
ಬೆಂಗಳೂರು, ಜ. ೨೨- ವಿಧಾನಸಭೆಯಲ್ಲಿಂದು ಕಾಂಗ್ರೆಸ್ ಸದಸ್ಯರು ರಾಜ್ಯಪಾಲರಿಗೆ ಅಗೌರವ ತೋರಿರುವುದನ್ನು ಖಂಡಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೋಲೆ ಮಾಡಿದೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ತಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕಲು ಹಾಗೂ ದ್ವೇಷ ರಾಜಕಾರಣ ಮಾಡಲು ಸದನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಟೀಕಿಸಿದರು.
ನರೇಗಾ ಯೋಜನೆಯಲ್ಲಿ ಕೇಂದ್ರ ಸರ್ಕಾರ ಸುಧಾರಣೆಗಳನ್ನು ತಂದಿದೆ. ಆದರೆ ಕಾಂಗ್ರೆಸ್ ಈ ಬಗ್ಗೆ ಅಪಪ್ರಚಾರ ನಡೆಸುತ್ತಿದೆ. ವಿಧಾನಸಭೆಯಲ್ಲಿ ೧೪೦ ಶಾಸಕರ ಬೆಂಬಲ ಇದೆ ಎಂದು ದರ್ಪದಲ್ಲಿ ದಬ್ಬಾಳಿಕೆ ನಡೆಸುತ್ತಿದೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಸದನದ ಒಳಗಡೆ ರಾಜ್ಯಪಾಲರಿಗೆ ಅಗೌರವ ಸೂಚಿಸುವ ಕೆಲಸವನ್ನು ಆಡಳಿತ ಪಕ್ಷದವರು ಮಾಡಿದ್ದು, ಖಂಡನಾರ್ಹ ಎಂದರು.
ಕಾಂಗ್ರೆಸ್ ಸರ್ಕಾರ ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುವ ದಾರಿಯಲ್ಲಿ ಸಾಗುತ್ತಿದೆ. ಸದನದ ದುರ್ಬಳಕೆಯನ್ನು ಮಾಡಲು ಹೊರಟಿರುವುದು ದುರ್ದೈವ ಎಂದರು.
ರಾಜ್ಯದ ಜನರು ಎಲ್ಲವನ್ನು ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ತನ್ನ ನಡವಳಿಕೆ ಸರಿಮಾಡಿಕೊಳ್ಳದೆ ಹೋದರೆ ಜನ ಪಾಠಕಲಿಸುತ್ತಾರೆ. ಇದನ್ನು ಅರ್ಥ ಮಾಡಿಕೊಂಡು ಕಾಂಗ್ರೆಸ್ ಸರ್ಕಾರವು ಸರಿಯಾದ ದಾರಿಯಲ್ಲಿ ಹೋಗಬೇಕು. ಪ್ರಜಾಪ್ರಭುತ್ವ ಸಂವಿಧಾನ ಗೌರವ ಉಳಿಸಬೇಕು ಎಂದು ಆಗ್ರಹಿಸಿದರು.




























