ಭರ್ಜರಿ ಯಶಸ್ವಿಗೊಂಡ ಜಗನ್ಮಾತೆ ಅಕ್ಕಮಹಾದೇವಿ ಚಲನಚಿತ್ರ:ವಿಷ್ಣುಕಾಂತ ಅವರ ಪ್ರಯತ್ನಕ್ಕೆ ಫಲ ಸಿಗಲಿ: ನಟಿ ಭವ್ಯ

ಬೀದರ:ಜ.3: ಥೇಟ್ ಅಕ್ಕಮಹಾದೇವಿಯವರ ನಟನೆ, ಸಾಕ್ಷಾತ್ ಅವರೇ ಕಣ್ಮುಂದೆ ಬಂದು ನಿಂತ ಅನುಭವ, ಸೌಮ್ಯತೆ, ತಾಳ್ಮೆ, ಶಬ್ದಗಳ ಉಚ್ಛಾರಣೆ, ವಚನಗಳ ಪ್ರಸ್ತುತಪಡಿಸುವಿಕೆ ಇವೆಲ್ಲವೂ ಅದ್ಭುತವಾಗಿ ಚಿತ್ರಗಳಲ್ಲಿ ಮೂಡಿಬಂದಿವೆ ಎಂದು ಜಗನ್ಮಾತೆ ಚಲನಚಿತ್ರ ವೀಕ್ಷಣೆ ಮಾಡಿದ ಪ್ರೇಕ್ಷಕರು ಹೇಳಿದ ಮಾತುಗಳಿವು. ಬೀದರನ ಸಪ್ನಾ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಶುಕ್ರವಾರ ಬಿಡುಗಡೆ ಕಂಡ ಜಗನ್ಮಾತೆ ಅಕ್ಕಮಹಾದೇವಿ ಚಲನಚಿತ್ರ ಭರ್ಜರಿ ಯಶಸ್ವಿಕಂಡಿತು. ಮೊದಲ ದಿನವೇ ಚಿತ್ರಮಂದಿರ ಹೌಸ್‍ಫುಲ್ ಆಗಿ ನಡೆಯಿತು. ಈ ಕುರಿತು ಮಾತನಾಡಿದ ನಟಿ ಭವ್ಯ ಅವರು ವಿಷ್ಣುಕಾಂತ್ ಬಿಜೆ ಯವರ ನಟನೆ, ರಚನೆ, ನಿರ್ದೇಶನ ಈ ಚಿತ್ರಕ್ಕೆ ಸಾಕಷ್ಟಿದೆ. ಇನ್ನೂ ಯಶಸ್ವಿಯಾಗಿ ಅವರ ಸಿನಿ ಜರ್ನಿ ಮುಂದುವರೆಯಲಿ ಎಂದು ಶುಭ ಹಾರೈಸಿದರು. ನಟ ವಿಷ್ಣುಕಾಂತ ಅವರು ಮಾತನಾಡಿ ಬೀದರನಲ್ಲಿ ಬೆಳೆದ ಕಲಾವಿದರು ಈ ಚಿತ್ರದಲ್ಲಿ ಸುಂದರವಾಗಿ ನಟನೆ ಮಾಡಿದ್ದಾರೆ. ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಬೀದರನಲ್ಲಿ ಪ್ರೇಕ್ಷಕರು ಮನಪೂರ್ವಕವಾಗಿ ಚಿತ್ರವೀಕ್ಷಣೆ ಮಾಡಿ ಚಪ್ಪಾಳೆ ತಟ್ಟಿದ್ದಾರೆ. ಚಿತ್ರವು ಇನ್ನೂ ಹೆಚ್ಚು ಪ್ರಚಾರ ಕಾಣಲೆಂದು ಪ್ರಾರ್ಥಿಸುವೆ ಎಂದರು.
ಅಕ್ಕಮಹಾದೇವಿ ಚಲನಚಿತ್ರ ವೀಕ್ಷಣೆ ಮಾಡಿದ ಖ್ಯಾತ ವಕೀಲರಾದ ಅಶೋಕ ಮಾನೂರೆ ಹಾಗೂ ಸುರೇಶ ಪಾಟೀಲ ಅವರು ಚಿತ್ರ ಕುರಿತು ಮಾತನಾಡುತ್ತ ಈ ಚಿತ್ರ ನೋಡಿ ಸ್ವತಃ ಅಕ್ಕಮಹಾದೇವಿಯವರನ್ನೇ ನೋಡಿದ ಅನುಭವವಾಯಿತು. ಸುಲಕ್ಷಾ ಖೈರಾ ಅವರು ತುಂಬಾ ಭಾವಪ್ರಧಾನವಾಗಿ ನಟನೆ ಮಾಡಿದ್ದಾರೆ. ಸಾಕಷ್ಟು ಜನರು ಈ ಚಿತ್ರ ವೀಕ್ಷಿಸಿ ಬೆನ್ನುತಟ್ಟಿದ್ದಾರೆ. ಕೌಶಿಕ ಮಹಾರಾಜ ಹಾಗೂ ಬಸವಣ್ಣನವರ ಪಾತ್ರದಲ್ಲಿ ವಿಷ್ಣುಕಾಂತ ಅವರು ಕಾಣಿಸಿಕೊಂಡಿದ್ದು ಖುಷಿ ಎನಿಸಿದೆ. ಬೀದರ ಜಿಲ್ಲೆಯಲ್ಲಿಯೂ ಯಾವ ಪ್ರತಿಭೆಗಳಿಗೂ ಕಡಿಮೆಯಿಲ್ಲ ಎನ್ನುವ ರೀತಿಯಲ್ಲಿ ಚಿತ್ರತಂಡ ಅದ್ಭುತ ಯಶಸ್ಸು ಕಂಡಿದೆ. ಚಲನಚಿತ್ರದಲ್ಲಿ ಎಲ್ಲಾ ಪಾತ್ರಗಳು ಉತ್ತಮವಾಗಿ ಮೂಡಿಬಂದಿವೆ. ಜನರು ಈ ಚಲನಚಿತ್ರ ವೀಕ್ಷಿಸಿ ಯಶಸ್ವಿಗೊಳಿಸಬೇಕೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಕ್ಕಮಹಾದೇವಿಯವರ ಪಾತ್ರದಲ್ಲಿ ನಟಿಸಿರುವ ಸುಲಕ್ಷಾ ಖೈರಾ ಅವರು ಮಾತನಾಡಿ ಈ ಚಲನಚಿತ್ರವನ್ನು ಬೆಂಗಳೂರಿಗಿಂತ ಬೀದರನಲ್ಲಿಯೇ ಬಿಡುಗಡೆ ಮಾಡಿದ್ದು ಅತ್ಯಂತ ಯಶಸ್ವಿನ ಪಯಣದ ಕಡೆಗೆ ನಮ್ಮನ್ನು ಕೊಂಡೊಯ್ದಿದೆ. ಎಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ ಚಿತ್ರ ವೀಕ್ಷಿಸಬೇಕೆಂದು ಕೋರಿದರು.
ಇದೇ ವೇಳೆ ಪೂಜ್ಯ ತಡೋಳಾದ ಪೂಜ್ಯ ರಾಜೇಶ್ವರ ಶಿವಾಚಾರ್ಯರು, ಬಸವ ಸೇವಾ ಪ್ರತಿಷ್ಠಾನದ
ಪೂಜ್ಯ ಶ್ರೀ ಅಕ್ಕ ಡಾ. ಗಂಗಾಂಬಿಕಾ ತಾಯಿ ಪೂಜೆ ಸಲ್ಲಿಸಿ ಶುಭ ಹಾರೈಸಿದರು. ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಶೆಟಕಾರ, ವಚನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಲ್ಲಮಪ್ರಭು ನಾವದಗೆರೆ, ಹಾವಶೆಟ್ಟಿ ಪಾಟೀಲ, ವಂದೇ ಮಾತರಂ ಶಾಲೆಯ ಪ್ರಾಚಾರ್ಯರಾದ ರತ್ನಾ ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ, ಸಾಹಿತಿಗಳಾದ ಭಾರತಿ ವಸ್ತ್ರದ್, ಜಯದೇವಿ ಯದಲಾಪುರೆ, ಶಿವಶಂಕರ ಟೋಕರೆ, ಶರಣಪ್ಪ ಮಿಠಾರೆ, ಸಂಗೀತ ನಿರ್ದೇಶಕ ಪಳಿನಿ ಸೇರಿದಂತೆ ಹಲವರು ಉಪಸ್ಥಿತರಿದ್ದು ಸಿನಿಮಾ ವೀಕ್ಷಣೆ ಮಾಡಿದರು.