ಹಿರೇಮಠದಲ್ಲಿ ಮಲ್ಲಿಕಾರ್ಜುನಸ್ವಾಮಿ ಪುನಃ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ

ತುಮಕೂರು, ಮೇ ೨೩- ಜಿಲ್ಲೆಯ ಅತ್ಯಂತ ಪ್ರಾಚೀನ ಕ್ಷೇತ್ರವಾದ ನಗರದ ಚಿಕ್ಕಪೇಟೆಯ ಹಿರೇಮಠದಲ್ಲಿ ಮೇ ೨೫ ರವರೆಗೆ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಪುನಃ ಪ್ರಾಣ ಪ್ರತಿಷ್ಠಾಪನ ಮಹೋತ್ಸವ, ವಿದ್ಯಾರ್ಥಿ ವಸತಿ ನಿಲಯ ಮತ್ತು ದಾಸೋಹ ಭವನದ ಉದ್ಘಾಟನೆ, ಧಾರ್ಮಿಕ ಮಹಾಸಭೆ ಮತ್ತು ದಾನಿಗಳಿಗೆ ಆಶೀರ್ವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಮಠದ ಅಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.


ಷಟ್‌ಸ್ಥಲ ಧಜ್ವಾರೋಹಣ, ಗಂಗಾಪೂಜೆ, ಅಗ್ರೋದಕ, ಗೋಪೂಜೆ, ಮಹಾ ಗಣಪತಿ ಪೂಜೆ, ದೇವಾಲಯ ಪ್ರವೇಶ, ಹೋಮ, ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು ಎಂದು ಶ್ರೀಗಳು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.


ಮೇ ೨೪ ರಂದು ಪಂಚ ಕಲಶ, ಸಪ್ತಸಭಾ, ಮಧ್ಯಾಹ್ನ ವಿಗ್ರಹಕ್ಕೆ ಪುಷ್ಪಾವದಿವಾಸ, ಮಂಗಳಾರತಿ, ಸಂಜೆ ೪.೩೦ರಿಂದ ಯಾಗ ಶಾಲಾ, ವಿವಿಧ ಹೋಮ, ಪೂರ್ಣಾಹುತಿ, ರಾತ್ರಿ ದೇವರಿಗೆ ಅಷ್ಪಬಂಧ ಸ್ಥಾಪನೆ ಇತ್ಯಾದಿ ನೆರವೇರಲಿದೆ ಎಂದರು.


ಮೇ ೨೫ ರಂದು ಬೆಳಿಗ್ಗೆ ೪.೩೦ ರಿಂದ ಮಲ್ಲಿಕಾರ್ಜುನಸ್ವಾಮಿ, ನಂದೀಶ್ವರ ಸ್ವಾಮಿ ವಿಗ್ರಹಗಳಿಗೆ ಪ್ರಾಣಪ್ರತಿಷ್ಠಾಪನೆ, ನೇತ್ರೋನ್ಮಿಲನ, ಗೋಪುರ ಕಳಾಶರೋಹಣ, ಕುಂಭಾಭಿಷೇಕ, ಮಹಾರುದ್ರಾಭಿಷೇಕ, ಬೆಳಿಗ್ಗೆ ೧೦ ಗಂಟೆಗೆ ಪೂರ್ಣಾಹುತಿ, ಮಹಾಮಂಗಳಾರತಿ, ಬೆಳಿಗ್ಗೆ ೧೧ ಗಂಟೆಗೆ ಧಾರ್ಮಿಕ ಮಹಾಸಭೆ, ದಾನಿಗಳಿಗೆ ಆಶೀರ್ವಾದ ಕಾರ್ಯಕ್ರಮ ನಡೆಯಲಿದೆ ಎಂದರು.


ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಮಠಾಧೀಶರು, ಸಚಿವರು, ಶಾಸಕರು, ಸಂಸದರು ಸೇರಿದಂತೆ ಅನೇಕ ಗಣ್ಯರಿಗೆ ಆಹ್ವಾನ ನೀಡಿದ್ದು, ಅವರು ಸಮಯ ಮಾಡಿಕೊಂಡು ಆಗಮಿಸಿದಾಗ ಭಾಷಣಕ್ಕೆ ವ್ಯವಸ್ಥೆ ಮತ್ತು ಮಠದಿಂದ ಗೌರವ ಸಮರ್ಪಣೆಗೆ ವ್ಯವಸ್ಥೆ ಮಾಡಿ ಕೊಂಡಿರುವುದಾಗಿ ತಿಳಿಸಿದರು.


೧೯೯೬ರಲ್ಲಿ ಈ ಮಠಕ್ಕೆ ತಾವು ಪೀಠಾಧ್ಯಕ್ಷರಾಗಿ ಆಗಮಿಸಿದಾಗ ಇಲ್ಲಿ ಹಳೆಯ ಕಲ್ಲು ಮಂಟಪವೊಂದಿತ್ತು. ಅದನ್ನು ಭಕ್ತರು ದಾನಿಗಳ ಸಹಕಾರದಿಂದ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಗೊಳಿಸಿ ಜನರು ನಿಂತು ನೋಡಿ ನಮಸ್ಕರಿಸುವಂತೆ ಅಭಿವೃದ್ಧಿಪಡಿಸಿರುವುದಾಗಿ ತಿಳಿಸಿದರು.


ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ, ಆಧ್ಯಾತ್ಮಿಕ ಕೇಂದ್ರವಾಗಿ ಪ್ರಗತಿ ಪಥದತ್ತ ದಾಪುಗಾಲು ಹಾಕುತ್ತಿದ್ದು, ಇಲ್ಲಿ ಜಾತ್ಯಾತೀತ ವಾತಾವರಣ ನಿರ್ಮಿಸಿ ಇದನ್ನು ಉತ್ತಮ ಕ್ಷೇತ್ರವಾಗಿ ಅಭಿವೃದ್ಧಿ ಪಡಿಸಿ ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಿರುವುದಾಗಿ ಹೇಳಿದರು.


ವೃದ್ಧರಿಗೆ ತೀರ್ಥಯಾತ್ರೆ, ಹೆಣ್ಣು ಮಕ್ಕಳಿಗೆ ವೇದಾಭ್ಯಾಸ, ಮಕ್ಕಳಿಗೆ ಬೇಸಿಗೆ ಶಿಬಿರ, ವಿದ್ಯಾರ್ಥಿನಿಲಯಗಳಿಗೆ ತೆರಳಿ ಪಾಠ ಪ್ರವಚನ, ಇತ್ಯಾದಿ ಬಹುಮುಖಿ ಕೆಲಸಗಳನ್ನು ಮಾಡಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ, ಬೆನ್ನು ತಟ್ಟುವ ಕೆಲಸವನ್ನು ಮಾಡಿರುವುದಾಗಿ ತಿಳಿಸಿದರು.


ನಗರಕ್ಕೆ ಸಮೀಪದ ಹಳೆನಿಜಗಲ್ ಬಳಿ ಎರಡೂವರೆ ಎಕರೆ ಜಾಗದಲ್ಲಿ ತಪೋವನ ನಿರ್ಮಿಸಿದ್ದು, ಮಠದ ವತಿಯಿಂದ ವಿದ್ಯಾಮಾನಸ ಹೆಸರಿನಲ್ಲಿ ಶಾಲೆಯೊಂದನ್ನು ಆರಂಭಿಸಿ ಗುಣಮಟ್ಟದ ಶಿಕ್ಷಣದ ಮೂಲಕ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಮಠ ಕಾರ್ಯನಿರ್ವಹಿಸುತ್ತಿದೆ ಎಂದರು.