
ಬೀದರ್:ಜ.೨೧:ಅಬಕಾರಿ ಸಚಿವ ಹಾಗೂ ದಲಿತ ಸಮುದಾಯದ ನಾಯಕರಾದ ಶ್ರೀ ಆರ್.ಬಿ. ತಿಮ್ಮಾಪೂರ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ ತೇಜೋವಧೆ ಮಾಡಲು ಸಂಚು ರೂಪಿಸಲಾಗುತ್ತಿದೆ ಎಂದು ಆರೋಪಿಸಿ, ಈ ಕುರಿತು ವಿಶೇಷ ತನಿಖೆ ನಡೆಸುವಂತೆ ಕರ್ನಾಟಕ ರಾಜ್ಯ ಆದಿಜಾಂಬವ ಸಂಘದ ರಾಜ್ಯ ಉಪಾಧ್ಯಕ್ಷರಾದ ರಾಜು ಕಡ್ಯಾಳ ಅವರು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಸಚಿವರ ಜನಪರ ಕಾರ್ಯಗಳನ್ನು ಸಹಿಸದ ಕೆಲವು ಕಿಡಿಗೇಡಿಗಳು, ಶ್ರೀ ಲಕ್ಷ್ಮೀನಾರಾಯಣ ಎಂಬ ವ್ಯಕ್ತಿಯೊಂದಿಗೆ ಶಾಮೀಲಾಗಿ ವ್ಯವಸ್ಥಿತ ಷಡ್ಯಂತ್ರ ರೂಪಿಸುತ್ತಿದ್ದು, ಇದರಿಂದ ಸಚಿವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಹಾಗೂ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ದುರುದ್ದೇಶ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಶ್ರೀ ಲಕ್ಷ್ಮೀನಾರಾಯಣ ಹಾಗೂ ಅವರ ಸಂಪರ್ಕದಲ್ಲಿರುವ ವ್ಯಕ್ತಿಗಳ ಕುರಿತು ವಿಶೇಷ ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿಯಂತಹ ದಿಟ್ಟ ಸಾಮಾಜಿಕ ನ್ಯಾಯದ ನಿರ್ಧಾರವನ್ನು ಅಬಕಾರಿ ಇಲಾಖೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಪ್ರವರ್ಗ ಎ, ಬಿ, ಸಿ ವರ್ಗೀಕರಣದ ಮೂಲಕ ವಿವಿಧ ಲೈಸನ್ಸ್ಗಳ ನೀಡಿಕೆಯಲ್ಲಿ ದಲಿತರ ಆರ್ಥಿಕ ಸಬಲಿಕರಣಕ್ಕೆ ಕ್ರಮ ಕೈಗೊಂಡಿರುವುದೇ ಈ ಷಡ್ಯಂತ್ರಕ್ಕೆ ಕಾರಣವಾಗಿದೆ ,ದಲಿತ ಸಚಿವರ ವಿರುದ್ಧ ಸುಳ್ಳು ಆರೋಪಗಳಿಗೆ ಕುಮ್ಮಕ್ಕ ನೀಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಎಂದು ರಾಜು ಕಡ್ಯಾಳ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಯುವಾಧ್ಯಕ್ಷ ಜೀವನ ರಿಕ್ಕೆ, ನಗರ ಅಧ್ಯಕ್ಚ ಮೈಕಲ್ ಹಳದಕೇರಿ, ಉಪಾಧ್ಯಕ್ಷರಾದ ಕೊಡ್ಡಿಕರ ಹಾಗೂ ಕಾರ್ಯದರ್ಶಿ ದೀಪಕ ಆಲೂರ ಉಪಸ್ಥಿತರಿದ್ದರು.

























