ಅ. 18 ರಂದು ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ; ಲಚ್ಚಪ್ಪ ಜಮಾದಾರ

ಅಫಜಲಪುರ: ಅ.15:ನಾಡಿನಲ್ಲಿ ಶರಣರು, ಸಂತರು, ದಾಸ ಶ್ರೇಷ್ಠರು, ಮಹಾತ್ಮರು ಜನಿಸಿ ಸಮಾನತೆಯ ಸಂದೇಶ ಸಾರಿ ಹೋಗಿದ್ದಾರೆ. ಅವರ ತತ್ವ ಸಿದ್ಧಾಂತಗಳನ್ನು ಅನುಸರಿಸಿಕೊಂಡು ಮುಂದೆ ಸಾಗುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಆದರೆ ಕೆಲ ಕಿಡಿಗೇಡಿ ಮನಸ್ಸುಗಳು ಶರಣರ ಮೂರ್ತಿಯನ್ನು ಭಗ್ನಗೊಳಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಹೀಗಾಗಿ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಕೋಲಿ ಸಮಾಜದ ಹಿರಿಯ ಮುಖಂಡ ಹಾಗೂ ಪ್ರಗತಿಪರ ಹೋರಾಟಗಾರ ಲಚ್ಚಪ್ಪ ಜಮಾದಾರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತುರ್ತು ಸಭೆ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ಅಕ್ಟೋಬರ್ 9 ರಂದು ಕಲಬುರ್ಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ಮುತ್ತಗಿ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿ ಇದೇ ಅಕ್ಟೋಬರ್ 18 ರ ಶನಿವಾರದಂದು ಅಫಜಲಪುರ ಪಟ್ಟಣದ ಅಂಬಿಗರ ಚೌಡಯ್ಯನವರ ವೃತ್ತದಿಂದ ತಹಶೀಲ್ ಕಚೇರಿವರೆಗೆ ಬೃಹತ್ ಪ್ರತಿಭಟನೆ ನಡೆಸುವ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಹಾಗೂ ಈ ಪ್ರತಿಭಟನೆಯಲ್ಲಿ ತಾಲೂಕಿನ ಪ್ರಗತಿಪರ ಚಿಂತಕರು, ಶರಣ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.

ಮುಖಂಡರಾದ ಶಂಕರ ಮ್ಯಾಕೇರಿ, ಸತೀಶ ಜಮಾದಾರ, ಸಿದ್ದಪ್ಪ ಸಿನ್ನೂರ, ಮಹಾಂತೇಶ ಬಡಿಗೇರ, ಶರಣಪ್ಪ ದುದ್ದಗಿ, ದುಂಡು ಜಮಾದಾರ, ರಾಮು ಉಮ್ಮರಗಿ, ಸಿದ್ದು ಸುಲ್ತಾನಪುರ, ರಾಜು ಮಾತೋಳಿ, ನಾಗು ಘತ್ತರಗಿ, ಸಾಯಬಣ್ಣ ದುದ್ದಗಿ, ಶರಣು ತಳವಾರ, ಗೌಸ್ ಮುಜಾವರ, ಸುಧೀರ ರಾಠೋಡ, ಸಂಗು ಕಾಮಶೆಟ್ಟಿ, ಸಿದ್ದು ಕಲ್ಲೂರ ಅನೇಕರಿದ್ದರು.