
ತುಮಕೂರು, ಅ. ೨೯- ಪ್ರಸ್ತುತ ಬದಲಾದ ಕಾಲಘಟ್ಟದಲ್ಲಿ ತ್ರಿಮತಸ್ಥ ಬ್ರಾಹ್ಮಣರು ತಮ್ಮಲ್ಲಿ ರುವ ಕಟ್ಟುಪಾಡುಗಳನ್ನು ಸರಳೀಕರಣ ಗೊಳಿಸಿಕೊಂಡು ಪರಸ್ಪರ ವೈವಾಹಿಕ ಸಂಬಂಧಗಳನ್ನು ಬೆಳೆಸಿಕೊಂಡು ಪ್ರೀತಿ, ವಿಶ್ವಾಸ ಹಾಗೂ ಒಗ್ಗಟ್ಟಿನಿಂದ ಜೀವಿಸಬೇಕು ಎಂದು ಬೆಂಗಳೂರಿನ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಹಿರಿಯ ಉಪಾಧ್ಯಕ್ಷ ಲಕ್ಷ್ಮೀಕಾಂತ್ ಸಲಹೆ ನೀಡಿದರು.
ನಗರದ ಶಂಕರಮಠದಲ್ಲಿ ಬೆಂಗಳೂರಿನ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮೈಸೂರಿನ ಮಂಗಳಸೂತ್ರ ಫೌಂಡೇಷನ್, ಜಿಲ್ಲಾ ಬ್ರಾಹ್ಮಣಸಭಾ ಮತ್ತು ಶಂಕರ ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣಾ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಬ್ರಾಹ್ಮಣ ಸಮಾಜದ ಸಂಸ್ಕಾರ, ಮೌಲ್ಯಗಳು ಹಾಗೂ ಪರಂಪರೆಯನ್ನು ಉಳಿಸಿ, ಬೆಳೆಸುವ ಅಗತ್ಯವಿದೆ. ಬ್ರಾಹ್ಮಣ ಯುವಕ-ಯುವತಿಯರಲ್ಲಿ ಅನ್ಯ ಧರ್ಮ-ಜಾತಿಗಳವರೊಂದಿಗೆ ಪೋಷಕರ ವಿರೋಧದ ನಡುವೆಯೂ ವಿವಾಹಗಳು ನಡೆಯುತ್ತಿದ್ದು, ಹೊಂದಾಣಿಕೆಯ ಕೊರತೆ, ವಿಭಿನ್ನ ಆಲೋಚನೆಯ ಪರಿಣಾಮ ವಿಚ್ಛೇದನಗಳು ಹೆಚ್ಚಾಗುತ್ತಿವೆ. ಇವುಗಳನ್ನು ಹೋಗಲಾಡಿಸಲು ತ್ರಿಮತಸ್ಥ ಬ್ರಾಹ್ಮಣ ಸಮುದಾಯ ಪರಸ್ಪರ ವೈವಾಹಿಕ ಸಂಬಂಧಗಳನ್ನು ಹೊಂದುವುದು ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಬ್ರಾಹ್ಮಣ ಸಭಾಧ್ಯಕ್ಷ ಹೆಬ್ಬಳಲು ಚಂದ್ರಶೇಖರ್ ಮಾತನಾಡಿ, ಹಿಂದೆ ಮದುವೆ ಮತ್ತಿತರ ಸಮಾರಂಭಗಳು ಗುರು ಹಿರಿಯರ ಸಮ್ಮುಖದಲ್ಲಿ ಅಚ್ಚುಕಟ್ಟಾಗಿ, ಅರ್ಥಪೂರ್ಣವಾಗಿ ನೆರವೇರುತ್ತಿದ್ದವು. ಆದರೆ ಇಂದು ನಿರೀಕ್ಷೆಗಳು ಹೆಚ್ಚಿದ್ದು. ಅದ್ದೂರಿ ಹಾಗೂ ಆಡಂಬರಗಳು ಹೆಚ್ಚಾಗಿವೆ. ಸಂಸ್ಕೃತಿ, ಮೌಲ್ಯಗಳು ಕಣ್ಮರೆಯಾಗುತ್ತಿವೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜಾಗೃತರಾಗಿ, ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗೆ ಬ್ರಾಹ್ಮಣ ಸಭಾಗೆ ಬೆಂಬಲ ನೀಡಬೇಕು ಎಂದರು.
ಸಮಾರಂಭದಲ್ಲಿ ಮಂಗಳಸೂತ್ರ ಫೌಂಡೇಷನ್‌ನ ಶ್ರೀನಿವಾಸ ಭಾರದ್ವಾಜ್, ರಾಜ್ಯ ಬ್ರಾಹ್ಮಣ ಸಭಾದ ಜಿಲ್ಲಾ ಪ್ರತಿನಿಧಿ ಡಾ.ಹೆಚ್.ಹರೀಶ್, ಶಂಕರಸೇವಾ ಸಮಿತಿ ಅಧ್ಯಕ್ಷ ಕೆ.ಹಿರಿಯಣ್ಣ, ಉಪಾಧ್ಯಕ್ಷ ಹೆಚ್.ಕೆ.ರಮೇಶ್, ಕಾರ್ಯದರ್ಶಿ ಮಂಜುನಾಥ್, ಜಿಲ್ಲಾ ಬ್ರಾಹ್ಮಣಸಭಾ ಉಪಾಧ್ಯಕ್ಷೆ ಸುಭಾಷಿಣಿ ರವೀಶ್, ಸೌಮ್ಯರವಿ, ಮಾಜಿ ಕಾರ್ಪೊರೇಟರ್ ಸಿ.ಎನ್.ರಮೇಶ್ ಮತ್ತಿತರರು ಭಾಗವಹಿಸಿದ್ದರು.

































