Home ಜಿಲ್ಲೆ ಕಲಬುರಗಿ ರಸಗೊಬ್ಬರ ಡೀಲರ್-ರಿಟೇಲರ್‍ಗಳೊಂದಿಗೆ ಸಭೆಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಪರವಾನಿಗೆ ರದ್ದು: ಜಿಲ್ಲಾಧಿಕಾರಿ

ರಸಗೊಬ್ಬರ ಡೀಲರ್-ರಿಟೇಲರ್‍ಗಳೊಂದಿಗೆ ಸಭೆಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಪರವಾನಿಗೆ ರದ್ದು: ಜಿಲ್ಲಾಧಿಕಾರಿ

ಕಲಬುರಗಿ,ಜೂ.9: ನಿಗದಿತ ಎಂ.ಆರ್.ಪಿ. ದರಕ್ಕಿಂತ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡಿದಲ್ಲಿ ಅಂತಹ ರಸಗೊಬ್ಬರ ಅಂಗಡಿಗಳ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಲ್ಲದೆ ಅಂತಹ ಕೃಷಿ ಪರಿಕರ ಮಾರಾಟ ಅಂಗಡಿಗಳ ಪರವಾನಿಗೆ ಸಹ ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದರು.
ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ರಸಗೊಬ್ಬರ ಅಂಗಡಿಗಳ ಡೀಲರ್-ರಿಟೇಲರ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ತುರ್ತು ಸಭೆ ಕರೆದ ಅವರು ಅಲ್ಲಲ್ಲಿ ರಸಗೊಬ್ಬರ ಹೆಚ್ಚಿನ ಮಾರಾಟಕ್ಕೆ ಮಾಡಲಾಗುತ್ತಿದೆ ಎಂದು ರೈತರಿಂದ ದೂರು ಬರುತ್ತಿವೆ, ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಡಿ.ಎ.ಪಿ. 50 ಕೆ.ಜಿ. ಬ್ಯಾಗಿಗೆ 1,350 ರೂ., ಯೂರಿಯಾ 45 ಕೆ.ಜಿ. ಬ್ಯಾಗಿಗೆ 266 ರೂ. ಎಂ.ಆರ್.ಪಿ. ದರವಿದ್ದು, ಇದಕ್ಕಿಂತ ಒಂದು ರೂಪಾಯಿ ಸಹ ಅನ್ನದಾತರ ಬಳಿ ಅಂಗಡಿಯವರು ಪಡೆದರೆ ಹುಷಾರ್ ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ರಸಗೊಬ್ಬರ ಹೆಚ್ಚಿನ ದರಕ್ಕೆ ಮಾರಾಟದ ಹಾವಳಿ ತಡೆಯಲು ಕೂಡಲೆ ತಾಲೂಕಿಗೊಂದು ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಬೇಕು. ಎ.ಸಿ., ತಹಶೀಲ್ದಾರ, ಕೃಷಿ, ತೋಟಗಾರಿಕೆ ಎಲ್ಲಾ ಅಧಿಕಾರಿಗಳು ಹೋಬಳಿ, ತಾಲೂಕಿಗೆ ಹೋಗಿ ಪ್ರತಿನಿತ್ಯ ಸುಮಾರು 25 ರಸಗೊಬ್ಬರ ಅಂಗಡಿಗೆ ಭೇಟಿ ನೀಡಿ ತಪಾಸಣೆ ಮಾಡಬೇಕು. ಪಿ.ಓ.ಎಸ್, ದಾಸ್ತಾನು ಪರಿಶೀಲಿಸಬೇಕು ಎಂದರು.
ರಸಗೊಬ್ಬರ ಸಮಸ್ಯೆ ಕುರಿತು ರೈತರ ಅಹವಾಲು ಆಲಿಸಲು ಕೂಡಲೆ ಸಹಾಯವಾಣಿ ಸ್ಥಾಪಿಸಬೇಕು. ಪ್ರಸ್ತುತ ಬೇಡಿಕೆ ಅನುಗುಣವಾಗಿ ಡಿ.ಎ.ಪಿ. ಸೇರಿ ಇತರೆ ರಸಗೊಬ್ಬರಗಳನ್ನು ತಾಲೂಕಿಗೆ ಮರು ಹಂಚಿಕೆ ಮಾಡಬೇಕು. ಪ್ರತಿನಿತ್ಯ ಪಿ.ಓ.ಎಸ್., ಸ್ಟಾಕ್ ಅಪಡೇಟ್ ಮಾಡುವಂತೆ ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಮತ್ತು ಪ್ರತಿ ದಿನದ ವರದಿ ತಮಗೆ ಸಲ್ಲಿಸುವಂತೆ ಜಂಟಿ ಕೃಷಿ ನಿದೇಶಕರಿಗೆ ಡಿ.ಸಿ. ಸೂಚಿಸಿದರು.
ರಿಟೇಲರ್‍ಗಳು ರೈತರಿಗೆ ಹೊಸ ತಂತ್ರಜ್ಞಾನದ ನ್ಯಾನೋ ಯೂರಿಯಾ, ನ್ಯಾನೋ ಡಿ.ಎ.ಪಿ. ರಸಗೊಬ್ಬರ ತೆಗೆದುಕೊಂಡರೆ ಮಾತ್ರ ಡಿ.ಎ.ಪಿ. ನೀಡುತ್ತೇವೆ ಎನ್ನುವುದು ಸಮಂಜಸವಲ್ಲ. ಈ ರೀತಿ ರೈತರಿಗೆ ಯಾವುದೇ ಅಂಗಡಿವರು ಇಂತಹದೆ ರಸಗೊಬ್ಬರ ಪಡೆಯುವಂತೆ ಒತ್ತಾಯ ಮಾಡುವಂತಿಲ್ಲ. ರೈತರಿಗೆ ನೂತನ ತಂತ್ರಜ್ಞಾನದ ರಸಗೊಬ್ಬರ ಕುರಿತು ಸಲಹೆ ಮಾತ್ರ ನೀಡಬಹುದಾಗಿದೆ ಎಂದ ಅವರು, ಕೊನೆಗೆ ರೈತನ ಇಚ್ಚೆಯಂತೆ ಗೊಬ್ಬರ ಪೂರೈಸಿ ಎಂದರಲದ್ಲೆ ಜಿಲ್ಲಾಡಳಿತ, ಕೃಷಿ ಇಲಾಖೆಯ ನಿರ್ದೇಶನ ಪಾಲಿಸುವ ಮೂಲಕ ಅನ್ನದಾತನ ಒಳಿತಿಗಾಗಿ ಅಗತ್ಯ ಸಹಕಾರ ನೀಡುವಂತೆಯೂ ರಿಟೇಲರ್‍ಗಳಿಗೆ ಮನವಿ ಮಾಡಿಕೊಂಡರು.
ಚಿತ್ತಾಪುರ ಪಟ್ಟಣದಲ್ಲಿ ರಸಗೊಬ್ಬರ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಪತ್ರಿಕೆಯಲ್ಲಿ ಸುದ್ದಿ ಬಂದಿದೆ ಏನು ಮಾಡಿದ್ದೀರಿ? ಎಂದು ಸಹಾಯಕ ಕೃಷಿ ನಿರ್ದೇಶಕ ಸಂಜೀವ ಕುಮಾರ ಅವರನ್ನು ಕೇಳಿದ ಜಿಲ್ಲಾಧಿಕಾರಿಗಳು, ಕೂಡಲೆ ಸತ್ಯಾಸತ್ಯತೆ ಪರಿಶೀಲಿಸಿ ಅಂಗಡಿ ಮೇಲೆ ಇಂದೇ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಹಳ್ಳಿಗೆ ಹೋಗಿ,ರೈತರ ಸಮಸ್ಯೆ ಆಲಿಸಿ:
ರಸಗೊಬ್ಬರ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತದೆ ಎಂದು ಯಾವುದೇ ಮೂಲೆದಿಂದ ರೈತರೊಬ್ಬರ ದೂರು ಹೊತ್ತಿಕೊಂಡು ಡಿ.ಸಿ. ಕಚೇರಿಗೆ ಬರಬೇಕಾ? ನಿಮಗೆ ಮಾಹಿತಿ ಇಲ್ವಾ ಎಂದು ತೀವ್ರ ಅಸಮಾಧಾನದಿಂದಲೆ ಕೃಷಿ ಅಧಿಕಾರಿಗಳನ್ನು ಪ್ರಶ್ನಿಸಿದ ಡಿ.ಸಿ. ಅವರು ಮತ್ತೆ ರೈತರಿಂದ ದೂರು ಬಂದಲ್ಲಿ ಡೀಲರ್-ರಿಟೇಲರ್ ಜೊತೆ ಅಧಿಕಾರಿಗಳ ಮೇಲೆಯೂ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಧಿಕಾರಿಗಳು ಇನ್ಮುಂದೆ ಕಚೇರಿಯಲ್ಲಿ ಕೂಡದೆ ಹಳ್ಳಿ, ಹೋಬಳಿಗೆ ಭೇಟಿ ನೀಡಬೇಕು. ನೀವು ಕ್ಷೇತ್ರಕ್ಕೆ ಭೇಟಿ ನೀಡಿದರೆ ಈ ಸಮಸ್ಯೆ ತಲೆದೋರದು. ಕಚೇರಿಯಲ್ಲಿ ಕುಳಿತುಕೊಳ್ಳದೆ ರೈತರ ಬಳಿಗೆ ಹೋಗಿ ಅವರ ಅಹವಾಲು ಆಲಿಸಬೇಕು. ಡೀಲರ್, ರಿಟೇಲರ್ ಗಳು ಸಮಸ್ಯೆ ಅನುಭವಿಸುತ್ತಿದಲ್ಲಿ ಅದರ ನಿವಾರಣೆಗೂ ಪ್ರಯತ್ನಿಸಬೇಕು. ಪ್ರತಿನಿತ್ಯ ಭೇಟಿ, ತಪಾಸಣೆ ಕುರಿತು ಜಿಯೋ ಟ್ಯಾಗ್ ಫೆÇೀಟೊ, ವರದಿ ಸಲ್ಲಿಸಬೇಕು ಎಂದೂ ಕೃಷಿ ಅಧಿಕಾರಿಗಳಿಗೆ ಡಿ.ಸಿ. ಖಡಕ್ ಸೂಚನೆ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 733 ಡೀಲರ್ ಗಳಿದ್ದು, ಇದರಲ್ಲಿ 81 ಹೋಲಸೇಲ್ ಡೀಲರ್ ಮತ್ತು 540 ರಿಟೇಲರ್ ಮಾತ್ರ ಚಾಲ್ತಿಯಲ್ಲಿದ್ದಾರೆ. ಪ್ರಸ್ತುತ ಜಿಲ್ಲೆಯ ಅವಿಭಜಿತ ಏಳು ತಾಲೂಕುಗಳ ರಿಟೇಲ್ ಶಾಪ್‍ಗಳಲ್ಲಿ ವಿಶೇಷವಾಗಿ 2,143 ಮೆಟ್ರಿಕ್ ಟನ್ ಡಿ.ಎ.ಪಿ. 6,421 ಮೆಟ್ರಿಕ್ ಟನ್ ಯೂರಿಯಾ ಲಭ್ಯವಿದೆ. ಅದೇ ರೀತಿ ಅಫಜಲಪೂರ, ಚಿತ್ತಾಪುರ, ಜೇವರ್ಗಿ, ಕಲಬುರಗಿ ತಾಲೂಕಿನ ತಾಲೂಕಾ ಡೀಲರ್ ಬಳಿ 2,999 ಮೆಟ್ರಿಕ್ ಟನ್ ಡಿ.ಎ.ಪಿ, 3,011 ಮೆಟ್ರಿಕ ಟನ್ ಯೂರಿಯಾ ದಾಸ್ತಾನು ಲಭ್ಯವಿದ್ದು, ಜಿಲ್ಲೆಯಲ್ಲಿ ರಸಗೊಬ್ಬರದ ಯಾವುದೇ ಕೊರತೆ ಇಲ್ಲ. ಕಳೆದ 15 ದಿನದಲ್ಲಿ 117 ಕಡೆ ಕೃಷಿ ಅಧಿಕಾರಿಗಳ ತಂಡ ರಸಗೊಬ್ಬರ ಅಂಗಡಿಗಳ ಮೇಲೆ ದಾಳಿ ಮಾಡಲಾಗಿದ್ದು, ಸುಮಾರು 51 ಅಂಗಡಿಗಳು ನಿಯಮ ಉಲ್ಲಂಘಿಸಿ ಮಾರಾಟ ಮಾಡುತ್ತಿರುವುದು ಕಂಡುಬಂದಿರುವುದರಿಂದ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೆ 66.27 ಲಕ್ಷ ರೂ. ಮೊತ್ತದ ರಸಗೊಬ್ಬರ ಮಾರಾಟ ಮಾಡದಂತೆ ತಡೆ ಆದೇಶ ಸಹ ನೀಡಲಾಗಿದೆ ಎಂದು ಸಭೆಗೆ ತಿಳಿಸಿದರು.
ಪೆÇ್ರಬೇಷನರ್ ಐ.ಎ.ಎಸ್. ಅಧಿಕಾರಿ ಶಿಖರ್ ಮೋಘಾ, ಕೃಷಿ ಉಪನಿರ್ದೇಶಕಿ ಅನುಸೂಯಾ ಹೂಗಾರ, ಬಾಲರಾಜ ಬಿರಾದಾರ ಸೇರಿದಂತೆ ತಾಲೂಕಿನ ಸಹಾಯಕ ನಿರ್ದೇಶಕರು, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು, ರಸಗೊಬ್ಬರ ವಿತರಕಾರದ ಡೀಲರ್, ರಿಟೇಲರ್, ರಸಗೊಬ್ಬರ ಕಂಪನಿ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.