
ಬೀದರ:ಜೂ.30:ಒಳ ಮೀಸಲಾತಿಯ ಅವೈಜ್ಞಾನಿಕ ಹಂಚಿಕೆಯ ಮೂಲಕ ಬಂಜಾರಾ ಸಮಾಜಕ್ಕೆ ಅನ್ಯಾಯ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಚಿವರು ಹಾಗೂ ಔರಾದ(ಬಿ) ಕ್ಷೇತ್ರದ ಶಾಸಕರಾದ ಪ್ರಭು ಬಿ. ಚವ್ಹಾಣ ಅವರ ನೇತೃತ್ವದಲ್ಲಿ ಸೋಮವಾರ ಬೀದರ ನಗರದಲ್ಲಿ ಬೃಹತ್ ಜನಜಾಗೃತಿ ಸಮಾವೇಶ ಹಾಗೂ ಪ್ರತಿಭಟನಾ ಮೆರವಣಿಗೆ ನಡೆಯಿತು.
ಪ್ರತಿಭಟನೆಯ ಆರಂಭಕ್ಕೂ ಮುನ್ನ ಜಿಲ್ಲಾ ಬಂಜಾರಾ ಭವನದ ಬಳಿಯಿರುವ ಭವಾನಿ ದೇವಿ ಹಾಗೂ ಸಂತ ಶ್ರೀ ಸೇವಾಲಾಲ ಮಹಾರಾಜರ ಮಂದಿರಕ್ಕೆ ಸಮಾಜದ ಮುಖಂಡರು ತೆರಳಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಬಳಿಕ ಅಲ್ಲಿಂದಲೇ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಸಾವಿರಾರು ಸಂಖ್ಯೆಯ ಬಂಜಾರಾ ಸಮಾಜದ ಮುಖಂಡರು, ಮಹಿಳೆಯರು, ಯುವಕರು ಹಾಗೂ ಸಮಾಜ ಬಾಂಧವರು ಕಾಲ್ನಡಿಗೆಯ ಮೂಲಕ ಮೆರವಣಿಗೆ ನಡೆಸಿ ಝೀರಾ ಫಂಕ್ಷನ್ ಹಾಲ್ ವರೆಗೆ ತೆರಳಿದರು. ಈ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಬಂಜಾರಾ ಸಮಾಜಕ್ಕೆ ಆಗಿರುವ ಅನ್ಯಾಯವನ್ನು ಖಂಡಿಸಿ ಸರ್ಕಾರಕ್ಕೆ ತೀವ್ರ ಎಚ್ಚರಿಕೆ ನೀಡಿದರು.
ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಪ್ರಭು ಚವ್ಹಾಣ ಅವರು, ಕಾಂಗ್ರೆಸ್ ಸರ್ಕಾರ ಬಂಜಾರಾ ಸಮಾಜಕ್ಕೆ ಮೋಸ ಮತ್ತು ಅನ್ಯಾಯ ಮಾಡಿದೆ. ಒಳ ಮೀಸಲಾತಿಯನ್ನು ಸಂಪೂರ್ಣ ಅವೈಜ್ಞಾನಿಕವಾಗಿ ಜಾರಿಗೊಳಿಸಿದ್ದು, ಬಂಜಾರಾ ಸಮಾಜದ ಜನಸಂಖ್ಯೆ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಪರಿಗಣಿಸಿಲ್ಲ.ಕೇವಲ ಬಂಜಾರಾ, ಭೋವಿ, ಕೊರಮ ಹಾಗೂ ಕೊರಚ ಸಮಾಜಗಳಿಗೆ ಶೇ. 4.5 ಮೀಸಲಾತಿ ನೀಡಲಾಗಿತ್ತು. ಈಗ ಈ ಸಮಾಜಗಳೊಂದಿಗೆ ಇನ್ನೂ 59 ಜಾತಿಗಳನ್ನು ಸೇರಿಸುವ ಮೂಲಕ ಈ ಎಲ್ಲ ಸಮಾಜಗಳ ಹಕ್ಕನ್ನು ಕಸಿದುಕೊಂಡಿದ್ದು, ಎಲ್ಲರಿಗೂ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.
ರಾಜ್ಯಾದ್ಯಂತ ಜನಜಾಗೃತಿ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈಗಾಗಲೇ ಕಲಬುರಗಿಯಲ್ಲಿ ಯಶಸ್ವಿಯಾಗಿ ನಡೆದಿವೆ. ಬೀದರದ ನಂತರ ಯಾದಗಿರಿ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಇನ್ನು 10 ಪಟ್ಟು ಹೋರಾಟ ತೀವ್ರಗೊಳ್ಳಲಿದೆ. ಬಿತ್ತನೆ ಸಮಯದಲ್ಲಿ ಕೆಲಸ ಕಾರ್ಯಗಳನ್ನು ಬಿಟ್ಟು ಹೋರಾಟಕ್ಕೆ ಸಹಕರಿಸಿದ ಸಮಾಜ ಬಾಂಧವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಹೋರಾಟ ರಾಜಕೀಯಕ್ಕಾಗಿ ಅಲ್ಲ, ಸಮಾಜದ ಮಕ್ಕಳ ಭವಿಷ್ಯಕ್ಕಾಗಿ ನಡೆಯುತ್ತಿದೆ. ನಮ್ಮ ಮಕ್ಕಳು ಐಎಎಸ್, ಐಪಿಎಸ್, ವೈದ್ಯರು, ಇಂಜಿನಿಯರ್‍ಗಳಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕಾದರೆ ನ್ಯಾಯಯುತ ಮೀಸಲಾತಿ ದೊರೆಯಬೇಕು. ಆದ್ದರಿಂದ ಸಮಾಜದ ಎಲ್ಲರೂ ಒಗ್ಗಟ್ಟಿನಿಂದ ಹೋರಾಟದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ನಾವು ಯಾರ ಬಳಿಯೂ ಭಿಕ್ಷೆ ಕೇಳುತ್ತಿಲ್ಲ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನಬದ್ಧ ಹಕ್ಕನ್ನು ಕೇಳುತ್ತಿದ್ದೇವೆ. ಸರ್ಕಾರ ಒಳ ಮೀಸಲಾತಿಯನ್ನು ಕೂಡಲೇ ಮರುಪರಿಶೀಲಿಸಿ ಎಲ್ಲ ಸಮಾಜಗಳಿಗೆ ನ್ಯಾಯ ಕಲ್ಪಿಸಬೇಕು. ಇಲ್ಲವಾದರೆ ಜಿಲ್ಲಾಧಿಕಾರಿಗಳ ಕಚೇರಿಗಳಿಗೆ, ಸಮಾಜ ಕಲ್ಯಾಣ ಇಲಾಖೆ ಕಚೇರಿಗಳಿಗೆ ಮುತ್ತಿಗೆ, ರಸ್ತೆ ತಡೆ ಸೇರಿದಂತೆ ರಾಜ್ಯಾದ್ಯಂತ ಉಗ್ರ ಸ್ವರೂಪದ ಹೋರಾಟಗಳನ್ನು ನಡೆಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕಲಬುರಗಿಯ ಮಾಜಿ ಸಂಸದ ಡಾ.ಉಮೇಶ ಜಾಧವ ಮಾತನಾಡಿ, ಬಂಜಾರಾ ಸಮಾಜ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಾಕಷ್ಟು ಹಿಂದುಳಿದಿದ್ದು, ಕಾಂಗ್ರೆಸ್ ನಾಯಕರು ಬಂಜಾರಾ ಸಮಾಜವನ್ನು ಪರಿಶಿಷ್ಟ ಜಾತಿಯಿಂದ ತೆಗೆದುಹಾಕಲಾಗುತ್ತದೆ ಎಂದು ಅಪಪ್ರಚಾರ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಬಂಜಾರಾ ಸಮಾಜ ಸ್ವಾತಂತ್ರ್ಯ ಪೂರ್ವದಿಂದಲೂ ಪರಿಶಿಷ್ಟ ಜಾತಿಯಲ್ಲಿಯೇ ಇದ್ದು, ಅದನ್ನು ತೆಗೆದುಹಾಕುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದು, ಎಲ್ಲರೂ ಇದರ ವಿರುದ್ಧ ಧ್ವನಿ ಎತ್ತಬೇಕು ಎಂದು ಹೇಳಿದರು.
ಶಿರಹಟ್ಟಿ ಕ್ಷೇತ್ರದ ಶಾಸಕರಾದ ಡಾ.ಚಂದ್ರು ಲಮಾಣಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಪದೇ ಪದೇ ಬಂಜಾರಾ ಸಮಾಜವನ್ನು ನಿರ್ಲಕ್ಷಿಸುತ್ತಾ ಬಂದಿದೆ. ಒಳ ಮೀಸಲಾತಿ ಮೂಲಕ ಸಮಾಜಗಳಿಗೂ ಅನ್ಯಾಯ ಮಾಡಿದೆ. ಚುನಾವಣೆಗೂ ಮುನ್ನ ಸಮಾಜದ ಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಅದೇ ಸಮಾಜದ ವಿರುದ್ಧ ನಿರ್ಧಾರ ಕೈಗೊಂಡಿದೆ. ನ್ಯಾಯ ದೊರೆಯುವವರೆಗೆ ಹೋರಾಟ ಮುಂದುವರಿಯಲಿದ್ದು, ಸಮಾಜದ ಹಿತಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಹೇಳಿದರು.
ಮುಖಂಡರಾದ ಮಣಿಕಂಠ ರಾಠೋಡ ಹಾಗೂ ಲಿಂಬಾ ನಾಯಕ್ ಅವರು ಮಾತನಾಡಿ, ಬಂಜಾರಾ ಸಮಾಜದ ಹಕ್ಕುಗಳ ರಕ್ಷಣೆಗಾಗಿ ಎಲ್ಲರೂ ಸಂಘಟಿತರಾಗಿ ಹೋರಾಟ ನಡೆಸುವಂತೆ ಕರೆ ನೀಡಿದರು. ಮುಖಂಡರಾದ ಅಣ್ಣಾರಾವ ರಾಠೋಡ, ತಾನಾಜಿ ರಾಠೋಡ, ರಾಮಶೆಟ್ಟಿ ಪನ್ನಾಳೆ, ಗುರುನಾಥ ರಾಜಗೀರೆ, ಶಿವಾಜಿರಾವ ಪಾಟೀಲ ಮುಂಗನಾಳ, ಸಚಿನ್ ರಾಠೋಡ, ಸುಜಿತ್ ರಾಠೋಡ, ಪ್ರದೀಪ್ ಪವಾರ, ಭಗುಸಿಂಗ್ ಜಾಧವ, ಗೋಪಾಲಸಿಂಗ್ ರಾಠೋಡ, ವೀರಶೆಟ್ಟಿ ರಾಠೋಡ, ಮಾಣಿಕ ಪವಾರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಬಸವರಾಜ ಪವಾರ ಪ್ರಾಸ್ತಾವಿಕ ಮಾತನಾಡಿದರು. ಭಗುಸಿಂಗ ಜಾಧವ ನಿರೂಪಿಸಿದರು. ಶಿವಲೀಲಾ ಚಿದ್ರೆ ದೇಶಭಕ್ತಿ ಗೀತೆ ಹಾಡಿದರು.





























