ಮಲೆಯಾಳಂ ವಿಧೇಯಕ: ಕೇರಳ ಕಾಂಗ್ರೆಸ್ಸಿಗರ ಮೇಲೆ ಸಿದ್ದು ಒತ್ತಡ ಹೇರಲಿ

ಬೆಂಗಳೂರು, ಜ. ೧೦- ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲೆಯಾಳಂನ್ನು ಪ್ರಥಮ ಭಾಷೆಯನ್ನಾಗಿ ಕಲಿಯಬೇಕು ಎಂಬ ವಿಧೇಯಕ ಜಾರಿಯನ್ನು ತಡೆಯಲು ಅಲ್ಲಿನ ಕಾಂಗ್ರೆಸ್ ನಾಯಕರ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಒತ್ತಡ ಹೇರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.


ಗುಜರಾತ್‌ನ ಸೋಮನಾಥ ದೇವಾಲಯ ಪುನರ್ ನಿರ್ಮಾಣ ಮಾಡಿ ಮಲ್ಲೇಶ್ವರದಲ್ಲಿರುವ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕಾಸರಗೋಡು ಸೇರಿದಂತೆ ಕೇರಳದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡಿಗರು ಮಾತೃ ಭಾಷೆಯಲ್ಲೇ ಕಲಿಕೆ ಮಾಡುತ್ತಿದ್ದಾರೆ.

ಈಗ ಏಕಾಏಕಿ ಮಲೆಯಾಳಂ ಕಲಿಯಿರಿ ಎಂದರೇ ಅವರು ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಬಗ್ಗೆ ಕೇರಳದ ಮುಖ್ಯಮಂತ್ರಿಗಳಿಗೆ ಪತ್ರ ಬರೆದರೆ ಸಾಲದು ತಕ್ಷಣವೇ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿಕೆ.ಸಿ. ವೇಣುಗೋಪಾಲ್ ಸೇರಿದಂತೆ ಕೇರಳ ಕಾಂಗ್ರೆಸ್ ನಾಯಕರ ಮೂಲಕ ಕೇರಳ ರಾಜ್ಯಪಾಲರಿಗೆ ಎಲ್ಲವನ್ನು ಮನವರಿಕೆ ಮಾಡಿಕೊಟ್ಟು ವಿಧೇಯಕ ಜಾರಿಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.


ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ ವಲಸಿಗರು ನಿರ್ಮಿಸಿಕೊಂಡಿದ್ದ ಮನೆಗಳನ್ನುತೆರವುಗಳಿಸಿದಾಗ ತಮಗೆ ಸಂಬಂಧಪಡದ ವಿಷಯದಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿವಿಜಯನ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಮಧ್ಯ ಪ್ರವೇಶ ಮಾಡಿ ಅವರೆಲ್ಲರಿಗೂ ಮನೆ ಕೊಡುವಂತೆ ಹೇಳಿದ್ದರು. ಈಗ ಕನ್ನಡಿಗರ ಅಸ್ಮಿತೆಗೆ ಧಕ್ಕೆಯಾಗುತ್ತಿದೆ. ಕಾಂಗ್ರೆಸ್ ನಾಯಕ ವೇಣುಗೋಪಾಲ್ ಎಲ್ಲಿದ್ದಾರೆ. ಕರ್ನಾಟಕದ ಕನ್ನಡಿಗರ ಬಗ್ಗೆ ಅವರು ಯಾಕೆ ಧ್ವನಿ ಎತ್ತುತ್ತಿಲ್ಲ ಎದು ಪ್ರಶ್ನಿಸಿದರು.


ಈ ವಿಧೇಯಕ ಜಾರಿಯಾಗದಂತೆ ಕೇರಳ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಕೇರಳ ಕಾಂಗ್ರೆಸ್ ನಾಯಕರಿಂದ ಮಾಡಿಸಲಿ. ಆಗ ಎಲ್ಲ ಸಮಸ್ಯೆಯೂ ಇತ್ಯರ್ಥವಾಗುತ್ತದೆ ಎಂದರು.


ಕೇರಳ ಸರ್ಕಾರ ಕನ್ನಡ ಶಾಲೆಗಳಲ್ಲಿ ಒತ್ತಾಯಪೂರ್ವಕವಾಗಿ ಮಲಯಾಳಂ ಭಾಷೆ ಹೇರಲು ಹೊರಟಿರುವುದು ಖಂಡನೀಯ. ಕೇರಳ ವಿಧಾನಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ದುರುದ್ದೇಶ ಪೂರ್ವಕವಾಗಿ ಭಾಷಾ ವಿವಾದವನ್ನು ಕೆಣಕಿ ಎರಡು ರಾಜ್ಯಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ದೂರಿದರು.


ದ್ವೇಷ ಭಾಷಣ ಮಸೂದೆಗೆ ಇನ್ನೂ ಅಂಕಿತ ಹಾಕದ ರಾಜ್ಯಪಾಲರ ನಡೆಯನ್ನು ಸಮರ್ಥಸಿಕೊಂಡ ವಿಜಯೇಂದ್ರ ಅವರು, ಈ ಮಸೂದೆ ಜಾರಿಗೆ ರಾಜ್ಯದಲ್ಲಿ ಪ್ರತಿಯೊಬ್ಬರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಾವು ಸಹ ರಾಜ್ಯಪಾಲರಿಗೆ ಅಂಕಿತ ಹಾಕದಂತೆ ಮನವಿ ಮಾಡುತ್ತೇವೆ ಎಂದರು.


ನಿರಾಶ್ರಿತರು ವಿಧೇಯಕ ಜಾರಿ ತಡೆಯಲು ಅಲ್ಲಿನ ರಾಜ್ಯಪಾಲರನ್ನು ಭೇಟಿ ಮಾಡುವಂತೆಯೂ ಮನವಿ ಮಾಡಬೇಕು ಎಂದು ಹೇಳಿದರು.


ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸದ ಗೋವಿಂದರಕಾರಜೋಳ, ಸೋಮನಾಥ ದೇವಾಲಯ ಭಾರತೀಯರ ಹೆಮ್ಮೆ. ಸೋಮನಾಥ ದೇವಾಲಯದ ಮರು ನಿರ್ಮಾಣ ಮಾಡಲು ಅಂದಿನ ಗೃಹ ಸಚಿರಾಗಿದ್ದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಪ್ರಧಾನಿಯಾಗಿದ್ದ ನೆಹರು ಅವರಿಗೆ ಮನವಿ ಮಾಡಿದ್ದರು. ಆದರೆ ನೆಹರು ಅವರು ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಕೊನೆಗೂ ಅವರ ಒಪ್ಪಿಗೆ ವಿರುದ್ಧವಾಗಿ ದೇವಾಲಯನ್ನು ಪುನರ್ ನಿರ್ಮಾಣ ಮಾಡಲಾಯಿತು. ಇಂದು ನೂರಾರು ಕೋಟಿ ಭಕ್ತರು ದೇವಾಲಯಕ್ಕೆ ಭೇಟಿ ಕೊಟ್ಟು ಪೂಜೆ ಪುನಸ್ಕಾರ ಮಾಡುತ್ತಿರುವುದು ಭಾರತೀಯರ ಹೆಮ್ಮೆ ಎಂದರು.