Home ಮುಖಪುಟ ಸುದ್ದಿ ಮತ ಎಣಿಕೆ ಕೇಂದ್ರ ಸಿಬ್ಬಂದಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ

ಮತ ಎಣಿಕೆ ಕೇಂದ್ರ ಸಿಬ್ಬಂದಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ


ನವದೆಹಲಿ, ಮೇ ೨- ಬರುವ ಸೋಮವಾರ ಮೇ ೪ ರಂದು ಪಶ್ಚಿಮ ಬಂಗಾಳ ಸೇರಿದಂತೆ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಮತ ಎಣಿಕೆಗೆ ಕೇಂದ್ರ ಸರ್ಕಾರದ ಸಿಬ್ಬಂದಿಗಳನ್ನು ನಿಯೋಜಿಸುವುದನ್ನು ಪ್ರಶ್ನಿಸಿ, ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾ ಮಾಡಿರುವ ಸುಪ್ರೀಂಕೋಟ್ ಈ ಬಗ್ಗೆ ಆದೇಶ ನೀಡಲು ನಿರಾಕರಿಸಿರುವುದು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಹಿನ್ನೆಡೆಯಾದಂತಾಗಿದೆ.


ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಕೇಂದ್ರ ಸರ್ಕಾರ ಸಿಬ್ಬಂದಿಗಳನ್ನು ಮಾತ್ರ ಬಳಸುವ ಕೇಂದ್ರ ಚುನಾವಣಾ ಆಯೋಗದ ತೀರ್ಮಾನವನ್ನು ಪ್ರಶ್ನಿಸಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಯನ್ನು ಇಂದು ನಡೆಸಿದ ಸುಪ್ರೀಂಕೋರ್ಟ್ ಕೇಂದ್ರ ಚುನಾವಣಾ ಆಯೋಗದ ನಿರ್ಧಾರ ಕಾನೂನಿಗೆ ವಿರುದ್ಧವಲ್ಲ ಎಂದು ಹೇಳಿ ಈ ಬಗ್ಗೆ ಯಾವುದೇ ಆದೇಶವನ್ನು ಹೊರಡಿಸುವ ಅಗತ್ಯವಿಲ್ಲ ಎಂದು ಹೇಳಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿತು.


ಕೇಂದ್ರ ಚುನಾವಣಾ ಆಯೋಗ ಪಶ್ಚಿಮ ಬಂಗಾಳದ ಮತ ಎಣಿಕೆಗೆ ಕೇಂದ್ರ ಸರ್ಕಾರದ ಸಿಬ್ಬಂದಿಗಳನ್ನು ಮಾತ್ರ ನಿಯೋಜಿಸುವ ತೀರ್ಮಾನವನ್ನು ಬೆಂಬಲಿಸಿದ ಸುಪ್ರೀಂಕೋರ್ಟ್ ಈ ಸಂಬಂಧ ಕೇಂದ್ರ ಚುನಾವಣಾ ಆಯೋಗ ಹೊರಡಿಸಿರುವ ಸುತ್ತೋಲೆ ತಪ್ಪಿನಿಂದ ಕೂಡಿಲ್ಲ ಎಂದು ಹೇಳಿ ಮಮತಾ ಬ್ಯಾನರ್ಜಿಯವರ ಅರ್ಜಿಯನ್ನು ವಜಾ ಮಾಡಿತು.


ಇದೇ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯೋಗ ಏ. ೧೩ ರಂದು ಹೊರಡಿಸಿರುವ ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡುತ್ತೇವೆ. ಮತ ಎಣಿಕೆಯ ಕೇಂದ್ರದ ರಿಟರ್ನಿಂಗ್ ಆಫೀಸರ್ ಆಗುವ ರಾಜ್ಯ ಸರ್ಕಾರದ ಅಧಿಕಾರಿಯೇ ಎಲ್ಲದರ ಸಂಪೂರ್ಣ ಉಸ್ತುವಾರಿಯನ್ನು ಹೊಂದಿರುತ್ತಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿ ಈ ಬಗ್ಗೆ ಟಿಎಂಸಿ ಎತ್ತಿರುವ ವಿಚಾರ ಸರಿಯಲ್ಲ ಎಂದು ಹೇಳಿತು.


ಸುಪ್ರೀಂಕೋರ್ಟ್‌ನ ಈ ನಿರ್ಧಾರದಿಂದ ಮಮತಾ ಬ್ಯಾನರ್ಜಿಗೆ ಹಿನ್ನೆಡೆಯಾಗಿದೆ. ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಮತ ಎಣಿಕೆ ಮೇ ೪ ರಂದು ನಡೆಯಲಿದ್ದು, ಈ ಮತ ಎಣಿಕೆಗೆ ಮೇಲ್ವಿಚಾರಕರನ್ನಾಗಿ ಕೇಂದ್ರ ಸರ್ಕಾರಿ ನೌಕರರನ್ನು ಮಾತ್ರ ನಿಯೋಜಿಸುವ ಸಂಬಂಧ ಕೇಂದ್ರ ಆಯೋಗ ಸುತ್ತೋಲೆ ಹೊರಡಿಸಿತ್ತು.


ಆಯೋಗದ ಈ ನಿರ್ಧಾರವನ್ನು ಪ್ರಶ್ನಿಸಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸುಪ್ರೀಂಕೋರ್ಟ್‌ನಲ್ಲಿ ನಿನ್ನೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಗಮನಿಸಿದ ಮುಖ್ಯ ನ್ಯಾಂiiಮೂರ್ತಿ ಸೂರ್ಯಕಾಂತ್ ಇಂದು ಅರ್ಜಿಯ ತುರ್ತು ವಿಚಾರಣೆಗೆ ನಿರ್ದೇಶನ ನೀಡಿದ್ದರು. ಅದರಂತೆ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೋಯ್ಮಾಲ್ಯಬಾಗ್ಚಿ ಅವರ ನ್ಯಾಯಪೀಠ ವಿಚಾರಣೆ ನಡೆಸಿ, ಈ ಸಂಬಂಧ ಯಾವುದೇ ಆದೇಶವನ್ನು ಹೊರಡಿಸಲು ನಿರಾಕರಿಸಿತು.


ಈ ಮೂಲಕ ಚುನಾವಣೆ ಆಯೋಗ ಸುತ್ತೋಲೆ ಜಾರಿಗೆ ಇದ್ದ ಅಡಚಣೆ ನಿವಾರಣೆಯಾಗಿದ್ದು, ಮತ ಎಣಿಕೆಯಲ್ಲಿ ಕೇಂದ್ರ ಸರ್ಕಾರದ ನೌಕರರನ್ನು ಎಣಿಕೆ ಮೇಲ್ವಿಚಾರಕರು ಮತ್ತು ಎಣಿಕೆ ಸಹಾಯಕರನ್ನಾಗಿ ನೇಮಿಸಲು ಆಯೋಗಕ್ಕೆ ಅವಕಾಶ ಸಿಕ್ಕಂತಾಗಿದೆ.


ಪಶ್ಚಿಮ ಬಂಗಾಳದ ಹೈಕೋರ್ಟ್‌ನಲ್ಲೂ ಆಯೋಗ ನಿರ್ಧಾರ ಪ್ರಶ್ನಿಸಿ, ಟಿಎಂಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿ, ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ನೌಕರರನ್ನು ಎಣಿಕೆ ಮೇಲ್ವಿಚಾರಣೆಗೆ ನೇಮಕ ಮಾಡುವುದು ಚುನಾವಣಾ ಆಯೋಗದ ವಿಶೇಷ ಹಕ್ಕು ಎಂದು ಹೈಕೋರ್ಟ್ ಹೇಳಿತ್ತು. ಈಗ ಸುಪ್ರೀಂಕೋರ್ಟ್‌ನಲ್ಲೂ ಟಿಎಂಸಿಗೆ ಹಿನ್ನೆಡೆಯಾಗಿದೆ.