Home ಜಿಲ್ಲೆ ಬೆಂಗಳೂರು ಮನಸ್ಸಿನ ಒತ್ತಡಕ್ಕೆ ಧ್ಯಾನವೇ ಮದ್ದು

ಮನಸ್ಸಿನ ಒತ್ತಡಕ್ಕೆ ಧ್ಯಾನವೇ ಮದ್ದು

ವಿಜಯಪುರ.ಮೇ೨೭: ಪ್ರಸ್ತುತ ಬದುಕಿನಲ್ಲಿ ಮನುಷ್ಯನನ್ನು ಕಾಡುತ್ತಿರುವ ಒತ್ತಡ, ಉದ್ವೇಗ ಮತ್ತು ಆತಂಕಗಳ ನಿವಾರಣೆಗೆ ಧ್ಯಾನ ಹಾಗೂ ಯೋಗಾಭ್ಯಾಸ ಅತ್ಯಂತ ಸಹಕಾರಿಯಾಗಿದೆ ಎಂದು ಶ್ರೀ ಯೋಗಿ ನಾರೇಯಣ ಮಠದ ಪ್ರವಚನಕಾರರಾದ ಶ್ರೀ ಆನಂದ ಸ್ವಾಮಿಗಳು ಅಭಿಪ್ರಾಯಪಟ್ಟರು.


ಪಟ್ಟಣದ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಶ್ರೀರಂಗ ಕ್ಷೇತ್ರ ರಂಗನಾಥ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ಕೃಷ್ಣ ಸತ್ಸಂಗ ಯತೀಂದ್ರ ಸೇವಾ ಟ್ರಸ್ಟ್ ಸಹಕಾರದೊಂದಿಗೆ, ಶ್ರೀರಂಗ ಗೀತಾ ಸತ್ಸಂಗ ಸೇವಾ ಬಳಗದ ವತಿಯಿಂದ ಆಯೋಜಿಸಿದ್ದ ೩ನೇ ಕಾರ್ಯಕ್ರಮ ಹಾಗೂ ಸದ್ಗುರು ಶ್ರೀ ಕೈವಾರ ತಾತಯ್ಯನವರ ೨೮ನೇ ಪಾದುಕಾ ಪೂಜಾ ಮಹೋತ್ಸವದಲ್ಲಿ ಅವರು ಪ್ರವಚನ ನೀಡಿದರು.


ಕಾರ್ಯಕ್ರಮದಲ್ಲಿ ’ಮಾನಸಿಕ ಯೋಗ’ ಹಾಗೂ ’ಮಾನಸ ಪೂಜೆ’ಯ ಬಗ್ಗೆ ಭಕ್ತಾದಿಗಳಿಗೆ ವಿಶೇಷ ತರಬೇತಿ ಮತ್ತು ಮಾಹಿತಿ ನೀಡಿದ ಆನಂದ ಸ್ವಾಮಿಗಳು, “ನಿಯಮಿತವಾಗಿ ಉಸಿರಾಟದ ಮೇಲೆ ನಿಯಂತ್ರಣ ಸಾಧಿಸುವುದರಿಂದ ದೇಹದ ಆರೋಗ್ಯದ ಸಮತೋಲನ ಕಾಯ್ದುಕೊಳ್ಳಬಹುದು. ಸದ್ಗುರು ಕೈವಾರ ತಾತಯ್ಯನವರು ಜನಸಾಮಾನ್ಯರಿಗೂ ಅರ್ಥವಾಗುವಂತಹ ಶ್ರೇಷ್ಠ ಮಾನಸ ಪೂಜೆಯ ವಿಧಾನವನ್ನು ತಿಳಿಸಿಕೊಟ್ಟಿದ್ದಾರೆ” ಎಂದರು.


“ಮನಸ್ಸಿನಲ್ಲಿಯೇ ದೇವರ ಅಥವಾ ಗುರುಗಳ ರೂಪವನ್ನು ಕಲ್ಪಿಸಿಕೊಂಡು, ಎಲ್ಲ ಉಪಚಾರಗಳನ್ನು ಅರ್ಪಿಸುವುದೇ ಮಾನಸ ಪೂಜೆ. ನಾವು ನಿತ್ಯ ಮಾಡುವ ಪ್ರತ್ಯಕ್ಷ (ಸ್ಥೂಲ) ಪೂಜೆಯ ಸಂದರ್ಭದಲ್ಲಿ ಮನಸ್ಸು ಬೇರೆಡೆ ಭ್ರಮಿಸುವ ಸಾಧ್ಯತೆ ಇರುತ್ತದೆ. ಆದರೆ ಸೂಕ್ಷ್ಮ ಸ್ತರದ ಮಾನಸ ಪೂಜೆಯಿಂದ ಮನಸ್ಸು ಸ್ಥಿರವಾಗಿ, ಏಕಾಗ್ರತೆ ಸಿದ್ಧಿಸುತ್ತದೆ. ಇದಕ್ಕೆ ಸ್ಥಳ, ಕಾಲದ ಬಂಧನವಿಲ್ಲ. ಉದ್ಯೋಗ, ವ್ಯವಸಾಯ ಅಥವಾ ಪ್ರವಾಸದ ಕಾರಣದಿಂದ ಪೂಜೆ ಮಾಡಲು ಸಮಯ ಸಿಗದವರು ಎಲ್ಲಿದ್ದಲ್ಲೇ ಮಾನಸ ಪೂಜೆ ಮಾಡಬಹುದು,” ಎಂದು ಅವರು ವಿವರಿಸಿದರು.


ಯೋಗಾಭ್ಯಾಸದಿಂದ ಮನಸ್ಸಿಗೆ ಶಾಂತಿ: ಪುರಸಭಾಧ್ಯಕ್ಷೆ ಭವ್ಯ ಮಹೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪುರಸಭಾ ಅಧ್ಯಕ್ಷರಾದ ಭವ್ಯ ಮಹೇಶ್ ಅವರು, “ಯೋಗಾಭ್ಯಾಸ ಮಾಡುವುದರಿಂದ ಮನಸ್ಸಿಗೆ ಅಪಾರ ಶಾಂತಿ ಮತ್ತು ನೆಮ್ಮದಿ ದೊರೆಯುತ್ತದೆ. ನಾನು ಸಹ ಹಿಂದೆ ಯೋಗ ಮಾಡುತ್ತಿದ್ದೆ. ಇಂದಿನ ಸತ್ಸಂಗದಲ್ಲಿ ಭಾಗವಹಿಸಿದ ನಂತರ ನನಗೆ ಮತ್ತೆ ಯೋಗಾಭ್ಯಾಸವನ್ನು ನಿರಂತರವಾಗಿ ಮುಂದುವರಿಸಲು ಹೊಸ ಉತ್ಸಾಹ ಬಂದಿದೆ” ಎಂದು ಹರ್ಷ ವ್ಯಕ್ತಪಡಿಸಿದರು.


ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ರಮೇಶ್ ಸ್ವಾಮಿಗಳು ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಎಂ.ವಿ. ನಾಯ್ಡು ಹಾಗೂ ತಬಲಾ ವಾದಕ ಅನಿಲ್ ಕುಮಾರ್ ಅವರ ವಾದ್ಯ ಸಹಕಾರದೊಂದಿಗೆ ಸಿ. ಅಶ್ವತ್ ಗುರೂಜಿ ಬಳಗ, ಶ್ರೀ ವೇಣುಗೋಪಾಲಸ್ವಾಮಿ ಭಜನೆ ಬಳಗ ಹಾಗೂ ಮಹಾತ್ಮಾಂಜಿನೇಯ ಗಂಟಸಾಲ ಲಕ್ಷ್ಮಿಪತಿ ನರಸಿಂಹಪ್ಪ ಅವರು ಶ್ರೀರಾಮನ ನಾಮಸ್ಮರಣೆಯ ಸುಶ್ರಾವ್ಯ ಭಜನೆ ನಡೆಸಿ ಭಕ್ತರನ್ನು ಮಂತ್ರಮುಗ್ಧರಾಗಿಸಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪುರಸಭಾ ಸದಸ್ಯರಾದ ರಾಧಮ್ಮ ಪ್ರಕಾಶ್, ಧಾರ್ಮಿಕ ಮುಖಂಡರಾದ ಎಂ. ಕೇಶವಪ್ಪ, ಸಮಾಜ ಸೇವಕರಾದ ಪಿ. ಪ್ರಕಾಶ್, ದೇವಾಲಯದ ಪ್ರಧಾನ ಅರ್ಚಕರಾದ ರಘು, ಪುರಸಭೆಯ ಮಾಜಿ ಉಪಾಧ್ಯಕ್ಷರಾದ ಎನ್. ನಾರಾಯಣಸ್ವಾಮಿ, ರಾಮದಾಸ್, ಅನಿತಾ ರಾಮದಾಸ್, ರತ್ನಮ್ಮ ವೆಂಕಟೇಶಪ್ಪ, ವಿ.ಎನ್. ವೆಂಕಟೇಶ್ ಹಾಗೂ ಬಳಗದ ಪದಾಧಿಕಾರಿಗಳು ಮತ್ತು ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.