
ಯಾದಗಿರಿ : ಬೆಂಗಳೂರು ಪಾದ್ರಿಗಳ ಸಮಿತಿ (ಬಿಆರ್ಸಿ) ವ್ಯಾಪ್ತಿಯಲ್ಲಿ ಹಿಂದಿನ ಅವಧಿಯಲ್ಲಿ ಎದುರಾಗಿದ್ದ ಆಡಳಿತಾತ್ಮಕ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಲಾಗಿದ್ದು, ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಯಾದಗಿರಿ ಜಿಲ್ಲಾ ಅಧೀಕ್ಷಕ ರೆವ. ಎಸ್. ನಂದ ಕುಮಾರ್ ತಿಳಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2016ರಿಂದ ಜನವರಿ 2025ರವರೆಗೆ ಬಿಆರ್ಸಿ ವ್ಯಾಪ್ತಿಯಲ್ಲಿ ಪಾಸ್ಟರ್ಗಳ ವೇತನ ಮತ್ತು ಪಿಂಚಣಿ ಪಾವತಿ, ಸಂಸ್ಥೆಗಳ ಆಸ್ತಿ ಹಾಗೂ ಶಾಲೆ-ಹಾಸ್ಟೆಲ್ಗಳ ನಿರ್ವಹಣೆಗೆ ಸಂಬಂಧಿಸಿದ ಹಲವು ವಿಚಾರಗಳು ಗಮನಕ್ಕೆ ಬಂದಿವೆ ಎಂದರು.
2018ರಿಂದ ಹೋಮ್ ಮಿಷನ್ ಪಾಸ್ಟರ್ಗಳ ವೇತನ ಪಾವತಿಯಲ್ಲಿ ಸಮಸ್ಯೆಗಳಿದ್ದವು. ನಿವೃತ್ತ ಪಾಸ್ಟರ್ಗಳು ಹಾಗೂ ನಿಧನರಾದ ಪಾಸ್ಟರ್ಗಳ ಕುಟುಂಬದವರಿಗೆ 2021ರಿಂದ ಪಿಂಚಣಿ ಪಾವತಿಯಲ್ಲಿ ವಿಳಂಬವಾಗಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಈ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಬಿಆರ್ಸಿ ಮತ್ತು ಬಿಎಂಇಎಸ್ಗೆ ಸೇರಿದ ಕೆಲವು ಸಂಸ್ಥೆಗಳ ಆಸ್ತಿಗಳು ಹಾಗೂ ಶಾಲಾ ಕಟ್ಟಡಗಳ ನಿರ್ವಹಣೆಯಲ್ಲಿಯೂ ಸಮಸ್ಯೆಗಳಿದ್ದವು. ಬಾಲಕಿಯರ ಶಾಲೆಗಳು ಮತ್ತು ಕಾಲೇಜುಗಳ ಮೂಲಸೌಕರ್ಯ, ಹಾಸ್ಟೆಲ್ಗಳ ನಿರ್ವಹಣೆ ಹಾಗೂ ಕೆಲವು ಹಾಸ್ಟೆಲ್ಗಳ ಮುಚ್ಚುವಿಕೆ ಸೇರಿದಂತೆ ವಿವಿಧ ವಿಚಾರಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.
ಬಿಆರ್ಸಿ ಹಾಗೂ ಅದರ ಅಧೀನದ ಸಂಸ್ಥೆಗಳಿಗೆ ಸಂಬಂಧಿಸಿದ ಕೆಲವು ನ್ಯಾಯಾಲಯದ ಪ್ರಕರಣಗಳಲ್ಲಿಯೂ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಕರಣಗಳಿಗೆ ಸಂಬಂಧಿಸಿದಂತೆ ವಕೀಲರ ನೇಮಕಾತಿ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಫೆಬ್ರವರಿ 2025ರಿಂದ ಚರ್ಚ್ನ ಆಡಳಿತ ಮತ್ತು ಸೇವಾ ಕಾರ್ಯಗಳ ಪುನರ್ಬಲವರ್ಧನೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೋಮ್ ಮಿಷನ್ ಪಾಸ್ಟರ್ಗಳ ಬಾಕಿ ವೇತನ, ಪಾಸ್ಟರ್ಗಳ ಪಿಂಚಣಿ ಹಾಗೂ ಕೋವಿಡ್ ಅವಧಿಯಲ್ಲಿ ಬಾಕಿಯಾಗಿದ್ದ ಕೆಲವು ಸಂಸ್ಥೆಗಳ ಸಿಬ್ಬಂದಿಯ ವೇತನ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್.ನಂದ ಕುಮಾರ್ ಹೇಳಿದರು.ಇನ್ನೂ
ಅಗತ್ಯವಿರುವ ಸಂಸ್ಥೆಗಳಲ್ಲಿ ಅರ್ಹತೆ ಮತ್ತು ನಿಗದಿತ ಮಾನದಂಡಗಳ ಆಧಾರದ ಮೇಲೆ ಸಿಬ್ಬಂದಿಯ ಮರುನೇಮಕಾತಿ ಪ್ರಕ್ರಿಯೆಯನ್ನೂ ಕೈಗೊಳ್ಳಲಾಗಿದೆ. ಕೆಲವು ಸಂಸ್ಥೆಗಳ ಆಸ್ತಿಗಳನ್ನು ಸಂಸ್ಥೆಯ ನಿಯಂತ್ರಣಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ. ಈ ಸಂದರ್ಭದಲ್ಲಿ 13 ಕನ್ವೆಂಟ್ ರಸ್ತೆ, ಪಾಲಿಟೆಕ್ನಿಕ್ ಕಟ್ಟಡ ಹಾಗೂ ರೆನಿಯಸ್ ಸ್ಟ್ರೀಟ್ನ ಆಸ್ತಿಗಳ ವಿಚಾರಗಳನ್ನೂ ಪ್ರಸ್ತಾಪಿಸಲಾಗಿದೆ ಎಂದರು.
‘ಯಾರನ್ನೂ ದೂಷಿಸುವುದು ನಮ್ಮ ಉದ್ದೇಶವಲ್ಲ. ಹಿಂದಿನ ಅವಧಿಯಲ್ಲಿ ಎದುರಾದ ಸಮಸ್ಯೆಗಳನ್ನು ಸರಿಪಡಿಸಿ, ಚರ್ಚ್ನ ಆಡಳಿತವನ್ನು ಬಲಪಡಿಸುವುದು, ನೌಕರರು ಮತ್ತು ಪಾಸ್ಟರ್ಗಳ ಹಕ್ಕುಗಳನ್ನು ಕಾಪಾಡುವುದು, ಸಂಸ್ಥೆಗಳ ಆಸ್ತಿಗಳನ್ನು ಸಂರಕ್ಷಿಸುವುದು ಹಾಗೂ ಸೇವಾ ಕಾರ್ಯಗಳನ್ನು ಮತ್ತಷ್ಟು ಬಲಪಡಿಸುವುದು ನಮ್ಮ ಉದ್ದೇಶ’ ಎಂದು
ಎಸ್. ನಂದ ಕುಮಾರ್ ಜಿಲ್ಲಾ ಮೇಲ್ವಿಚಾರಕರು ತಿಳಿಸಿದರು.























