ಭಾಲ್ಕಿ :ಜೂ.12: ಈ ವರ್ಷದ ಮುಂಗಾರಿನ ಹಂಗಾಮಿನಲ್ಲಿ ಉತ್ತಮ ಮಳೆಯಾಗಿ ರೈತರು ಸಮೃದ್ಧ ಬೆಳೆ ಬೆಳೆಯುವಂತಾಗಲಿ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಆಶಿಸಿದರು. ಪಟ್ಟಣದ ಹಿರೇಮಠ ಸಂಸ್ಥಾನದ ಆವರಣದಲ್ಲಿ ಕಾರ ಹುಣ್ಣಿಮೆ ನಿಮಿತ್ತ ಬುಧವಾರ ಎತ್ತುಗಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಮುಂಗಾರಿನ ಮೊದಲ ಹಬ್ಬ ಕಾರ ಹುಣ್ಣಿಮೆ ರೈತರು ಸಂಭ್ರಮದಿಂದ ಆಚರಿಸುತ್ತಾರೆ. ವರ್ಷಪೂರ್ತಿ ರೈತರೊಂದಿಗೆ ದುಡಿಯುವ ಎತ್ತುಗಳು, ರಾಸುಗಳಿಗೆ ಅಲಂಕರಿಸಿ ಪೂಜೆ ಸಲ್ಲಿಸುವುದು ಕಾರ ಹುಣ್ಣಿಮೆ ವಿಶೇಷ. ಆದರೆ ಇಂದಿನ ಯಾಂತ್ರೀಕರಣದ ಪ್ರಭಾವದಿಂದ ರಾಸುಗಳ ಸಂಖ್ಯೆ ಕಡಿಮೆಗೊಳ್ಳುತ್ತಿದೆ. ಹಬ್ಬದ ಸಂಭ್ರಮ ಮರೆಯಾಗುತ್ತಿದೆ ಎಂದು ಕಳವಳ ವ್ಯಕ್ತ ಪಡಿಸಿದ್ದರು.
ಪ್ರತಿವರ್ಷ ಸಕಾಲಕ್ಕೆ ಮಳೆಯಾಗದೇ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ ಈ ಬಾರಿ ಮುಂಗಾರಿನ ಆರಂಭದಿಂದಲೇ ಉತ್ತಮ ಮಳೆಯಾಗುತ್ತಿದೆ. ಇದು ರೈತರಲ್ಲಿ ಮೊಗದಲ್ಲಿ ಸಂತಸ ತರಿಸಿದೆ. ಈ ಬಾರಿ ಉತ್ತಮ ಮಳೆಯಾಗಿ ರೈತರು ಉತ್ತಮ ಬೆಳೆ ಬೆಳೆದು ಎಲ್ಲ ಸಂಕಷ್ಟದಿಂದ ಹೊರ ಬರುವಂತಾಗಲಿ ಎಂದು ತಿಳಿಸಿದರು. ಬಸವಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಕಾಶಿನಾಥ ಭೂರೆ, ಪ್ರಮುಖರಾದ ಬಸವರಾಜ ಮರೆ, ಜಗನ್ನಾಥ ಜಮಾದಾರ, ಅಶೋಕ ಅಂಬಿಗಾರ, ಮಲ್ಲಮ್ಮ ನಾಗನಕೇರೆ ಸೇರಿದಂತೆ ಮುಂತಾದವರು ಇದ್ದರು. ಮಳೆಯಾಗುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ತರಿಸಿದೆ. ರೈತರು ಸಕಾಲದಲ್ಲಿ ಬಿತ್ತನೆ ಕೈಗೊಂಡು ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಸಮೃದ್ದರಾಗಲಿ ಎಂದರು.