
ಕಲಬುರಗಿ:ಡಿ.3: ದಾಸ್ಯ ಎಂಬುದು ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡುವ ಒಂದು ಕೆಚ್ಚ ಪ್ರವೃತ್ತಿಯಾಗಿದ್ದು, ಇದು ವಿಶ್ವದಾದ್ಯಂತ ಸಂಪೂರ್ಣವಾಗಿ ನಿರ್ಮೂಲನೆಯಾಗಬೇಕಾಗಿದೆ. ಗುಲಾಮಗಿರಿಯ ಆಧುನಿಕ ರೂಪಗಳಾದ ಮಾನವ ಕಳ್ಳಸಾಗಣೆ, ಲೈಂಗಿಕ ಶೋಷಣೆ, ಬಾಲಕಾರ್ಮಿಕತೆ, ಬಲವಂತದ ವಿವಾಹ ಮತ್ತು ಸಶಸ್ತ್ರ ಸಂಘರ್ಷಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದನ್ನು ನಿರ್ಮೂಲನೆ ಮಾಡುವುದು. ಗುಲಾಮ ಪದ್ಧತಿ ಅಥವಾ ದಾಸ್ಯ ಮುಕ್ತ ವಿಶ್ವ ನಮ್ಮದಾಗಲಿ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಆಶಯ ವ್ಯಕ್ತಪಡಿಸಿದರು.
ನಗರದ ಶಹಾಬಜಾರ ಮಹಾದೇವ ನಗರದಲ್ಲಿನ ‘ಸ್ವಾತಿ ಪ್ರೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಅಂತಾರಾಷ್ಟ್ರೀಯ ದಾಸ್ಯ ನಿರ್ಮಲನೆ ದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ವ್ಯಕ್ತಿಗಳ ಕಳ್ಳಸಾಗಣೆ ಮತ್ತು ವೇಶ್ಯಾವಾಟಿಕೆ ಶೋಷಣೆ ನಿಗ್ರಹಿಸಲು ಸಮಾವೇಶವನ್ನು ಅಂಗೀಕರಿಸಿದ ದಿನವನ್ನು ಗುರುತಿಸಲು ಈ ದಿನವನ್ನು ಪ್ರಾರಂಭಿಸಲಾಯಿತು. ಇಲ್ಲಿಯವರೆಗೆ ಜಗತ್ತು ಸಾಕಷ್ಟು ಪ್ರಗತಿ ಸಾಧಿಸಿದ್ದರೂ, ಗುಲಾಮಗಿರಿಗೆ ಬಲಿಯಾದವರ ಸಂಖ್ಯೆ ಬಹಳಷ್ಟಿದೆ. ಅಂತರರಾಷ್ಟ್ರೀಯ ಕಾರ್ಮಿಕ ಸಂಸೆಯ ಪ್ರಕಾರ, ವಿಶ್ವಾದ್ಯಂತ 40 ದಶಲಕ್ಷಕ್ಕೂ ಹೆಚ್ಚು ಜನರು ಆಧುನಿಕ ಗುಲಾಮಗಿರಿಗೆ ಬಲಿಯಾಗಿದ್ದಾರೆ.150 ದಶಲಕ್ಷಕ್ಕೂ ಹೆಚ್ಚು ಬಾಲ ಕಾರ್ಮಿಕರಾಗಿದ್ದು, ಪ್ರಪಂಚದಾದ್ಯಂತ ಹತ್ತು ಮಕ್ಕಳಲ್ಲಿ ಒಬ್ಬರಿಗೆ ಇದು ಕಾರಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಮುಖ್ಯ ಶಿಕ್ಷಕಿ ಸಾಲಿ ಸಂಗೀತಾ ಹಾಗೂ ವಿದ್ಯಾರ್ಥಿಗಳಿದ್ದರು.

























