
ಕೋಲಾರ, ಜೂ,೨೫- ಕರ್ನಾಟಕ ರಾಜ್ಯದಲ್ಲಿ ಕೆಇಆರ್‌ಸಿ ವತಿಯಿಂದ ವಿದ್ಯುತ್ ವಿತರಣಾ ಪರವಾನಗಿಯನ್ನು ಟಾಟಾ ಪವರ್ ಕಂಪನಿಗೆ ನೀಡುವುದನ್ನು ಮತ್ತು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ವೇಮಗಲ್, ನರಸಾಪುರ ಮತ್ತು ಕ್ಯಾಲನೂರು ಭಾಗದ ಹೋರಾಟಗಾರರು ಹಾಗೂ ನೌಕರರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಬಯಲು ರಂಗಮಂದಿರದಿಂದ ಪ್ರಾರಂಭವಾದ ಪ್ರತಿಭಟನಾ ಜಾಥಾ ವೇಮಗಲ್ ಪೊಲೀಸ್ ಠಾಣೆಯ ಮುಂಭಾಗದ ರಸ್ತೆಯ ಮೂಲಕ ರಾಮಶೆಟ್ಟಿ ಸರ್ಕಲ್‌ನಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿತು. ನಂತರ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರೊಫೆಸರ್ ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯುಗ ಘಟಕದ ಅಧ್ಯಕ್ಷರಾದ ಕಲ್ವಮಂಜಲಿ ರಾಮುಶಿವಣ್ಣ, “ವಿದ್ಯುತ್ ಕ್ಷೇತ್ರ ಖಾಸಗೀಕರಣವಾದರೆ ರೈತರಿಗೆ ನೀಡುತ್ತಿರುವ ಉಚಿತ ವಿದ್ಯುತ್ ಸಂಪೂರ್ಣ ರದ್ದಾಗಲಿದೆ. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಲಾಗುತ್ತದೆ. ಬಡವರಿಗೆ ಆಸರೆಯಾಗಿರುವ ಗೃಹಜ್ಯೋತಿ, ಭಾಗ್ಯಜ್ಯೋತಿ, ಕುಟೀರಜ್ಯೋತಿ ಹಾಗೂ ಗಂಗಾ ಕಲ್ಯಾಣದಂತಹ ಪ್ರಮುಖ ಯೋಜನೆಗಳು ರದ್ದಾಗಲಿವೆ” ಎಂದು ಎಚ್ಚರಿಸಿದರು.
“ಸಣ್ಣ ಕೈಗಾರಿಕೆಗಳಿಗೆ ನೀಡುವ ರಿಯಾಯಿತಿ ದರದ ವಿದ್ಯುತ್ ಸ್ಥಗಿತಗೊಂಡು, ಕಾಲಾಂತರದಲ್ಲಿ ಟಾಟಾ ಕಂಪನಿಯು ತನ್ನಿಷ್ಟದಂತೆ ಹೆಚ್ಚಿನ ದರ ನಿಗದಿ ಮಾಡಲಿದೆ. ಮೊಬೈಲ್‌ಗೆ ರೀಚಾರ್ಜ್ ಮಾಡುವ ಮಾದರಿಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೂ ಮುಂಗಡವಾಗಿ ಹಣ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೋಟ್ಯಂತರ ರೂಪಾಯಿ ಮೌಲ್ಯದ ಬೆಸ್ಕಾಂ ಆಸ್ತಿ ಖಾಸಗಿ ಕಂಪನಿಯ ಪಾಲಾಗುವುದಲ್ಲದೆ, ರಾಜ್ಯದ ಯುವಜನತೆಗೆ ಸರ್ಕಾರಿ ಉದ್ಯೋಗದ ಅವಕಾಶಗಳು ಕೈತಪ್ಪಲಿವೆ” ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಜಿ. ನಾರಾಯಣಸ್ವಾಮಿ, ಎಂ.ಐ.ಸಿ.ಟಿ. ಮಂಜುನಾಥ್, ಕಲ್ವಮಂಜಲಿ ಸಿ. ಶಿವಣ್ಣ, ಮಡಿವಾಳ ಮುನಿರಾಜು, ವಿಶ್ವ ನಗರ ಕೃಷ್ಣಯ್ಯ, ಶಬೀರ್, ಕೆಇಬಿ ಚಂದ್ರು, ವೇಮಗಲ್ ಸುಧಾಕರ್, ಕಾರ್ಮಿಕ ಘಟಕದ ಅಧ್ಯಕ್ಷ ನಾಗರಾಜ್, ದಿನ್ನೆಹೊಸಹಳ್ಳಿ ರಮೇಶ್, ಸತೀಶ್, ಪಾನಿಪುರಿ ವೆಂಕಟೇಶ್, ಕಲ್ಲಹಳ್ಳಿ ನಾಗಭೂಷಣ್, ಹಾರ್ಜೇನಹಳ್ಳಿ ಕೃಷ್ಣಪ್ಪ, ಚಕ್ಕಪುರ ಆಂಜಿ, ಚಂದ್ರಶೇಖರ್, ಮುನಿರಾಜು, ಮುನಿಕೃಷ್ಣಪ್ಪ, ಹನುಮಪ್ಪ, ರವಿ, ಬ್ಯಾಟಪ್ಪ, ಸಂಜೀವಯ್ಯ, ಹೊಲೇರಹಳ್ಳಿ ಅಶೋಕ್, ಆಂಜಿನಪ್ಪ ಹಾಗೂ ಅಸಿಸ್ಟೆಂಟ್ ಇಂಜಿನಿಯರ್ ವೇಮಗಲ್ ಗುರಪ್ಪ, ನರಸಾಪುರ ಕೋಟರೆಡ್ಡಿ, ಕ್ಯಾಲನೂರು ನಾಗರತ್ನ, ಸುಗಟೂರು ಆಲಿ ಭಾಷಾ, ಚೌಡರೆಡ್ಡಿ, ಪ್ರಭಾಕರ್ ಸೇರಿದಂತೆ ನೌಕರರ ಸಿಬ್ಬಂದಿ ವರ್ಗ, ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.






























