ಸೈದಾಪುರ:ಅ.24:ಮಂದಿರ ನಿರ್ಮಾಣ ಕಾರ್ಯ ಅತ್ಯಂತ ತ್ವರಿತಗತಿಯಲ್ಲಿ ಸಾಗಿ ವರ್ಷದಲ್ಲೇ ಪೂರ್ಣಗೊಳ್ಳುವಂತಾಗಲಿ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ತಿಳಿಸಿದರು.
ಸಮೀಪದ ರಾಚನಹಳ್ಳಿ ಕ್ರಾಸ್ ಬಳಿ ಅಯ್ಯಪ್ಪ ಸ್ವಾಮಿ ಮಂದಿರದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಯ್ಯಪ್ಪ ಸ್ವಾಮಿ ಅತ್ಯಂತ ಕಟ್ಟುನಿಟ್ಟಿನ ದೇವರು, ನಾನು ಸಹ ಒಂದು ವರ್ಷ ಮಾಲಾದಾರಿಯಾಗಿ ಭಗವಂತನ ಆರಾಧನೆ, ನಾಮಸ್ತುತಿ ಮಾಡಿದ್ದೇನೆ. ಮಂದಿರ ನಿರ್ಮಾಣಕ್ಕೆ ಈ ಜಾಗ ಸೂಕ್ತವಾಗಿದೆ ಎಂದು ಕಳೆದ ವರ್ಷವೇ ಸುಮಾರು 20ಲಕ್ಷ ರೂ. ಮಂಜೂರು ಮಾಡಲಾಗಿದೆ. ಈ ವರ್ಷದಲ್ಲಿ ಮತ್ತೇ 25 ಲಕ್ಷ ರೂ.ಗಳ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಮಂದಿರ ನಿರ್ಮಾಣಕ್ಕೆ ಅಂದಾಜು ಒಂದು ಕೋಟಿ ರೂ.ಗಳಷ್ಟು ಅಗತ್ಯವಿದ್ದು ಭಕ್ತರು ಸಹಕಾರ ನೀಡಬೇಕು. ಸರಕಾರದ ಅನುದಾನ ಹಾಗೂ ಭಕ್ತರು ನೀಡಿದ ಹಣಕ್ಕೆ ಸೂಕ್ತ ಲೆಕ್ಕ ಪತ್ರ ಕೊಡಬೇಕಾಗುತ್ತದೆ ಇದಕ್ಕಾಗಿ ಸಮಿತಿಯವರು ಒಬ್ಬ ವ್ಯಕ್ತಿಯನ್ನು ನಿಯೋಜನೆ ಮಾಡಿಕೊಂಡು ಪ್ರತಿಯೊಂದಕ್ಕೂ ಸೂಕ್ತ ದಾಖಲೆಯನ್ನು ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಿದ್ದಾರೂಢ ಮಠದ ಸೋಮೇಶ್ವರಾನಂದ ಶ್ರೀಗಳು, ನೇರಡಗಂ ಶ್ರೀಮಠದ ಪಂಚಮ ಸಿದ್ದಲಿಂಗ ಮಹಾಸ್ವಾಮಿಗಳು, ಚೆಗುಂಟಾದ ಕ್ಷೀರಲಿಂಗ ಮಹಾಸ್ವಾಮಿಗಳು, ಕೊಡ್ಲಾ ಶ್ರೀಮಠದ ಶಂಭುಲಿಂಗ ಶ್ರೀಗಳು ತಂಗಡಗಿಯ ಸಾಹಿತಿ, ಆಧ್ಯಾತ್ಮಿಕ ಚಿಂತಕ ಆಂಜನೇಯ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಿದ್ದರು.
ಭಕ್ತರ ಕನಸು ನನಸಾಗುವ ಸುದಿನ
ಯಾದಗಿರಿಯಿಂದ ರಾಯಚೂರು ನಗರಕ್ಕೆ ತೆರಳುವ ಮಾರ್ಗ ಮಧ್ಯೆ ಮೊದಲಿಗೆ ಮೈಲಾರಲಿಂಗ ದೇವಸ್ಥಾನ ಬರುತ್ತೆ ಅದರ ತರುವಾಯ ರಾಚನಹಳ್ಳಿ ಕ್ರಾಸ್ ಬಳಿ ನಿರ್ಮಾಣವಾಗುತ್ತಿರುವ ಅಯ್ಯಪ್ಪ ಸ್ವಾಮಿ ಮಂದಿರ ಭಕ್ತರ ಆಧ್ಯಾತ್ಮಿಕ ತಾಣವಾಗಲಿದೆ ಎಂದು ನೇರಡಗಂ ಶ್ರೀಮಠದ ಪಂಚಮ ಸಿದ್ದಲಿಂಗ ಮಹಾಸ್ವಾಮಿಗಳು ಆಶಿಸಿದರು.























