
ಬೆಂಗಳೂರು, ನ. ೨೭- ರಾಜ್ಯ ಕಾಂಗ್ರೆಸ್‌ನ ಅಧಿಕಾರ ಹಂಚಿಕೆಯ ಸಮಸ್ಯೆ ಬಗೆಹರಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ೩-೪ ಮಂದಿ ಪ್ರಮುಖ ನಾಯಕರನ್ನು ದೆಹಲಿಗೆ ಕರೆಸಿಕೊಂಡು ಚರ್ಚೆ ನಡೆಸಿ ಎಲ್ಲದಕ್ಕೂ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಹೇಳಿದರು.
ನಿನ್ನೆ ದೆಹಲಿಯಿಂದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ್ದ ಅವರು ಇಂದು ದೆಹಲಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಕಾಂಗ್ರೆಸ್‌ನಲ್ಲಿ ಇರುವ ಸಮಸ್ಯೆ ಪರಿಹರಿಸಲು ರಾಜ್ಯ ನಾಯಕರನ್ನು ದೆಹಲಿಗೆ ಕರೆಸಿಕೊಂಡು ದೆಹಲಿಯಲ್ಲಿ ಸಭೆ ನಡೆಸುತ್ತೇವೆ ಎಂದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ೩-೪ ಮಂದಿ ಪ್ರಮುಖ ನಾಯಕರನ್ನು ದೆಹಲಿಗೆ ಕರೆಸಿಕೊಂಡು ಅಧಿಕಾರ ಹಂಚಿಕೆಯ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಸಿ ಎಲ್ಲವನ್ನು ಪರಿಹರಿಸಲಾಗುವುದು ಎಂದು ಅವರು ಹೇಳಿದರು.
ಕಾಂಗ್ರೆಸ್ ಹೈಕಮಾಂಡ್ ಎಂಬುದು ಏಕಾಂಗಿ ಅಲ್ಲ, ಅದೊಂದು ತಂಡ. ವರಿಷ್ಠ ನಾಯಕರೆಲ್ಲಾ ಒಟ್ಟಿಗೆ ಕುಳಿತು ಚರ್ಚಿಸಿ ರಾಜ್ಯ ಕಾಂಗ್ರೆಸ್‌ನ ಬಿಕ್ಕಟ್ಟಿಗೆ ಪರಿಹಾರ ರೂಪಿಸುತ್ತೇವೆ ಎಂದರು.
ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್‌ಗಾಂಧಿ ಸಹ ಸಮಸ್ಯೆ ಪರಿಹಾರದ ಸಭೆಯಲ್ಲಿ ಪಾಲ್ಗೊಳ್ಳುವರು ಎಂದು ಅವರು ಹೇಳಿದರು
ಈ ಸಭೆಯಲ್ಲಿ ಎಲ್ಲ ನಾಯಕರು ಕುಳಿತು ಪರಸ್ಪರ ಚರ್ಚಿಸಿ ಮುಂದೆ ಏನು ಮಾಡಬೇಕು ಎಂಬ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಖರ್ಗೆ ಹೇಳಿದರು.
ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಜಟಾಪಟಿ ಇಲ್ಲ. ಇವೆಲ್ಲಾ ಮಾಧ್ಯಮ ಸೃಷ್ಟಿ ಎಂದು ಹೇಳುತ್ತಾ ಬಂದಿದ್ದ ಕಾಂಗ್ರೆಸ್ ಹೈಕಮಾಂಡ್ ಈಗ ಸಮಸ್ಯೆ ಇರುವುದನ್ನು ಒಪ್ಪಿಕೊಂಡು ಸಮಸ್ಯೆ ಬಗೆಹರಿಸಲು ಸಭೆ ನಡೆಸುವುದಾಗಿ ಹೇಳಿರುವುದು ಮಹತ್ವದ ಬೆಳವಣಿಗೆಯಾಗಿದೆ.
ದೆಹಲಿಯಲ್ಲಿ ಸಂಜೆ ವರಿಷ್ಠರ ಸಭೆ
ರಾಜ್ಯ ಕಾಂಗ್ರೆಸ್‌ನ ಅಧಿಕಾರ ಹಂಚಿಕೆ ಕಗ್ಗಂಟ್ಟಿಗೆ ಇಂದು ತೆರೆ ಬೀಳಲಿದ್ದು, ಕಾಂಗ್ರೆಸ್ ಹೈಕಮಾಂಡ್ ಅಧಿಕಾರ ಹಂಚಿಕೆಯ ಗೊಂದಲಗಳಿಗೆ ಪರಿಹಾರ ಸೂತ್ರವನ್ನು ಕಂಡುಕೊಳ್ಳಲು ದೆಹಲಿಯಲ್ಲಿ ಸಂಜೆ ಸಭೆ ನಡೆಸಲಿದೆ.
ಕಳೆದ ಏಳೆಂಟು ದಿನಗಳಿಂದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಣಗಳ ನಡುವೆ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಕಗ್ಗಂಟ್ಟು ತಾರಕ್ಕೇರಿದ್ದು, ಕಳೆದ ವಾರ ಬೆಂಗಳೂರಿಗೆ ಬಂದಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಸಿಎಂ, ಡಿಸಿಎಂ ಸೇರಿದಂತೆ ಹಲವು ಸಚಿವರು, ಶಾಸಕರುಗಳು ಭೇಟಿ ಮಾಡಿ ಅಧಿಕಾರ ಹಂಚಿಕೆಯ ಗೊಂದಲಗಳಿಗೆ ತೆರೆ ಎಳೆಯುವಂತೆ ಕೋರಿದ್ದರು.
ಈ ಎಲ್ಲ ಬೆಳವಣಿಗೆಗಳ ನಡುವೆಯೇ ದೆಹಲಿಗೆ ತೆರಳಿದ್ದ ಮಲ್ಲಿಕಾರ್ಜುನ ಖರ್ಗೆಯವರು ನಿನ್ನೆ ರಾಹುಲ್‌ಗಾಂಧಿಯವರನ್ನು ಭೇಟಿ ಮಾಡಿ ರಾಜ್ಯ ರಾಜಕೀಯ ವಿದ್ಯಮಾನಗಳು, ಅಧಿಕಾರ ಹಂಚಿಕೆಯ ಕಗ್ಗಂಟು, ಬಣ ರಾಜಕೀಯ, ರಹಸ್ಯ ಸಭೆ, ಸಮಾಲೋಚನೆಗಳು, ಶಾಸಕರ ದೆಹಲಿ ಯಾತ್ರೆ ಎಲ್ಲವನ್ನು ಅವರ ಗಮನಕ್ಕೆ ತಂದು ಗೊಂದಲ ನಿವಾರಿಸುವ ಅಗತ್ಯತೆಯನ್ನು ಪ್ರತಿಪಾದಿಸಿದ್ದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ನೀಡಿದ ವಸ್ತುಸ್ಥಿತಿ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್ ಇಂದು ಸಂಜೆಯ ನಂತರ ದೆಹಲಿಯಲ್ಲಿ ಕಾಂಗ್ರೆಸ್‌ನ ಪ್ರಮುಖ ನಾಯಕರುಗಳ ಸಭೆ ಕರೆದಿದ್ದು, ಈ ಸಭೆಯಲ್ಲಿ ರಾಜ್ಯ ಕಾಂಗ್ರೆಸ್‌ನ ಅಧಿಕಾರ ಹಂಚಿಕೆಯ ಕಗ್ಗಂಟ್ಟಿಗೆ ಪರಿಹಾರ ಸೂತ್ರ ರೂಪಿಸುವ ಬಗ್ಗೆ ಚರ್ಚೆ ನಡೆಸಿ ಒಂದು ತೀರ್ಮಾನ ಕೈಗೊಳ್ಳುವರು ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಬಿಹಾರ ವಿಧಾನಸಭಾ ಚುನಾವಣೆಯ ಸೋಲಿನ ಪರಾಮರ್ಶೆ ಸಂಬಂಧ ರಾಹುಲ್‌ಗಾಂಧಿ ನೇತೃತ್ವದಲ್ಲಿ ದೆಹಲಿಯಲ್ಲಿಂದು ಮಧ್ಯಾಹ್ನ ೩ ಗಂಟೆಗೆ ಕಾಂಗ್ರೆಸ್‌ನ ಪ್ರಮುಖ ನಾಯಕರುಗಳ ಸಭೆ ನಡೆಯಲಿದ್ದು, ಈ ಸಭೆಯ ಬಳಿಕ ರಾಜ್ಯ ಕಾಂಗ್ರೆಸ್‌ನ ಗೊಂದಲಗಳ ನಿವಾರಣೆಗೆ ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿ, ಎಐಸಿಸಿ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್‌ಸಿಂಗ್ ಸುರ್ಜೇವಾಲಾ ರವರ ಜತೆ ಸಮಾಲೋಚನೆ ನಡೆಸಿ ಪರಿಹಾರ ಸೂತ್ರವನ್ನು ರೂಪಿಸುವರು ಎಂದು ಹೇಳಲಾಗಿದೆ.
ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿಯವರ ಸಭೆಗೂ ಮುನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಜತೆ ಸಭೆ ನಡೆಸುವರು. ಬಳಿಕ ಈ ಮೂವರು ನಾಯಕರುಗಳು ರಾಹುಲ್‌ಗಾಂಧಿಯವರೊಂದಿಗೆ ಚರ್ಚಿಸಿ ರಾಜ್ಯ ಕಾಂಗ್ರೆಸ್‌ನ ಅಧಿಕಾರ ಹಂಚಿಕೆ ಕಗ್ಗಂಟ್ಟಿಗೆ ಪರಿಹಾರ ಸೂತ್ರವನ್ನು ನಿರ್ಧರಿಸುವರು.
ಕಾಂಗ್ರೆಸ್ ಹೈಕಮಾಂಡ್ ಇಂದೇ ಅಧಿಕಾರ ಹಂಚಿಕೆಯ ಕಗ್ಗಂಟ್ಟಿಗೆ ಪರಿಹಾರ ಕಂಡುಕೊಂಡರೂ ಅದನ್ನು ಬಹಿರಂಗಗೊಳಿಸದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ದೆಹಲಿ ಕರೆಸಿಕೊಂಡು ಇವರಿಬ್ಬರ ಜತೆಯೂ ಸಭೆ ನಡೆಸಿ ಅಂತಿಮವಾಗಿ ಪರಿಹಾರ ಸೂತ್ರವನ್ನು ಪ್ರಕಟಿಸಲಿದೆ ಎಂದು ಹೇಳಲಾಗಿದೆ.
ಇಂದಿನ ಸಭೆಯ ನಂತರ ನ. ೨೯ ರಂದು ಸಿಎಂ ಮತ್ತು ಡಿಸಿಎಂ ರವರನ್ನು ದೆಹಲಿಗೆ ಕರೆಸಿ ಅವರ ಸಮ್ಮುಖದಲ್ಲೇ ಎಲ್ಲವನ್ನು ಇತ್ಯರ್ಥಪಡಿಸುವರು.
ಅಹಿಂದ ನಾಯಕರ ಸಭೆ
ರಾಜ್ಯ ಕಾಂಗ್ರೆಸ್ ಅಧಿಕಾರ ಹಂಚಿಕೆಯ ಕಗ್ಗಂಟ್ಟಿಗೆ ಪಕ್ಷದ ಹೈಕಮಾಂಡ್ ಮದ್ದು ಅರೆಯಲು ಮುಂದಾಗುತ್ತಿದ್ದಂತೆಯೇ ಸಿದ್ದರಾಮಯ್ಯ ಬಣದ ಅಹಿಂದ ನಾಯಕರು ಹೈಕಮಾಂಡ್ ಮೇಲೆ ಒತ್ತಡ ಹೇರಲು ರಹಸ್ಯ ಸಭೆಗಳನ್ನು ಮುಂದುವರೆಸಿದ್ದು, ಸಚಿವ ಸತೀಶ್ ಜಾರಕಿಹೊಳಿ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಇವರಿಬ್ಬರು ಇಂದು ಚರ್ಚೆ ನಡೆಸಿದರು.
ಇವರಿಬ್ಬರು ಚರ್ಚೆ ನಡೆಸುತ್ತಿರುವಾಗಲೇ ಸಚಿವ ಮಹದೇವಪ್ಪರವರು ಸತೀಶ್ ನಿವಾಸಕ್ಕೆ ಆಗಮಿಸಿ ಸಭೆಯಲ್ಲಿ ಭಾಗಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೇ ಮುಂದುವರೆಸುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರುವ ಸಂಬಂಧ ಈ ನಾಯಕರುಗಳು ಚರ್ಚೆ ನಡೆಸಿದರು ಎಂದು ಹೇಳಲಾಗಿದೆ.
ದೆಹಲಿಗೆ ತೆರಳಿದ ಖರ್ಗೆ
ನಿನ್ನೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಇಂದು ಬೆಳಿಗ್ಗೆ ದೆಹಲಿಗೆ ತೆರಳಿದರು.
ಮಧ್ಯಾಹ್ನ ೧ರ ಸುಮಾರಿಗೆ ದೆಹಲಿಗೆ ಆಗಮಿಸುವ ಖರ್ಗೆಯವರು ಸಂಜೆ ರಾಹುಲ್‌ಗಾಂಧಿಯವರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳುವರು.
ಈ ಸಭೆಯಲ್ಲಿ ರಾಜ್ಯ ಕಾಂಗ್ರೆಸ್‌ನ ಅಧಿಕಾರ ಹಂಚಿಕೆಯ ಗೊಂದಲಗಳಿಗೆ ತೆರೆ ಎಳೆಯುವ ಬಗ್ಗೆ ಚರ್ಚೆಗಳು ನಡೆಯಲಿವೆ.



























