ಕಕ ಭಾಗದಿಂದ ಓಲಂಪಿಕ್ಸ್‍ನಲ್ಲಿ ಸಾಧನೆ ಮಾಡುವಂತಾಗಲಿ

ಕಲಬುರಗಿ:ಜೂ: 23:ವಿಶ್ವ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಓಲಂಪಿಕ್ಸ್‍ನಲ್ಲಿ ವಿವಿಧ ರೀತಿಯ ಕ್ರೀಡೆಗಳು ಏರ್ಪಡಿಸಲಾಗುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ನಮ್ಮ ಕಕ ಭಾಗದ ಕ್ರೀಡಾಪಟುಗಳನ್ನು ಗುರ್ತಿಸಿ, ಅವರಲ್ಲಿ ಆಸಕ್ತಿ ಮೂಡಿಸಿ, ಓಲಂಪಿಕ್ಸ್ ಕ್ರೀಡೆಯ ಬಗ್ಗೆ ಸೂಕ್ತ ಮಾರ್ಗದರ್ಶನ, ತರಬೇತಿಯನ್ನು ನೀಡಿ, ಅದರಲ್ಲಿ ಭಾಗವಹಿಸಿ, ಸಾಧನೆ ಮಾಡುವಂತಾಗಲಿ ಎಂದು ಜಗತ್‍ನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಗುರುಲಿಂಗಯ್ಯ ಮಠ ಆಶಯ ವ್ಯಕ್ತಪಡಿಸಿದರು.
ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿನ ‘ಮುತ್ತಾ ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಜರುಗಿದ ‘ಅಂತಾರಾಷ್ಟ್ರೀಯ ಓಲಂಪಿಕ್ಸ್ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಉಪನ್ಯಾಸಕ ಎಚ್.ಬಿ.ಪಾಟೀಲ್ ಮಾತನಾಡಿ, ಕ್ರೀಡೆಯ ಮೌಲ್ಯಗಳನ್ನು ಜಾಗತಿಕ ಮಟ್ಟದಲ್ಲಿ ಸಾರಲು ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಕ್ರೀಡೆಯಲ್ಲಿ ದೊಡ್ಡದು-ಸಣ್ಣದು ಎಂಬುದಿಲ್ಲ. ಯಾವುದೇ ಕ್ರೀಡೆಯಲ್ಲಿ ಸಾಧನೆ ಮಾಡಬೇಕಾದರೆ, ಅದರ ನೀತಿ-ನಿಯಮಗಳ ಬಗ್ಗೆ ಸರಿಯಾಗಿ ಅರ್ಥಮಾಡಿಕೊಂಡು, ಪೂರ್ವಸಿದ್ಧತೆಯೊಂದಿಗೆ ತೊಡಗಬೇಕು. ದೊರೆತ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸಾಧನೆಯನ್ನು ಮಾಡುವ ಮೂಲಕ ನಮ್ಮ ಭಾಗದ ಕೀರ್ತಿಯನ್ನು ತರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಷಟಲ್ ಬ್ಯಾಟ್ಮಿಂಟನ್ ಸಾಧಕ ಕ್ರೀಡಾಪಟು ರೇಣುಕಾಚಾರ್ಯ ಜಿ.ಮಠ, ಸಂಸ್ಥೆಯ ಮುಖ್ಯಸ್ಥ ಶಿವಕುಮಾರ ಮುತ್ತಾ, ಶಿಕ್ಷಕರಾದ ಆದರ್ಶ ವಡ್ಡನಕೇರಿ, ವಿಶ್ವನಾಥ ನಂದರ್ಗಿ, ಗೌರಿ ಹಿರೇಮಠ ಹಾಗೂ ವಿದ್ಯಾರ್ಥಿಗಳಿದ್ದರು.