Home ಜಿಲ್ಲೆ ಮನಗೂಳಿ ಅಗಸಿ ‘ಬಿ’ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

ಮನಗೂಳಿ ಅಗಸಿ ‘ಬಿ’ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

ಸಂಜೆವಾಣಿ ವಾರ್ತೆ,
ವಿಜಯಪುರ, ಆ. ೨೩: ಮನಗೂಳಿ ಅಗಸಿ ‘ಬಿ’ ವಲಯ ಮಟ್ಟದ ಪ್ರಾಥಮಿಕ ಕ್ರೀಡಾಕೂಟ ೨೦೨೬-೨೭ ವಿಜಯಪುರ ಜಿಲ್ಲಾ ಕ್ರೀಡಾಂಗಣದಲ್ಲಿ ಭರ್ಜರಿಯಾಗಿ ನಡೆಯಿತು.
ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ವಿಜಯಪುರ ಮತ್ತು ಸಿಕ್ಯಾಬ್ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆ, ನವರಸಪುರ ಇವರ ಸಹಯೋಗದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿತ್ತು.
ದೈಹಿಕ ಶಿಕ್ಷಣಾಧಿಕಾರಿ ಎಸ್.ಜೆ. ಬಿರಾದಾರ ಅವರು ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕ್ರೀಡಾಸ್ಫೂರ್ತಿಯಿಂದ ಸ್ಪರ್ಧಿಸಬೇಕು. ಕ್ರೀಡೆಯು ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾಗುವುದರ ಜತೆಗೆ ಶಿಸ್ತು, ಆತ್ಮವಿಶ್ವಾಸ ಮತ್ತು ತಂಡ ಮನೋಭಾವ ಬೆಳೆಸುತ್ತದೆ ಎಂದು ಹೇಳಿದರು.
ಕ್ರೀಡಾಕೂಟದಲ್ಲಿ ಒಟ್ಟು ೨೯ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ೧೦೦ ಹಾಗೂ ೨೦೦ ಮೀಟರ್ ಓಟ, ಅಡತಡೆ ಓಟ, ಉದ್ದ ಜಿಗಿತ, ಚಕ್ರ ಎಸೆತ, ಗುಂಡು ಎಸೆತ ಸೇರಿದಂತೆ ವಿವಿಧ ವೈಯಕ್ತಿಕ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು.
ವಾಲಿಬಾಲ್, ಥ್ರೋಬಾಲ್, ಖೋ-ಖೋ ಹಾಗೂ ಕಬಡ್ಡಿ ಸೇರಿದಂತೆ ವಿವಿಧ ತಂಡ ಸ್ಪರ್ಧೆಗಳೂ ನಡೆದವು. ವಿದ್ಯಾರ್ಥಿಗಳು ಉತ್ಸಾಹ ಹಾಗೂ ಕ್ರೀಡಾಸ್ಫೂರ್ತಿಯಿಂದ ಸ್ಪರ್ಧಿಸಿ ಗಮನ ಸೆಳೆದರು.
ಸಮೂಹ ಸಂಪನ್ಮೂಲ ವ್ಯಕ್ತಿ ಎಂ.ಎA. ಮುಲ್ಲಾ, ಸಿಕ್ಯಾಬ್ ಆಂಗ್ಲ ಮಾಧ್ಯಮ ಶಾಲೆ ನವರಸಪುರದ ಪ್ರಾಚಾರ್ಯೆ ಅನಿತಾ ನರೇಗಲ್, ಸಲೀಂ ಪುಣೇಕರ್ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು, ದೈಹಿಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.