
ಕಲಬುರಗಿ,ಡಿ.6-ಸ್ಟಾಕ್ ಮಾರ್ಕೆಟ್‍ನಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸಬಹುದು ಎಂದು ನಂಬಿಸಿ ಮೆಡಿಕಲ್ ಶಾಪ್ ಮಾಲೀಕ ಮತ್ತು ಅವರ ಸಹೋದರನಿಗೆ 1.15 ಕೋಟಿ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ನ್ಯೂ ರಾಘವೇಂದ್ರ ಕಾಲೋನಿಯ ಸಿದ್ದಿ ಹನುಮಾನ ಮೆಡಿಕಲ್ ಶಾಪ್ ಮಾಲೀಕ ಅನಿಲದಾಸ ದೇಶಮುಖ ಮತ್ತು ಅವರ ಸಹೋದರ ಪ್ರಮೋದ ದೇಶಮುಖ ವಂಚನೆಗೆ ಒಳಗಾಗಿದ್ದು, ಅವರು ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಅನುಶ್ರೀ ಷಾ ಎಂಬುವವರು ಸ್ಟಾಕ್ ಮಾರ್ಕೆಟ್‍ನಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸಬಹುದು ಎಂದು ನಂಬಿಸಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 1,15,38,400 ರೂ.ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.































