
ಇಂಡಿ:ನ.29:ತಾಲೂಕಿನ ಲಚ್ಯಾಣ ಗ್ರಾಮದ ಆರಾದ್ಯ ದೇವ ಶ್ರೀ ಮಲ್ಲಯ್ಯ ದೇವರ ಛಟ್ಟಿ ಜಾತ್ರೆಯು ಸಡಗರ ಸಂಭ್ರಮ ದಿಂದ ನೇರವೇರಿತು.
ಬುಧವಾರ ಬೆಳಿಗ್ಗೆ 5 ಗಂಟೆಗೆ ಗ್ರಾಮದ ಹಲವು ಭಕ್ತರಿಂದ ಅಭಿಷೇಕ ವಿಶೇಷ ಪೂಜೆ ಶ್ರದ್ಧಾ, ಭಕ್ತಿಯಿಂದ ನೆರವೇರಿತು. ಇದೇ ದಿನ ಸಂಜೆ 7 ಗ್ರಾಮದ ಸಂಪ್ರದಾಯದoತೆ ದೇವಸ್ಥಾನದಲ್ಲಿನ ನಂದಿ ಕೋಲಿಗೆ ಚೆಂಡು ಹೂ ಕಟ್ಟುವ ಕಾರ್ಯಕ್ರಮ, ದೇವಸ್ಥಾನದ ಸುತ್ತ ಪಾಲಕಿ ಹಾಗೂ ನಂದಿ ಕೋಲುಗಳ ಪ್ರದಕ್ಷಿಣೆಯು ಸಮ್ಮಾಳ ವಾದ್ಯ ಮೇಳ, ನೆರೆದ ಭಕ್ತರ ಜಯಘೋಷಗಳೊಂದಿಗೆ ವಿಜ್ರಂಭಣೆಯಿಂದ ನೆರವೇರಿತು.
ಬಳಿಕ ಪಕ್ಕದ ಲೋಣಿ ಕೆ. ಡಿ. ಗ್ರಾಮದ ಶ್ರೀ ಭೈರಸಿದ್ದೇಶ್ವರ, ಸ್ಥಳೀಯ ಶ್ರೀ ಸಿದ್ಧಲಿಂಗೇಶ್ವರ ಭಜನಾ ಮಂಡಳಿ, ಶ್ರೀ ಮಲ್ಲಿಕಾರ್ಜುನ ಭಜನಾ ಸಂಘದ ಕಲಾವಿದರಿಂದ ಭಜನಾ ಕಾರ್ಯಕ್ರಮ ಜರಿಗಿತು. ಈ ಕಾರ್ಯಕ್ರಮದಲ್ಲಿ ಭಜನಾ ಕಲಾವಿದರಾದ ಗಾಯಕಿ ದಾರಸಂಗ ಗ್ರಾಮದ ಪವಿತ್ರಾ ಕೋಳಿ, ಗಾಯಕ ಸಿದ್ದಾರಾಮ ಲಾಳಸೇರಿ, ಶಿವಾನಂದ ಮುಜಗೊಂಡ, ಈರಣ್ಣ ಮುಜಗೊಂಡ, ಘಂಟೆಪ್ಪ ಐಹೊಳ್ಳಿ, ಯುವ ಸಾಹಿತಿ, ಗಾಯಕ ಅಪ್ಪಾಶ ಕಾಂಬಳೆ, ಹಾರ್ಮೊನಿಯಂ ಕಲಾವಿದ ವಿಜಯಕುಮಾರ ಗಿರಣಿವಡ್ಡರ, ದಿಮಡಿ ಕಲಾವಿದ ಬಾಬು ಬಡಿಗೇರ, ತಾಳ ಕಲಾವಿದ ಭೈರುಣಗಿಯ ತಿಪ್ಪಣ್ಣ ಹರಿಜನ, ಅಗರಖೇಡದ ಪರಮೇಶ್ವರ ಬನಸೋಡೆ, ಗುರಣ್ಣ ಹೊಸಮನಿ ಭಾಗವಹಿಸಿ ತಮ್ಮ ಕಲಾ ಸೇವೆ ಸಲ್ಲಿಸಿದರು.
ಗುರುವಾರ ಬೆಳಿಗಿನ ಜಾವ ಗ್ರಾಮದ ನಾನಾ ಭಕ್ತರು ಕೊಡಮಾಡಿದ ಅಕ್ಕಿ, ಬೇಳೆ, ಬೆಲ್ಲದ ಪೂಜೆ, ಎಲೆ ಪೂಜೆ ನೆರವೇರಿತು. ಬಳಿಕ ದಾನಿಗಳಾದ ರಾಜಶೇಖರ ಸಿದ್ರಾಮಶೆಟ್ಟಿ, ಈರಣ್ಣ ಅಹಿರಸಂಗ, ಕುಲಂಕಾರ ಬಿರಾದಾರ (ಕಲ್ಮನಿ), ಈರಣ್ಣ ಮುಜಗೊಂಡ (ಸೈನಿಕ), ಗ್ರಾ.ಪಂ. ಸದಸ್ಯ ಮಹಾದೇವ ವಾಲಿಕಾರ ಅವರಿಂದ ಅನ್ನ ಪ್ರಸಾದ ಸೇವೆ, ಯುವ ದುರೀಣ ಯಶವಂತ ಬಿರಾದಾರ ಅವರಿಂದ ಬಾಳೆಹಣ್ಣು ಪ್ರಸಾದ ವಿತರಣೆ ನಡೆಯಿತು. ನಂತರ ಸಂಜೆ ಊರ ಹೊರಗಿನ ಮಲ್ಲಯ್ಯ ದೇವರು ಹಾಗೂ ಊರ ಒಳಗಿನ ಮಲ್ಲಯ್ಯ ದೇವರ ಭೇಟಿ ಕಾರ್ಯಕ್ರಮ ಗ್ರಾಮದ ಸಂಪ್ರದಾಯದಂತೆ ವಿಶಿಷ್ಟವಾಗಿ ನಡೆಯಿತು. ಬಳಿಕ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಶ್ರೀ ಮಲ್ಲಯ್ಯ ದೇವರ ಉತ್ಸವ ಮೂರ್ತಿ ಹೊತ್ತ ಪಾಲಕಿ ಹಾಗೂ ನಂದಿಕೋಲಿನ ಭವ್ಯ ಮೆರವಣಿಯು ವಾದ್ಯ ಮೇಳದೊಂದಿಗೆ ವಿಜ್ರಂಭಣೆಯಿoದ ನೆರವೇರಿತು. ಬಳಿಕ ಈ ಮೆರವಣಿಗೆಯು ಮರಳಿ ಮೂಲ ದೇವಸ್ಥಾನ ತಲುಪುವದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು






























