ಸಹಸ್ರಾರು ಭಕ್ತರ ಮಧ್ಯೆ ಜರುಗಿದ ಮಲ್ಲಯ್ಯನ ಜಾತ್ರೆ

ಯಾದಗಿರಿ :ಜ.15: ಉತ್ತರ ಕರ್ನಾಟಕ ಹಾಗೂ ನೆರೆ ರಾಜ್ಯಗಳ ಭಕ್ತರ ಆರಾಧ್ಯದೈವನಾಗಿರುವ ತಾಲ್ಲೂಕಿನ ಮೈಲಾಪೂರದ ಬೆಟ್ಟದ ಮೇಲಿರುವ ಗುಹಾಂತರದಲ್ಲಿ ನೆಲೆಸಿರುವ ಮೈಲಾರಲಿಂಗೇಶ್ವರನ ಜಾತ್ರೆ ಬುಧವಾರ ಮಕರ ಸಂಕ್ರಮಣ ದಿನದಂದು ಸಹಸ್ರಾರು ಭಕ್ತರ ಮಧ್ಯೆ ಶಾಂತಿಯುತವಾಗಿ ಜರುಗಿತು.
ವರ್ಷದಲ್ಲಿ ಮಕರ ಸಂಕ್ರಾಂತಿ ಹಾಗೂ ದೀಪಾವಳಿ ದಿನದಂದು 2 ಭಾರಿ ಮಲ್ಲಯ್ಯನ ಜಾತ್ರೆ ಜರುಗುತ್ತದೆ, ಆದರೆ ಮಕರ ಸಂಕ್ರಾಂತಿ ದಿನದಂದು ಜರುಗುವ ಜಾತ್ರೆಗೆ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಆಂದ್ರಪ್ರದೇಶ ಸೇರಿದಂತೆ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ರವಿವಾರದಿಂದಲೇ ಮೈಲಾಪೂರಕ್ಕೆ ಆಗಮಿಸಿ, ಚಳಿಯನ್ನು ಲೆಕ್ಕಿಸದೇ ಜಾತ್ರೆಯಲ್ಲಿ ಪಾಲ್ಗೊಂಡರು.
ಇಂದು ಬೆಳಿಗ್ಗೆ 6 ಗಂಟೆಯಿಂದಲೇ ಅಸಂಖ್ಯಾತ ಭಕ್ತರ ಪವಿತ್ರ ಹೊನ್ನಕೆರೆಯಲ್ಲಿ ಪುಣ್ಯ ಸ್ನಾನ ಮಾಡಿ, ದೇವರ ದರ್ಶನ ಪಡೆಯಲು ಗಂಟೆಗಳ ಕಾಲ ಸರಧಿಯಲ್ಲಿ ನಿಂತು ಮಲ್ಲಯ್ಯನಿಗೆ ಏಳು ಕೋಟಿಗೆ, ಏಳು ಕೋಟಿಗೆ ಎಂಬ ಜೈಕಾರ ಹಾಕುತ್ತ ಉಲ್ಲಾಸದಿಂದ ಗದ್ದಲದ ನಡುವೆ ಗುಹಾಂತರ ದೇವಾಲಯ ತಲುಪಿ ಮಲ್ಲಯ್ಯನ ದರ್ಶನ ಪಡೆದು ಬೆಳ್ಳಿ, ಬಂಗಾರ, ಹಣವನ್ನು ದೇವರ ಹುಂಡಿಯಲ್ಲಿ ಹಾಕಿ ಭಕ್ತಿ ಸಮರ್ಪಿಸಿದರು.
ಜಾತ್ರೆಗೆ ಬರುವ ಸಕಲ ಭಕ್ತರಿಗೆ ಮಲ್ಲಯ್ಯನ ದರ್ಶನವಾಗಲಿ ಎಂದು ಜಿಲ್ಲಾಡಳಿತ ತಲಾ 300 ರೂ. ಟಿಕೇಟ್ ದರ ನಿಗಧಿಪಡಿಸಿರುವುದರಿಂದ ಅಲ್ಲಿಯೂ ಕೂಡ ಭಕ್ತರು ಜನಸಂದಣಿ ಮಧ್ಯೆ ದರ್ಶನ ಪಡೆದರು.

ಗ್ರಾಮೀಣ ಭಾಗದಿಂದ ರೈತ ಕುಟುಂಬಗಳು ದೇವಸ್ಥಾನ ಕೆಳಗೆ ಅಲ್ಲಲ್ಲಿ ಗುಂಪು-ಗುಂಪಾಗಿ ಅಡುಗೆ ಮಾಡಿ, ಮಲ್ಲಯ್ಯನಿಗೆ ನೈವೇದ್ಯೆ ಅರ್ಪಿಸಿ, ಅಲ್ಲಿದ್ದ ವಗ್ಗರು ಹಾಗೂ ಕೆಲ ಜನರಿಗೆ ಊಟ ಮಾಡಿಸುತ್ತಿರುವುದು ಕಂಡು ಬಂದಿತು,
ಮಧ್ಯಾಹ್ನ 12 ಗಂಟೆಯ ನಂತರ ಧಾರ್ಮಿಕ ಸಂಪ್ರದಾಯದಂತೆ ದೇವಸ್ಥಾನದಿಂದ ಮಲ್ಲಯ್ಯನ ಕುದುರೆ ಹಾಗೂ ಪಲ್ಲಕ್ಕಿಯಲ್ಲಿ ಮೂರ್ತಿಯನ್ನು ಭವ್ಯ ಮೆರವಣಿಗೆಯ ಮೂಲಕ ಬೆಟ್ಟದ ಮೇಲಿಂದ ಹೊನ್ನಕೆರೆಗೆ ತೆರಳಿದರು, ಈ ಸಂದರ್ಭದಲ್ಲಿ ಗ್ರಾಮೀಣ ಭಾಗದಿಂದ ಆಗಮಿಸಿದ ಭಕ್ತರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಭತ್ತ, ಜೋಳ, ಶೇಂಗಾ, ಸಜ್ಜೆ ಇನ್ನೀತರ ಬೆಳೆಗಳನ್ನು ಮೇಲೆ ಎಸೆದು ತಮ್ಮ ಭಕ್ತಿ ಅರ್ಪಿಸಿದರು.
ಹೊನ್ನಕೆರೆಗೆ ತೆರಳಿದ ಪಲ್ಲಕ್ಕಿ ಪೂಜಾರಿಗಳು ಪೆÇಲೀಸರ ಬಿಗಿ ಭದ್ರತೆಯಲ್ಲಿ ಮಲ್ಲಯ್ಯನ ಮೂರ್ತಿ ಹಾಗೂ ಕುದುರೆಯನ್ನು ಪುಣ್ಯ ಸ್ನಾನ ಮಾಡಿಸಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಮೆರವಣಿಗೆ ಮೂಲಕ ದೇವಸ್ಥಾನ ಕೆಳಗೆ ಇರುವ ಪಾದಗಟ್ಟೆಗೆ ಆಗಮಿಸಿತು.
ಈ ಸಮಯದಲ್ಲಿ ಮೊದಲಿನ ಸಂಪ್ರದಾಯದಂತೆ ಅನುಭವಿ ಪೂಜಾರಿಯಿಂದ ಸರಪಳಿ ಹರಿದರು, ಈ ಸಂದರ್ಭದಲ್ಲಿ ಇಡೀ ಪ್ರದೇಶ ಬಂಡಾರ ಎರೆಚಿರುವುದರಿಂದ ಹಳದಿಮಯವಾಗಿತ್ತು, ನಂತರ ಪಲ್ಲಕ್ಕಿ ಮೆಟ್ಟಿಲುಗಳ ಮೂಲಕ ಬೆಟ್ಟದ ಮೇಲಿರುವ ಗುಹಾಂತರ ದೇವಸ್ಥಾನ ತಲುಪಿ, ಪಲ್ಲಕ್ಕಿ ದೇವಸ್ಥಾನ ಗರ್ಭಗುಡಿ ಪ್ರದಕ್ಷಣೆಯೊಂದಿಗೆ ಮೂಲ ಸ್ಥಳದಲ್ಲಿ ಸ್ಥಾಪಿಸಲಾಯಿತು,
ಬುಧವಾರ ಬೆಳಿಗ್ಗೆ ಬ್ರಾಹ್ಮಿ ಮೂಹೂರ್ತದಲ್ಲಿ ಮಲ್ಲಯ್ಯನಿಗೆ ಮಹಾರುದ್ರಾಭೀಷೇಕ ಹಾಗೂ ಬಂಡಾರ ಪೂಜೆ ನೆರವೇರಿಸಲಾಯಿತು, ಇಂದು ರಾತ್ರಿ 11 ಗಂಟೆಗೆ ಮೈಲಾರಲಿಂಗೇಶ್ವರ ಹಾಗೂ ಗಂಗಿ ಮಾಳಮ್ಮರ ವಿವಾಹ ಕಾರ್ಯಕ್ರಮ ಜರುಗುವುದು, ರಾತ್ರಿಯಿಡಿ ಮಲ್ಲಯ್ಯನ ಪವಾಡಗಳ ಭಜನೆ ಜರುಗುವುದು,
ಜಾತ್ರೆಯಲ್ಲಿ ರೈತರು ತಮಗೆ ಬೇಕಾಗುವ ಚಟುವಟಿಕೆಗಳಿಗೆ ಕೃಷಿ ಸಾಮಗ್ರಿಗಳನ್ನು ಖರೀಧಿಸಿದರೆ, ಜನರು ತಮ್ಮ ಮನೆಗೆ ವಿವಿಧ ಸಿಹಿ-ತಿಂಡಿಗಳು, ಕಬ್ಬುಗಳನ್ನು ಖರೀಧಿಸಿ ಸಂಭ್ರಮದಿಂದ ತೆರಳಿದರೆ, ಪುಟಾಣಿ ಮಕ್ಕಳು ಸಿಹಿ ತಿಂದು ಪೀಪಿ ಉದೂತ್ತಾ ಗದ್ದಲದ ನಡುವೆ ಸಂಭ್ರಮಿಸಿ, ತಮಗೆ ಬೇಕಾದ ಆಟಿಕೆಗಳನ್ನು ಖರೀಧಿಸಿದರು.
ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಪೆÇಲೀಸ್ ಬಂದೋಬಸ್ತ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂಧಿಗಳು ಉಪಸ್ಥಿತರಿದ್ದರು.