Home ಜಿಲ್ಲೆ ಬೆಂಗಳೂರು ಮೇ೩೧ “ಜಾಣಜಾಣೆಯರ ನಗೆ ಹಬ್ಬ’ ೬೦ ಕಲಾವಿದರಿಗೆ ೧೦ ಲಕ್ಷ ರೂ. ಆರೋಗ್ಯ ವಿಮೆ ವಿತರಣೆ

ಮೇ೩೧ “ಜಾಣಜಾಣೆಯರ ನಗೆ ಹಬ್ಬ’ ೬೦ ಕಲಾವಿದರಿಗೆ ೧೦ ಲಕ್ಷ ರೂ. ಆರೋಗ್ಯ ವಿಮೆ ವಿತರಣೆ

ಬೆಂಗಳೂರು, ಮೇ ೨೪: ಜಾಣಜಾಣೆಯರ ಸಾಹಿತಿ ಕಲಾವಿದರ ಟ್ರಸ್ಟ್ ವತಿಯಿಂದ “ಜಾಣಜಾಣೆಯರ ನಗೆ ಹಬ್ಬ’, ಟ್ರಸ್ಟ್ ಉದ್ಘಾಟನೆ ಹಾಗೂ ಕಲಾವಿದರ ಆರೋಗ್ಯ ವಿಮಾ ಯೋಜನೆ ಚಾಲನಾ ಸಮಾರಂಭವು ಮೇ ೩೧ರಂದು ಸಂಜೆ ೫ ಗಂಟೆಗೆ ನಗರದ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಚೌಡಯ್ಯ ಮೆಮೋರಿಯಲ್ ಹಾಲ್ ಕಾರ್ಯದರ್ಶಿ ಡಾ. ಸುಮ ಸುಧೀಂದ್ರ ತಿಳಿಸಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಾಸ್ಯ ಕಲಾವಿದ ಎಂ.ಎಸ್. ನರಸಿಂಹಮೂರ್ತಿ, ಚೌಡಯ್ಯ ಮೆಮೋರಿಯಲ್ ಹಾಲ್ ಕಾರ್ಯದರ್ಶಿ ಡಾ. ಸುಮ ಸುಧೀಂದ್ರ, ಟ್ರಸ್ಟಿ ಉದಯ್ ಎಂ., ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದೆ ಗೀತಾ ಸುರತ್ಕಲ್ ಮತ್ತು ಮೀನಾ ಅವರು ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಕಳೆದ ಮೂರು ದಶಕಗಳಿಂದ “ಜಾಣಜಾಣೆಯರು” ಸಂಸ್ಥೆ ರಾಜ್ಯದಾದ್ಯಂತ ನಗೆಜಾಗೃತಿ ಹಾಗೂ ನಗೆ ಉತ್ಸವಗಳನ್ನು ಆಯೋಜಿಸುವ ಮೂಲಕ ಅಪಾರ ಜನಮನ್ನಣೆ ಗಳಿಸಿದೆ. ಹಾಸ್ಯದ ಮೂಲಕ ಸಮಾಜಮುಖಿ ಸಂದೇಶಗಳನ್ನು ತಲುಪಿಸುವ ಸಂಸ್ಥೆ, ಭರತನಾಟ್ಯ, ಶಾಸ್ತ್ರೀಯ ಸಂಗೀತ, ಯಕ್ಷಗಾನ, ಮಿಮಿಕ್ರಿ ಸೇರಿದಂತೆ ವಿವಿಧ ಕಲಾ ಪ್ರಕಾರಗಳನ್ನು ಜನರಿಗೆ ಪರಿಚಯಿಸಿ ವಿಶಿಷ್ಟ ಸ್ಥಾನವನ್ನು ಪಡೆದಿದೆ.


ಕಾರ್ಯಕ್ರಮದ ಉದ್ಘಾಟನಾ ದಿನದಂದು ೬೦ ಕಲಾವಿದರಿಗೆ ತಲಾ ೧೦ ಲಕ್ಷ ರೂ. ಮೌಲ್ಯದ ಆರೋಗ್ಯ ವಿಮಾ ಪಾಲಿಸಿಯನ್ನು ಉಚಿತವಾಗಿ ವಿತರಿಸಲಾಗುತ್ತದೆ.
ಮೂರು ಗಂಟೆಗಳ ನಿರಂತರ ನಗೆರಸದೌತಣ ಪ್ರೇಕ್ಷಕರಿಗೆ ಲಭ್ಯವಾಗಲಿದ್ದು, ರಾಜ್ಯದ ಖ್ಯಾತ ಹಾಸ್ಯ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಿಮಿಕ್ರಿ ದಯಾನಂದ್, ಪ್ರೊ. ಎಂ. ಕೃಷ್ಣಗೌಡ, ಮಿಮಿಕ್ರಿ ಗೋಪಿ, ಗಂಗಾವತಿ ಪ್ರಾಣೇಶ್, ವೈ.ವಿ. ಗುಂಡೂರಾವ್, ಕೋಗಳಿ ಕೊಟ್ರೇಶ್, ಕಿರ್ಲೋಸ್ಕರ್ ಸತ್ಯ, ಶಿವಾರ ಉಮೇಶ್, ಪ್ರಹ್ಲಾದಾಚಾರ್ಯ ಹಾಗೂ ಎಂ.ಎಸ್. ನರಸಿಂಹಮೂರ್ತಿ ಅವರು ವಿಶೇಷ ನಗೆ ಕಾರ್ಯಕ್ರಮ ನೀಡಲಿದ್ದಾರೆ.ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದು, ಐಪಿಎಲ್ ಮೂಲಕ ಜನಪ್ರಿಯತೆ ಪಡೆದ ಡ್ರಮ್ಸ್ ದೇವ್ ವಿಶೇಷ ಪ್ರದರ್ಶನ ನೀಡಲಿದ್ದಾರೆ. ಮಿಮಿಕ್ರಿ ದಯಾನಂದ್ ಅವರ ತಂಡವೂ ಮನರಂಜನಾ ಕಾರ್ಯಕ್ರಮವನ್ನು ನಡೆಸಿಕೊಡಲಿದೆ.


ಕಲಾವಿದರ ನೆರವಿಗಾಗಿ ಈ ಕಾರ್ಯಕ್ರಮವನ್ನು ಸಹಾಯಾರ್ಥ ಟಿಕೆಟ್ ಪ್ರದರ್ಶನವಾಗಿ ಆಯೋಜಿಸಲಾಗಿದ್ದು, ಸಾರ್ವಜನಿಕರು ‘ಬುಕ್ ಮೈ ಶೋ’ ಮೂಲಕ ಟಿಕೆಟ್ ಖರೀದಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಾವಿದರಿಗೆ ಬೆಂಬಲ ನೀಡಬಹುದಾಗಿದೆ.


ಮೇ ೩೧ರಂದು ಸಂಜೆ ೫ ಗಂಟೆಗೆ ಆರಂಭವಾಗಲಿರುವ “ಜಾಣಜಾಣೆಯರ ನಗೆ ಹಬ್ಬ’ ಮನರಂಜನೆಯೊಂದಿಗೆ ಸಮಾಜಮುಖಿ ಸಂದೇಶ ಸಾರುವ ವಿಶಿಷ್ಟ ಕಾರ್ಯಕ್ರಮವಾಗಿದ್ದು, ಅಶಕ್ತ ಕಲಾವಿದರ ಬದುಕಿಗೆ ಹೊಸ ಆಶಾಕಿರಣವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.