ಕಲಬುರಗಿ,ಜೂ.12: 52 ವರ್ಷದ ಮಹಿಳೆಯೊಬ್ಬರ ಅಂಡಾಶಯದಲ್ಲಿ ಬೆಳೆದಿದ್ದ ಐದು ಕಿಲೋಗ್ರಾಂ ತೂಕದ ಕ್ಯಾನ್ಸರ್ ಗಡ್ಡೆಯನ್ನು ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಮಹಿಳೆಯ ಪ್ರಾಣ ರಕ್ಷಿಸುವಲ್ಲಿ ಇಲ್ಲಿನ ಬಾರೆ ಹಿಲ್ಸ್ ಬಡಾವಣೆಯ ಮಣೂರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರು ಯಶಸ್ವಿಯಾಗಿದ್ದಾರೆ.
ನಗರದ ರಿಂಗ್ ರಸ್ತೆಯ ಬಾರೆ ಹಿಲ್ಸ್ ಸಮೀಪದ ಮಣೂರ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಫಾರೂಕ್ ಅಹ್ಮದ್ ಮಣೂರ್ ಆಸ್ಪತ್ರೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, 52 ವರ್ಷದ ಗುರುಬಾಯಿ ಇಂತಹ ಅಪರೂಪದ ಕ್ಯಾನ್ಸರ್ ಗಡ್ಡೆಯಿಂದಾಗಿ ಇದೀಗ ತಮ್ಮ ಆಸ್ಪತ್ರೆಯ ತಜ್ಞ ವೈದ್ಯರು ಕೈಗೊಂಡ ಶಸ್ತ್ರಚಿಕಿತ್ಸೆಯಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದರು.
ಸಾಮಾನ್ಯವಾಗಿ ಮುಟ್ಟು ನಿಂತ ಮಹಿಳೆಯರಲ್ಲಿ ಇಂತಹ ಸಮಸ್ಯೆ ಕಂಡುಬರುತ್ತದೆ. ಅದೇರೀತಿ, ಕಳೆದ ನಾಲ್ಕು ತಿಂಗಳಿಂದ ತೀವ್ರ ಸ್ವರೂಪದ ಹೊಟ್ಟೆ ನೋವಿನಿಂದ ಗುರುಬಾಯಿ ನರಳುತ್ತಿದ್ದರು. ಮೇಲಾಗಿ ಅವರ ಹೊಟ್ಟೆಯ ಗಾತ್ರವೇ ದಿನೇದಿನೆ ದೊಡ್ಡದಾಗುತ್ತಾ ಬರುತ್ತಿತ್ತು. ಇದರಿಂದಾಗಿ ಗಾಬರಿಗೊಂಡ ಕುಟುಂಬಸ್ಥರು ಆಕೆಯನ್ನು ಮಣೂರ್ ಆಸ್ಪತ್ರೆಗೆ ಕರೆ ತಂದಾಗ ಆಕೆಯ ಅಂಡಾಶಯದಲ್ಲಿ ಕ್ಯಾನ್ಸರ್‍ಕಾರಕ ಗಡ್ಡೆ ಬೆಳೆದಿರುವುದನ್ನು ಪತ್ತೆ ಹಚ್ಚಿ ಸಕಾಲದಲ್ಲಿ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಮಣೂರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿದಾಗ ನಮ್ಮ ತಜ್ಞ ವೈದ್ಯರು ಎಲ್ಲ ಆಯಾಮಗಳಲ್ಲಿ ತಪಾಸಣೆ ಕೈಗೊಂಡಿದ್ದಲ್ಲದೆ, ಎಂ.ಆರ್.ಐ ಸ್ಕ್ಯಾನ್ ಮಾಡಿಸಿದಾಗ ಆಕೆಯ ಅಂಡಾಶಯದಲ್ಲಿ ಕ್ಯಾನರ್ ಗಡ್ಡೆ ಪ್ರಾಣಾಂತಕ ಹಂತಕ್ಕೆ ಬಂದು ನಿಂತಿರುವುದು ಪತ್ತೆ ಹಚ್ಚಿದ್ದಾರೆ. ಮುಂದಿನ ಕೇವಲ ಎರಡು ಮೂರು ತಿಂಗಳು ವಿಳಂಬ ಆಗಿದ್ದರೂ ಆ ಗಡ್ಡೆ ಮೂರನೇ ಹಂತದ ಕ್ಯಾನ್ಸರ್ ಗಡ್ಡೆಯಾಗಿ ಮಾರ್ಪಡುವ ಎಲ್ಲ ಸಾಧ್ಯತೆಗಳಿದ್ದವು ಎಂದು ಮಾಹಿತಿ ನೀಡಿದರು.
ಇದೇವೇಳೆ, ಮಣೂರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸ್ತ್ರೀರೋಗ ಕ್ಯಾನ್ಸರ್ ತಜ್ಞೆ ಡಾ.ಸುಮಯ್ಯಾ ಸನಾ ಮಾತನಾಡಿ, ‘ನಿಜಕ್ಕೂ ಇದೊಂದು ಸವಾಲಿನ ಶಸ್ತ್ರಚಿಕಿತ್ಸೆಯಾಗಿತ್ತು. ಅಂಡಾಶಯದಲ್ಲಿ ಮಿತಿ ಮೀರಿದ ಅಳತೆಯಲ್ಲಿ ಬೆಳೆದು ನಿಂತಿದ್ದ ಕ್ಯಾನ್ಸರ್ ಗಡ್ಡೆ ಒಂದುವೇಳೆ, ಪಕ್ಕದ ಅನ್ನನಾಳ, ಮೂತ್ರನಾಳ, ರಕ್ತನಾಳ ಸೇರಿದಂತೆ ದೇಹದ ಯಾವುದೇ ಭಾಗಕ್ಕೆ ಸ್ವಲ್ಪ ತಾಕಿದ್ದರೂ ಆ ಭಾಗಗಳಿಗೂ ಕ್ಯಾನ್ಸರ್ ಕೋಶಗಳು ಹರಡುವ ಅಪಾಯವಿತ್ತು. ಆದರೆ ಸಕಾಲದಲ್ಲಿ ಸಮಸ್ಯೆ ಪತ್ತೆ ಹಚ್ಚಿದ್ದರಿಂದ ಅಂತಹ ಎಲ್ಲ ಅಪಾಯಕಾರಿ ಸಾಧ್ಯತೆಗಳಿಂದ ಆಕೆ ಬಚಾವ್ ಆಗಿದ್ದಾರೆ ಎಂದು ಸಮಾಧಾನ ವ್ಯಕ್ತಪಡಿಸಿದರು.
ಅರಿವಳಿಕೆ ತಜ್ಞ ಸತೀಶ್ ಶರಣಪ್ಪ, ಪ್ಯಾಥೊಲಾಜಿಸ್ಟ್ ಡಾ.ಜೀನತ್, ಡಾ.ಇಸ್ಮಾಯಿಲ್ ಚಾಂದ್, ವಿಕಿ ಪವಾರ್ ಸೇರಿದಂತೆ ಮಣೂರ್ ಆಸ್ಪತ್ರೆಯ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನಮ್ಮಲ್ಲಿ ಚಿಕಿತ್ಸೆಗೆ ಮೊದಲ ಆದ್ಯತೆ: ಡಾ.ಫಾರೂಕ್
ಮಣೂರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಮೊದಲು ಕಾಡುತ್ತಿರುವ ಸಮಸ್ಯೆ ಎಂಥದ್ದು ಎಂಬುದನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ನಮ್ಮ ತಜ್ಞ ವೈದ್ಯರು ಗಮನ ಕೇಂದ್ರೀಕರಿಸುತ್ತಾರೆ. ಮೇಲಾಗಿ, ಎಷ್ಟೇ ಗಂಭೀರವಾದ ಆರೋಗ್ಯ ಸಮಸ್ಯೆ ಇದ್ದರೂ ರೋಗಿ ಹಾಗೂ ರೋಗಿಯ ಕಡೆಯವರು ಧೈರ್ಯಗೆಡದಂತೆ ಮೊದಲು ಸಮಾಧಾನ ಹೇಳಿದ ಬಳಿಕವೇ ಚಿಕಿತ್ಸೆ ಆರಂಭಿಸಲಾಗುತ್ತದೆ. ಮಣೂರ್ ಆಸ್ಪತ್ರೆಯ ಈ ಚಿಕಿತ್ಸೆಯ ವಿಧಾನ ಜನಮಾನಸದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ ಎಂದು ಮಣೂರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಫಾರೂಕ್ ಮಣೂರ್ ಹೇಳುತ್ತಾರೆ.
ನಿರಂತರ ಆರೋಗ್ಯ ತಪಾಸಣೆ ಮುಖ್ಯ
ತೀವ್ರ ಸ್ವರೂಪದ ಹೊಟ್ಟೆನೋವಿನ ಸಮಸ್ಯೆಯೊಂದಿಗೆ ಗುರುಬಾಯಿ ಮಣೂರ್ ಆಸ್ಪತ್ರೆಗೆ ಬಂದಾಗ ಅದಾಗಲೇ ಆಕೆಯ ರಕ್ತದಲ್ಲಿ ಹೀಮೊಗ್ಲೋಬಿನ್ ಪ್ರಮಾಣದ ಭಾಗಶಃ ಕುಸಿದಿತ್ತು. ಇಂತಹ ಸಂದರ್ಭದಲ್ಲಿ ಆಕೆಗೆ ಶಸ್ತ್ರಚಿಕಿತ್ಸೆ ಕೈಗೊಳ್ಳುವಾಗ ಮತ್ತಷ್ಟು ರಕ್ತಸ್ರಾವ ಆಗುವ ಕಾರಣದಿಂದಾಗಿ ಆಕೆಯ ಜೀವಕ್ಕೆ ಅಪಾಯ ಉಂಟಾಗುವ ಎಲ್ಲ ಸಾಧ್ಯತೆಗಳಿದ್ದವು. ಹೀಗಾಗಿ, ರಕ್ತಪೂರಣ ಸಮೇತ ನಾಲ್ಕು ತಾಸುಗಳ ನಿರಂತರ ಶಸ್ತ್ರಚಿಕಿತ್ಸೆ ಕೈಗೊಳ್ಳುವ ಮೂಲಕ ಆಕೆಯ ಪ್ರಾಣಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ಮುಂಜಾಗ್ರತೆ ವಹಿಸಲಾಯಿತು ಎಂದು ಕ್ಯಾನ್ಸರ್ ತಜ್ಞೆ ಡಾ.ಸುಮಯ್ಯಾ ಸನಾ ಹೇಳಿದರು.
ಸುಮಾರು ಒಂದು ಲಕ್ಷದ ಪೈಕಿ ಏಳು ಮಹಿಳೆಯರ ಅಂಡಾಶಯದಲ್ಲಿ ಇಂತಹ ಅಪಾಯಕಾರಿ ಕ್ಯಾನ್ಸರ್ ಗಡ್ಡೆ ಕಂಡುಬರುತ್ತದೆ. ಹೀಗಾಗಿ, ಮುಟ್ಟು ನಿಂತ ಬಳಿಕ ಮಹಿಳೆಯರು ಆಗಾಗ ಅಂಡಾಶಯ ತಪಾಸಣೆ ಒಳಗೊಂಡಂತೆ ಎಲ್ಲ ರೀತಿಯ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಸಂಭವಿಸಬಹುದಾದ ಅಪಾಯವನ್ನು ತಡೆಯಬಹುದು ಎಂದರು.