
ಬೀದರ್:ಫೆ.೨೮: ನಗರದ ಡಾ. ಚನ್ನಬಸವ ಪಟ್ಟದ್ದೆವರು ಜಿಲ್ಲಾ ರಂಗಮAದಿರದಲ್ಲಿ ಬುದ್ಧ ಬೆಳಕು ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಾಗೂ ಮನೆ ಮನೆಗೆ ಅಂಬೇಡ್ಕರ್ ಅಭಿಯಾನ ಅನುಷ್ಠಾನ ಸಮಿತಿ ಬೀದರ ವತಿಯಿಂದ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅವರ ೧೨೮ನೇ ಜಯಂತ್ಯೋತ್ಸವ ಅಂಗವಾಗಿ ಐ.ಎ.ಎಸ್./ಕೆ.ಎ.ಎಸ್ ಪರೀಕ್ಷಾ ಪೂರ್ವ ಸಿದ್ಧತಾ ಕಾರ್ಯಾಗಾರ, ಕಾನೂನು ಅರಿವು ಕಾರ್ಯಕ್ರಮ ಹಾಗೂ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸಂಭ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಕ್ಕಾ ಐ.ಎ.ಎಸ್ ಅಕಾಡೆಮಿ ಸಂಸ್ಥಾಪಕ ಡಾ. ಶಿವಕುಮಾರ ಅವರು, ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅವರು ಬಾಲ್ಯದಿಂದ ಮುಪ್ಪಿನವರೆಗೆ ಅನೇಕ ಸಂಕಷ್ಟ, ಅನಾರೋಗ್ಯ, ಅವಮಾನಗಳ ನಡುವೆ ಕುಂದದೆ ತಮ್ಮ ಪತಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಬೆಂಬಲ ನೀಡಿ ಭವ್ಯ ಭಾರತ ನಿರ್ಮಾಣಕ್ಕೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ ಎಂದರು.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕನಸು ಮಹಿಳೆಯರು, ಕಾರ್ಮಿಕರು, ಶೋಷಿತರು ಹಾಗೂ ಹಿಂದುಳಿದ ವರ್ಗದವರು ಆಳುವ ವರ್ಗವಾಗಬೇಕು ಎನ್ನುವುದಾಗಿತ್ತು. ಆದರೆ ಇಂದು ನಾವು ಶಿಕ್ಷಣ ಮತ್ತು ಜ್ಞಾನಾಭ್ಯಾಸದಲ್ಲಿ ನಿರಂತರ ಪ್ರಯತ್ನದ ಕೊರತೆಯಿಂದ ವಿವಿಧ ಕ್ಷೇತ್ರಗಳಲ್ಲಿ ನಿರೀಕ್ಷಿತ ಸಾಧನೆ ಮಾಡಲು ವಿಫಲರಾಗುತ್ತಿದ್ದೇವೆ. ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಾಗ ಮಾತ್ರ ಮಹಾಪುರುಷರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ಬೌದ್ಧ ಸಾಹಿತಿ ಗಂಗಾಧರ ಸೋಸಲೆ ಅವರು ಮಾತನಾಡಿ, ರಮಾಬಾಯಿ ಅಂಬೇಡ್ಕರ್ ಅವರ ತ್ಯಾಗ ಮತ್ತು ದಿವ್ಯಶಕ್ತಿಯ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಬೇಕೆಂದರು. ನ್ಯಾಯವಾದಿ ಕೆಶವ ಶ್ರಿಮಾಳೆ ಅವರು ಸಂವಿಧಾನದ ಮಹತ್ವ ಹಾಗೂ ಪೋಕ್ಸೋ ಮತ್ತು ಬಾಲ್ಯ ವಿವಾಹ ವಿರೋಧಿ ಕಾನೂನುಗಳ ಕುರಿತು ಮಾಹಿತಿ ನೀಡಿದರು.
ಸಂಯೋಜಕ ಮಹೇಶ ಗೋರನಾಳಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲ ವರ್ಗದ ಮಕ್ಕಳ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಅಭಿಯಾನ ಸಮಿತಿ ಅಧ್ಯಕ್ಷ ಡಾ. ಕಾಶಿನಾಥ ಚೆಲ್ವಾ ಜಿಲ್ಲಾದ್ಯಂತ ೫೦ಕ್ಕೂ ಹೆಚ್ಚು ಕಡೆ ಅಭಿಯಾನ ನಡೆಸಲಾಗುವುದಾಗಿ ತಿಳಿಸಿದರು.
ಸಮಿತಿ ಅಧ್ಯಕ್ಷೆ ನಂದಮ್ಮಾ ಕುಂದೆ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷೆ ಉಷಾಬಾಯಿ ಬನ್ಸುಡೆ, ಕಾರ್ಯಾಧ್ಯಕ್ಷೆ ಕಲ್ಪನಾ ಗೋರನಾಳಕರ್,ಸಮಿತಿಯ ಪ್ರಮುಖರಾದ ಶೆಶಿಕಲಾ ಶರ್ಮಾ, ಸೊನಮ್ಮಾ ಕಸ್ತೂರೆ, ಕಮಳಮ್ಮಾ ಸಂತಪೂರೆ, ಪಂಚಫುಲಾ ಗಾಯಕವಾಡ, ಕಲಾವತಿ ಕಾಳೆಕರ್, ಶಾರದಾ ಆಳಂದಕರ್, ಇಂದುಮತಿ ಸಾಗರ, ವೀಣಾ ಗುಪ್ತಾ, ಉಜ್ವಲಾ ಪಡಸಾಲೆ, ಶ್ರೀದೇವಿ ಸಿಂಗೆ, ಕಾವೇರಿ ಕಾಳೆಕರ್ ಉಪಸ್ಥಿತರಿದ್ದರು
ಸಂತೋಷ ಪೂಜಾರಿ ನೇತೃತ್ವದ ಬೋದ್ದಿ ವೃಕ್ಷ ಯುವಕ ಸಂಘ ಭಜನೆ ಮಂಡಳಿ, ಸುಭಾಷ ನೇತೃತ್ವದ ಭಜನೆ ತಂಡ ಹಾಗೂ ಸಂಗೀತಾ ಕಾಂಬಳೆ ನೇತೃತ್ವದ ಕಲಾ ತಂಡ ಸೇರಿದಂತೆ ಹಲವು ತಂಡಗಳು ರಮಾಬಾಯಿ ಅಂಬೇಡ್ಕರ್ ಮತ್ತು ಬುದ್ಧ ಭೀಮರ ಹಾಡುಗಳನ್ನು ಹಾಡಿ ಕಾರ್ಯಕ್ರಮಕ್ಕೆ ಮೆರುಗು ತಂದವು.



























