
ಕಲಬುರಗಿ : ಜೂ.28:ಸರ್ಕಾರಿ ನೌಕರಿ ಪಡೆಯುವುದು, ದೀರ್ಘಕಾಲ ಸೇವೆ ಸಲ್ಲಿಸುವುದೇ ಸಾಧನೆಯಲ್ಲ. ಬದಲಿಗೆ ದೊರೆತ ಹುದ್ದೆಯನ್ನು ಬದ್ಧತೆ, ನಿಷ್ಠೆಯಿಂದ ನಿಭಾಯಿಸುವ ಮೂಲಕ ಹುದ್ದೆಗೆ ನ್ಯಾಯವನ್ನು ಒದಗಿಸಿಕೊಟ್ಟರೆ ಅಂತಹ ಸೇವೆ ನಿಜಕ್ಕೂ ಸಾರ್ಥಕತೆ ಪಡೆಯಲು ಸಾಧ್ಯವಾಗುತ್ತದೆ ಎಂದು ಉಪನ್ಯಾಸಕಿ ರೇಣುಕಾ ಚಿಕ್ಕಮೇಟಿ ಮಾರ್ಮಿಕವಾಗಿ ಹೇಳಿದರು. ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ತಮಗೆ ಜರುಗಿದ ವರ್ಗಾವಣೆ ಬೀಳ್ಕೊಡುಗೆಯಲ್ಲಿ ಸತ್ಕಾರ ಸ್ವೀಕರಿಸಿ, ಅವರು ಮಾತನಾಡುತ್ತಿದ್ದರು. ನಾನು ಗುಡಿ-ಗುಂಡಾರಗಳಲ್ಲಿ ದೇವರನ್ನು ಕಾಣುವುದಿಲ್ಲ. ನನ್ನ ಅನ್ನದಾತ ವಿದ್ಯಾರ್ಥಿ ಬಂಧುಗಳಲ್ಲಿ ದೇವರನ್ನು ಕಾಣುತ್ತೇನೆ. ನಾನು ಇಲ್ಲಿ ಸಲ್ಲಿಸಿರುವ ಸೇವೆ ಆತ್ಮತೃಪ್ತಿ ತಂದಿದೆ. ನನ್ನ ವಿದ್ಯಾರ್ಥಿಗಳು ಉನ್ನತವಾದ ಸಾಧನೆಯನ್ನು ಮಾಡಿ, ಕಾಲೇಜಿನ ಕೀರ್ತಿಯನ್ನು ತರಬೇಕು. ಕಾಲೇಜಿನ ಎಲ್ಲಾ ಸಿಬ್ಬಂದಿಗಳ ಸಹಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಶಿಕ್ಷಕರು ತಮ್ಮ ವೈಯಕ್ತಿಕ ಕಷ್ಟಗಳು ಏನೇ ಇರಲಿ, ಎಂದಿಗೂ ಕೂಡಾ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬೋಧನೆ ಮಾಡಿ, ಅವರ ಬದುಕನ್ನು ಕಟ್ಟಿಕೊಟ್ಟಿದ್ದೆಯಾದರೆ, ಖಂಡಿತವಾಗಿಯೂ ವಿದ್ಯಾರ್ಥಿಗಳು ಅಂತಹ ಶಿಕ್ಷಕರನ್ನು ಎಂದಿಗೂ ಕೂಡಾ ಮರೆಯಲಾರರು ಎಂದು ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು. ಪ್ರಾಚಾರ್ಯ ರವೀಂದ್ರಕುಮಾರ ಸಿ. ಬಟಗೇರಿ, ಉಪನ್ಯಾಸಕರಾದ ಮಲ್ಲಿಕಾರ್ಜುನ ದೊಡ್ಡಮನಿ, ಎಚ್.ಬಿ.ಪಾಟೀಲ್, ಮಲ್ಲಪ್ಪ ರಂಜಣಗಿ, ದುಂಡಪ್ಪ ಯರಗೋಳ, ಶಿಕ್ಷಣ ಪ್ರೇಮಿ ಬಸವರಾಜ ಹಡಪದ, ಚಂದ್ರು , ಸೇವಕ ಭಾಗಣ್ಣ ಹರನೂರ ಸೇರಿದಂತೆ ಇನ್ನಿತರರು ಇದ್ದರು.