
ಸಂಜೆ ವಾಣಿ ವಾರ್ತೆ
ಯಾದಗಿರಿ: ಟಿಪ್ಪರ್ಗಳಿಗೆ ಬೆಂಕಿ ಹಚ್ಚುವುದಾಗಿ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ನೀಡಿರುವ ಹೇಳಿಕೆಯನ್ನು ಖಂಡಿಸಿ, ಟಿಪ್ಪರ್ ಮಾಲೀಕರ ಸಂಘದ ನೇತೃತ್ವದಲ್ಲಿ ಸೋಮವಾರ ಯಾದಗಿರಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ೨೦೦ಕ್ಕೂ ಹೆಚ್ಚು ಟಿಪ್ಪರ್ಗಳೊಂದಿಗೆ ನಡೆದ ಮೆರವಣಿಗೆಗೆ ಕಾಂಗ್ರೆಸ್ ಮುಖಂಡ ಶರಣಪ್ಪ ಮಾನೆಗಾರ್ ಧ್ವನಿಗೂಡಿಸಿ, ಶಾಸಕರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ನಗರದ ಗಂಜ್ ಪ್ರದೇಶದಿಂದ ೨೦೦ಕ್ಕೂ ಹೆಚ್ಚು ಟಿಪ್ಪರ್ಗಳೊಂದಿಗೆ ಆರಂಭವಾದ ಮೆರವಣಿಗೆ ಸುಭಾಷ್ ಚಂದ್ರ ವೃತ್ತಕ್ಕೆ ತಲುಪಿತು. ಅಲ್ಲಿ ಜಮಾಯಿಸಿದ ಟಿಪ್ಪರ್ ಮಾಲೀಕರು ಹಾಗೂ ಚಾಲಕರು ಶಾಸಕರ ಹೇಳಿಕೆ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ ಅವರಿಗೆ ಮನವಿ ಸಲ್ಲಿಸಿ, ಶಾಸಕರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಶರಣಪ್ಪ ಮಾನೆಗಾರ್, ಟಿಪ್ಪರ್ ಮಾಲೀಕರು ಶೋಕಿಗಾಗಿ ವಾಹನಗಳನ್ನು ಖರೀದಿಸಿಲ್ಲ. ಕುಟುಂಬ ನಿರ್ವಹಣೆ ಮತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಸಾಲ ಮಾಡಿ ವಾಹನಗಳನ್ನು ಖರೀದಿಸಿದ್ದಾರೆ ಎಂದು ಹೇಳಿದರು.
ಯಾವುದೇ ಅಕ್ರಮ ಚಟುವಟಿಕೆ ಕಂಡುಬAದರೆ ಅಧಿಕಾರಿಗಳು ಕಾನೂನು ಪ್ರಕಾರ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಿ. ಆದರೆ, ಕಾನೂನುಬದ್ಧವಾಗಿ ಜೀವನ ನಡೆಸುವವರನ್ನು ಬೆದರಿಸುವುದು ಸರಿಯಲ್ಲ. ಟಿಪ್ಪರ್ಗಳಿಂದಲೇ ರಸ್ತೆಗಳು ಹಾಳಾಗುತ್ತಿವೆ ಎಂಬ ಆರೋಪಗಳಿದ್ದರೆ, ರಸ್ತೆ ಕಾಮಗಾರಿಗಳ ಗುಣಮಟ್ಟ ಹಾಗೂ ಗುತ್ತಿಗೆದಾರರ ಹೊಣೆಗಾರಿಕೆಯ ಬಗ್ಗೆಯೂ ಪರಿಶೀಲನೆ ನಡೆಯಬೇಕು ಎಂದು ಆಗ್ರಹಿಸಿದರು.
ಅಹಿಂದ ರಾಜ್ಯ ಮುಖಂಡ ಹನುಮೇಗೌಡ ಬೀರನಕಲ್, ಉಮೇಶ ಮುದ್ದಾಳ, ತೇಜರಾಜ್ ರಾಠೋಡ್ ಸೇರಿದಂತೆ ಇತರರು ಮಾತನಾಡಿ, ಶಾಸಕರ ಹೇಳಿಕೆ ಕುರಿತು ಪರಿಶೀಲನೆ ನಡೆಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಟಿಪ್ಪರ್ ಮಾಲೀಕರು ಮತ್ತು ಚಾಲಕರಿಗೆ ವಿನಾಕಾರಣ ತೊಂದರೆ ನೀಡಬಾರದು ಎಂದು ಒತ್ತಾಯಿಸಿದರು.
ಸುಮಾರು ಮೂರು ಗಂಟೆಗಳ ಕಾಲ ನಡೆದ ಪ್ರತಿಭಟನೆಯಿಂದ ನಗರದ ಕೆಲವು ರಸ್ತೆಗಳಲ್ಲಿ ವಾಹನ ಹಾಗೂ ಜನರ ಸಂಚಾರಕ್ಕೆ ಅಡಚಣೆ ಉಂಟಾಯಿತು. ಟಿಪ್ಪರ್ ಮಾಲೀಕರ ಸಂಘದ ಅಧ್ಯಕ್ಷ ರಘುಪತಿ, ಶಶಾಂಕ, ಪ್ರವೀಣಕುಮಾರ, ಮಲ್ಲು ಮಾಳಿಕೇರಿ, ಮಲ್ಲಯ್ಯ, ರವಿಕುಮಾರ, ಭೀಮರಾಯ ಬಂಕಲಗಿ, ಮಲ್ಲಣ್ಣ, ಎಂ.ಡಿ. ಶೋಫ್, ಪರಶುರಾಮ ನಾಯಕ, ಕಾಶಿನಾಥ ಸೇರಿದಂತೆ ಸಂಘದ ಪದಾಧಿಕಾರಿಗಳು, ಟಿಪ್ಪರ್ ಮಾಲೀಕರು ಹಾಗೂ ಚಾಲಕರು ಭಾಗವಹಿಸಿದ್ದರು.





















