ಕನ್ನಡಕ್ಕೆ ಮಾಸ್ತಿಯವರು ಅಮೂಲ್ಯ ಆಸ್ತಿ

ಕಲಬುರಗಿ:ನ.11: ವಿಶ್ವದ ಪ್ರಮುಖ ಭಾಷೆಗಳಲ್ಲಿ ಸ್ಥಾನ ಪಡೆಯುವಲ್ಲಿ ಶ್ರಮಿಸಿದ, ಕನ್ನಡ ಭಾಷೆ ಸಾಹಿತ್ಯ, ಕಲೆ, ಸಂಸ್ಕøತಿಗೆ ತಮ್ಮದೇ ಆದ ಅಮೂಲ್ಯವಾದ ಕೊಡುಗೆಯನ್ನು ನೀಡಿ, ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರು ಕನ್ನಡದ ಅಮೂಲ್ಯವಾದ ಆಸ್ತಿಯಾಗಿದ್ದಾರೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ್ ಹೇಳಿದರು.
ನಗರದ ಶಹಾಬಜಾರ ಮಹಾದೇವ ನಗರದಲ್ಲಿನ ‘ಸ್ವಾತಿ ಪ್ರೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗುತ್ತಿರುವ ‘ಕನ್ನಡ ರಾಜ್ಯೋತ್ಸವ ಮಾಸಾಚರಣೆ ಸರಣಿ ಉಪನ್ಯಾಸ-10ರಲ್ಲಿ ‘ಕನ್ನಡ ನಾಡು-ನುಡಿಗೆ ಮಾಸ್ತಿಯವರ ಕೊಡುಗೆ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಮಾಸ್ತಿಯವರ ‘ಕೆಲವು ಸಣ್ಣ ಕಥೆಗಳು’ ಎಂಬ ಪ್ರಥಮ ಕೃತಿಯು 1920ರಲ್ಲಿ ಪ್ರಕಟವಾಯಿತು. ಇದು ಆಧುನಿಕ ಕನ್ನಡದ ಸಾಹಿತ್ಯದ ವಿಶಿಷ್ಟವಾದ ಮೊದಲ ಕೃತಿಯೆನಿಸಿದೆ. ಹಾಗೆ ನೋಡಿದರೆ ಸಣ್ಣಕಥೆಯನ್ನು ಮೊದಲು ಬರೆದವರು ಮಾಸ್ತಿಯವರಲ್ಲದೇ ಇದ್ದರೂ ಕೂಡಾ, ಕಥೆಗಳಿಗೆ ಮತ್ತು ಮಾಸ್ತಿಯವರಿಗೆ ಅನೋನ್ಯವಾದ ಬಾಂಧವ್ಯವಿದೆ. ಆದ್ದರಿಂದಲೇ ಇವರು ಕನ್ನಡ ಕಥಾ ಸಾಹಿತ್ಯದ ಪ್ರಮುಖರೆನಿಸಿಕೊಂಡು, ‘ಕನ್ನಡದ ಆಸ್ತಿ’ಯಾಗಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಮಾಸ್ತಿಯವರ ಸಣ್ಣ ಕಥೆಗಳ ಭಾಷೆ, ನಿರೂಪಣಾ ಶೈಲಿ, ಜೀವನದ ನಿಶ್ಚಳ ಅನುಭವಗಳು ತುಂಬಾ ಸರಳವಾಗಿದ್ದು, ಎಂತಹ ಓದುಗರನ್ನು ತನ್ನೊಳಗೆ ಆವರಿಸಿಕೊಳ್ಳುವಂತೆ ಮಾಸ್ತಿಯವರ ಸಾಹಿತ್ಯ ಹೊಂದಿದೆ ಎಂದರು.
ಮಾಸ್ತಿಯವರ ಕುರಿತು ಕುವೆಂಪು ಅವರು ‘ಮಾಸ್ತಿಯವರ ಸಾಹಿತ್ಯ ದೊಡ್ಡದು. ಅವರು ಅದಕ್ಕಿಂತಲೂ ದೊಡ್ಡವರೆಂಬ ನನ್ನ ಭಾವನೆ’ ಎಂದಿರುವ ಮಾತು ಮಾಸ್ತಿಯವರ ಮೇರು ವ್ಯಕ್ತಿತ್ವವನ್ನು ತೋರಿಸುತ್ತದೆ. ಕನ್ನಡ ಸಾಹಿತ್ಯ, ಭಾಷೆಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರು ನೀಡಿರುವ ಕೊಡುಗೆ ಬಹು ಮೌಲ್ಯಯುತವಾಗಿದೆ. ಅವರೊಬ್ಬ ಕನ್ನಡ ಸಾರಸತ್ವ ಲೋಕದ ಮೇರು ಸಾಹಿತಿಯಾಗಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಮುಖ್ಯ ಶಿಕ್ಷಕಿ ಸಾಲಿ ಸಂಗೀತಾ ಹಾಗೂ ಶಾಲೆಯ ಶಿಕ್ಷಕಿಯರು,ವಿದ್ಯಾರ್ಥಿಗಳಿದ್ದರು.