ಬದುಕಿನ ನಿರ್ವಹಣೆಗೆ ಗಣಿತ ಜ್ಞಾನ ಅತ್ಯವಶ್ಯ

ತಿಪಟೂರು, ಡಿ. ೨೮- ಗಣಿತದ ಕಲಿಕೆ ಆನಂದದಾಯಕವಾಗಬೇಕಾದರೆ ಮೋಜು ಗಣಿತದ ಕೆಲವು ತಂತ್ರಗಳನ್ನು ಅಳವಡಿಸಿಕೊಳ್ಳಬೇಕು. ಓದಲು ಬರದಿದ್ದರೂ ಜೀವನ ನಿರ್ವಹಣೆಗೆ ಗಣಿತ ಜ್ಞಾನ ಅತ್ಯಗತ್ಯ ಎಂದು ಪದವೀಧರ ಮುಖ್ಯ ಶಿಕ್ಷಕರಾದ ಎಸ್.ಆರ್ ಸುರೇಶ್ ಹೇಳಿದರು.


ತಾಲ್ಲೂಕಿನ ನೊಣವಿನಕೆರೆಯ ಪಿ.ಎಂ.ಶ್ರೀ. ಕೆಪಿಎಸ್ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಗಣಿತ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಪ್ರಾಥಮಿಕ ಹಂತದ ಶಿಕ್ಷಣ ಪಡೆಯದವರೂ ಕೂಡಾ ಗಣಿತ ಲೆಕ್ಕಾಚಾರ ಬಲ್ಲವರಾಗಿ ಸಾಧನೆ ಮಾಡಿರುವವರನ್ನು ಸಮಾಜದಲ್ಲಿ ಕಾಣಬಹುದಾಗಿದೆ. ಮಕ್ಕಳಿಗೆ ಗಣಿತ ಕಲಿಕೆ ಸುಲಭವಾಗಿಸೋಣ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಮಕ್ಕಳಿಂದ ಹಲವು ಗಣಿತ ಸಂಬಂಧಿ ಚಟುವಟಿಕೆಗಳನ್ನು ಮಾಡಿಸಲಾಯಿತು. ಗಣಿತಕ್ಕೆ ಸಂಬಂಧಿಸಿದ ಮಕ್ಕಳಿಗೆ ಮೋಜು ಎನಿಸುವ ಹಾಡುಗಳು, ನೃತ್ಯಗಳು ಹಾಗೂ ಒಗಟುಗಳ ಚಟುವಟಿಕೆ ಮಾಡಲಾಯಿತು. ಸಂಖ್ಯೆಗಳ ಮಹತ್ವವನ್ನು ತಿಳಿಸುವ ಸಂಖ್ಯೆಗಳ ಮಹಾರಾಜ ಎಂಬ ನಾಟಕವನ್ನು ಮಾಡಿಸಲಾಯಿತು. ನಾಟಕದ ಮುಖೇನ ಕೋನಗಳ ಪರಿಚಯ ಮಾಡಿಕೊಡಲಾಯಿತು.


ನಾಟಕದ ಮೂಲಕ ಮಕ್ಕಳಿಗೆ ಗಣಿತದ ಮೂಲ ಕ್ರಿಯೆಗಳ ಪರಿಚಯ ಮಾಡಿಕೊಡಲಾಯಿತು. ಹಾಗೆಯೇ “ಗಣಿತ ಹೇಳುತೈತೆ”, “ನಮ್ಮ ಗಣಿತ”, “ಕೂಡುವುದರಲ್ಲಿ ಕಳೆಯುವುದರಲ್ಲಿ ಗಣಿತ ಅಡಗಿದೆ” ಎಂಬ ಮುಂತಾದ ಗಣಿತ ಸಂಬಂಧಿ ಹಾಡುಗಳನ್ನು ಹಾಡಿಸಲಾಯಿತು. ಸಂಖ್ಯೆಗಳ ಕುರಿತಾದ ಚಟುವಟಿಕೆಯು ಮಕ್ಕಳಲ್ಲಿ ಕುತೂಹಲ ಮತ್ತು ಆಸಕ್ತಿಯನ್ನು ಉಂಟು ಮಾಡಿತು. ಒಟ್ಟಾರೆಯಾಗಿ ಎಲ್ಲಾ ಕಾರ್ಯಕ್ರಮಗಳನ್ನು ಗಣಿತ ವಿಷಯಕ್ಕೆ ಪೂರಕವಾಗಿ ಮತ್ತು ಅರ್ಥಪೂರ್ಣವಾಗಿ ಆಯೋಜನೆ ಮಾಡಲಾಗಿದ್ದು ಮಕ್ಕಳ ಗಮನ ಸೆಳೆಯಿತು.