ಬೀದರ್: ಡಿ.1:ಶಾಹು ಮಹಾರಾಜ, ಮಹಾತ್ಮ ಜೋತಿಬಾ ಫುಲೆ, ಜಗಜ್ಯೋತಿ ಬಸವೇಶ್ವರರು, ಡಾ.ಬಿ.ಆರ್ ಅಂಬೇಡ್ಕರ್ ಈ ಎಲ್ಲ ಮಹಾತ್ಮರನ್ನು ಗೌರವಿಸುವ ಔದಾರ್ಯ ಮರಾಠಾ ಸಮಾಜ ಬೆಳೆಸಿಕೊಂಡರೆ ಎಲ್ಲ ಸಮಾಜದವರು ಛತ್ರಪತಿ ಶಿವಾಜಿ ಮಹಾರಾಜ ಅವರನ್ನು ಮನಪೂರ್ತಿ ಗೌರವಿಸುತ್ತಾರೆ. ಇದರಿಂದ ಪರಸ್ಪರ ಸಹೋದರತ್ವ ಬೆಳೆಯುತ್ತದೆ ಎಂದು ರಾಜ್ಯದ ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ಗಣೇಶ ಮೈದಾನದಲ್ಲಿ ಸಕಲ ಮರಠಾ ಸಮಾಜ ವತಿಯಿಂದ ಭಾನುವಾರ ಆಯೋಜಿಸಿದ್ದ ಸ್ವಾಭಿಮಾನಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಛತ್ರಪತಿ ಶಿವಾಜಿ ಮಹಾರಾಜ ಅವರು ಜಗತ್ತಿನ ಅತಿದೊಡ್ಡ ಸೆಕ್ಯುಲರ್ ನಾಯಕರಾಗಿದ್ದರು. ಅವರು ಮೊಘಲರ ವಿರುದ್ಧ ಹೋರಾಡಿದರು ಹೊರತು ಮುಸ್ಲಿಮರ ವಿರುದ್ಧ ಅಲ್ಲ. ಇದನ್ನು ಮರಾಠಿಗರು ಅರಿತುಕೊಳ್ಳಬೇಕು. ಶಿವಾಜಿ ಅವರ ಸಮಾಧಿ ಪತ್ತೆ ಹಚ್ಚಿದ್ದು ಜ್ಯೋತಿಬಾ ಫುಲೆ ಅವರು. ಶಿವಾಜಿಯವರಷ್ಟೇ ಜ್ಯೋತಿಬಾ ಫುಲೆ ಅವರಿಗೂ ಗೌರವ ಕೊಡಬೇಕು. 1902ರಲ್ಲಿ ಶಾಹು ಮಹಾರಾಜ್ ಅವರು ದೇಶದಲ್ಲಿ ಮೊದಲ ಬಾರಿಗೆ ಮೀಸಲಾತಿ ಜಾರಿಗೆ ತಂದರು. ಶಾಹು ಮಹಾರಾಜ್, ಗಾಯಕವಾಡ್ ಮಹಾರಾಜ್ ಅವರ ಸಹಾಯದಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರು ಹೊರದೇಶಕ್ಕೆ ಹೋಗಿ ವ್ಯಾಸಂಗ ಮಾಡಿ, 36 ಪದವಿ ಪಡೆದರು. ಬಸವಣ್ಣ ಜಗತ್ತಿನ ಅತಿದೊಡ್ಡ ಸಮಾಜ ಸುಧಾರಕ. ಈ ಎಲ್ಲ ಮಹಾನ್ ಪುರುಷರಿಗೆ ನಾವು ನಿತ್ಯ ಗೌರವಿಸಬೇಕೆಂದು ಕರೆ ನೀಡಿದರು.
ಮುಖ್ಯಮಂತ್ರಿ ಆಗುವುದು ನನಗೆ ಬೇಕಿಲ್ಲ. ಅದರಲ್ಲಿ ನನಗೆ ಆಸಕ್ತಿಯೂ ಇಲ್ಲ. ನಾಲ್ಕು ಸಲ ಶಾಸಕನಾಗಿ ಮೂರು ಸಲ ಸಚಿವನಾಗಿ ಕೆಲಸ ಮಾಡಿದ್ದೇನೆ. ರಾಜಕಾರಣ ಮಾಡದಿದ್ದರೂ ನಾನು ಆರಾಮಾಗಿ ಇರಬಹುದು. ಮರಾಠಾ ಸಮಾಜ ಬಹಳ ಕಷ್ಟದಲ್ಲಿದೆ. ಅದನ್ನು ಮೇಲೆತ್ತುವ ಕೆಲಸ ಆಗಬೇಕಿದೆ. ಈ ಕಾರ್ಯಕ್ರಮದ ಉದ್ದೇಶವೂ ಅದೇ. ಇದು ಶಕ್ತಿ ಪ್ರದರ್ಶನದ ಕಾರ್ಯಕ್ರಮವಲ್ಲ ಒಗ್ಗಟ್ಟು ಪ್ರದರ್ಶಿಸುವುದು ಎಂದು ಹೇಳಿದರು.
ಜೀಜಾಮಾತಾ ಹೆಸರಿನಲ್ಲಿ ತಕ್ಷಣವೇ ಒಂದು ಟ್ರಸ್ಟ್ ಸ್ಥಾಪಿಸಿ ನೋಂದಣಿ ಪ್ರಕ್ರಿಯೆ ಆರಂಭಿಸಬೇಕು. ಅದಕ್ಕೆ ನನ್ನ ಫೌಂಡೇಶನ್‍ನಿಂದ ಎಲ್ಲಾ ರೀತಿಯ ಅಗತ್ಯ ನೆರವು ನೀಡಲಾಗುವುದು. ಸಮಾಜವನ್ನು ಸಂಘಟಿಸಿ ಸಮಾಜದ ಬಡವರು ಶೋಷಿತರನ್ನು ಮೇಲೆತ್ತುವ ಕೆಲಸ ಮಾಡಬೇಕು. ಬೀದರ್‍ನಲ್ಲಿ ಈ ದಿನ ಐತಿಹಾಸಿಕ ಸಮಾವೇಶ ನಡೆದಿದೆ. ನಿಜಕ್ಕೂ ಇದೊಂದು ಮಾದರಿ. ಈ ಮಾದರಿಯನ್ನು ರಾಜ್ಯದಾದ್ಯಂತ ವಿಸ್ತರಿಸಿ ಬರುವ ದಿನಗಳಲ್ಲಿ ಸಮಾಜದವರನ್ನು ಸಂಘಟಿಸಲು ಪ್ರಯತ್ನಿಸುತ್ತೇನೆ. ಸಮಾಜದ ಪ್ರತಿಯೊಬ್ಬರೂ ಸಮಾಜಕ್ಕಾಗಿ ಕೆಲಸ ಮಾಡಬೇಕು. ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಹತ್ತು ವರ್ಷಗಳಲ್ಲಿ ಬದಲಾವಣೆ ಕಾಣಬಹುದು ಎಂದು ಲಾಡ್ ಹೇಳಿದರು.
ದಾದಾ ಮಹಾರಾಜ್ ನಗರಕರ್ ಅವರು ಪುಣೆ ಬಿಟ್ಟು ಬೀದರ್‍ನಲ್ಲಿ ಮಠ ಸ್ಥಾಪಿಸಬೇಕು. ಎರಡ್ಮೂರು ಎಕರೆ ಜಾಗ ಖರೀದಿಸಿ ಇಲ್ಲಿ ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕು. ಗುರುಗಳು ಮರಾಠಾರು ಸೇರಿದಂತೆ ಎಲ್ಲರನ್ನೂ ಜತೆಗೆ ಕರೆದೊಯ್ಯಬೇಕು. ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.
ದಾದಾ ಮಹಾರಾಜ್ ನಗರಕರ್ ಮಾತನಾಡಿ, ಶಿವಾಜಿ ಮಹಾರಾಜರ ಆಚಾರ-ವಿಚಾರಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು. ಅವರ ತತ್ವಾದರ್ಶಗಳ ಪ್ರಚಾರಕ್ಕೆ ಮಠ ಸ್ಥಾಪಿಸುವ ಅಗತ್ಯವಿದೆ ಎಂದರು.
ಕರ್ನಾಟಕ ಮರಾಠಾ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಚ್. ಮರಿಯೋಜಿರಾವ್ ಮಾತನಾಡಿ, ಇಡೀ ದೇಶದಲ್ಲೇ ಮರಾಠಾ ಸಮಾಜ ಬಹಳ ಹಿಂದುಳಿದಿದೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸಮಾಜವನ್ನು ಮೇಲೆತ್ತಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಹಂತ ಹಂತವಾಗಿ ರಾಜ್ಯದಾದ್ಯಂತ ಸಮಾಜವನ್ನು ಸಂಘಟಿಸುವ ಕೆಲಸ ಮಾಡಲಾಗುವುದು ಎಂದರು.
ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಅಧ್ಯಕ್ಷ ಸುರೇಶ ಸಾಠೆ, ಮುಖಂಡರಾದ ದಿಗಂಬರರಾವ್ ಮಾನಕಾರಿ, ಪದ್ಮಾಕರ ಪಾಟೀಲ, ಜನಾರ್ಧನ ಬಿರಾದಾರ, ರಾಮರಾವ ವರವಟ್ಟಿಕರ್, ಅಮರ ಜಾಧವ್, ಕೋಂಡಿಬಾ, ಅನಿಲ್ ವಾಡೇಕರ್, ವಸಂತರಾವ್ ನಾಗದೆ, ದೇವಾನಂದ ಬಗದೂರೆ, ನಾರಾಯಣ ಗಣೇಶ್, ಬಾಬುರಾವ್ ಕಾರಬಾರಿ, ಶಿವಾಜಿರಾವ್ ಪಾಟೀಲ್ ಇಂಚೂರ್, ಪ್ರಕಾಶ್ ಪಾಟೀಲ್, ಅನಿಲ್ ಭೂಸಾರೆ, ಪ್ರಭಾವತಿ, ಮೀನಾಕ್ಷಿ ಕಾಳೆ, ಅನಿಲ್ ಶಿಂಧೆ ಮತ್ತಿತರರು ಇದ್ದರು. ಅನಿಲ ಕಾಳೆ, ಪ್ರದೀಪ ಬಿರಾದಾರ ಹಾಗೂ ಗೋರಖ ಶ್ರೀಮಾಳೆ ಕಾರ್ಯಕ್ರಮ ಸಂಘಟಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಮುಖಂಡರು ಶಿವಾಜಿ ಮಹಾರಾಜ್ ವೃತ್ತದಲ್ಲಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವಿಸಿದರು.





















