರು ಹೇಳುತ್ತಾರೆ.
ಮೇ 12 ರಿಂದ 23 ರವರೆಗೆ ಮಹಾರುದ್ರಾಭಿಷೇಕ, ಜಪಯಜ್ಞ, ಶಿವದೀಕ್ಷಾ, ಬಿಲ್ವಾರ್ಚನೆ, ಕುಂಕುಮಾರ್ಚನೆ, ಬೆಳ್ಳಿ ಪಲ್ಲಕ್ಕಿ ಉತ್ಸವ ಹಾಗೂ ಮೇ 20ರಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಅವರನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಮೆರವಣಿಗೆ, ಮೇ 21 ರಿಂದ 23 ರವರೆಗೆ ಇಷ್ಟಲಿಂಗ ಮಹಾಪೂಜೆ, ಸಂಜೆ ಧರ್ಮಸಭೆ ಹಾಗೂ ಗ್ರಾಮ ಸಾಂಸ್ಕøತಿಕ ಉತ್ಸವ ನಡೆಯಲಿದೆ.
‘ರಜತ ಮಹೋತ್ಸವ ನಿಮಿತ್ಯ 11 ದಿನ ಗಡಿಗೌಡಗಾಂವ ಶಾಂತವೀರ ಶಿವಾಚಾರ್ಯರಿಂದ ಪ್ರವಚನ, ಮೇ 21ರಂದು ಕೊಲ್ಹಾಪುರದ ಮನೆಮದ್ದು ತಜ್ಞ ಡಾ.ಸ್ವಾಗತ ತೊಡಕರ ಅವರಿಂದ ಆರೋಗ್ಯ ಕುರಿತು ವಿಚಾರ ಗೋಷ್ಠಿ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ತಿಳಿಸಿದ್ದಾರೆ.