
ಚಿಕ್ಕಬಳ್ಳಾಪುರ: ಆ.೧೧ : ಸರ್ಕಾರದ ವಿವಿಧ ಇಲಾಖೆಗಳು, ನಿಗಮಗಳು, ಮಂಡಳಿಗಳು ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ಹತ್ತಾರು ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಸುಮಾರು ೪.೫ ಲಕ್ಷ ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು. ಅಲ್ಲಿಯವರೆಗೆ ಸರ್ಕಾರ ಘೋಷಿಸಿರುವ ಪರಿಷ್ಕೃತ ಕನಿಷ್ಠ ವೇತನವನ್ನು ಕಡ್ಡಾಯವಾಗಿ ಮುಂದುವರಿಸಬೇಕು ಎಂದು ರಾಜ್ಯ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಸಂಚಾಲಕ ಎನ್.ಗಂಗಾಧರ್ ಆಗ್ರಹಿಸಿದರು.
ನಗರ ಹೊರವಲಯದ ಜಿಲ್ಲಾಡಳಿತ ಭವನದ ಎದುರು ರಾಜ್ಯ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಸರ್ಕಾರದ ೩೬ ಇಲಾಖೆ ೫೨ ನಿಗಮ ಸೇರಿ ವಿವಿಧ ಇಲಾಖೆಗಳ ಗೌರವವನ್ನು ಕಾಪಾಡುತ್ತ, ತಮ್ಮ ಬದುಕನ್ನೇ ಸೇವೆಗೆ ಮುಡಿಪಾಗಿಟ್ಟು ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ನ್ಯಾಯಯುತ ವೇತನ ನೀಡದೆ ಜೀತದಾಳುಗಳಂತೆ ದುಡಿಸಿಕೊಳ್ಳುವುದು ಅಮಾನವೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ, ಗುತ್ತಿಗೆ, ದಿನಗೂಲಿ ಹಾಗೂ ಗೌರವಧನ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಸರ್ಕಾರದ ಅಧಿಸೂಚನೆಯಂತೆ ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸದೆ ತಡೆಹಿಡಿದಿರುವುದು ಸರಿಯಲ್ಲ. ಕನಿಷ್ಠ ವೇತನ ಕಾಯ್ದೆ?೧೯೪೮ರ ಅನ್ವಯ ಮೇ ೨೨, ೨೦೨೬ರಂದು ಸರ್ಕಾರ ಹೊರಡಿಸಿರುವ ಅಧಿಸೂಚನೆಯಂತೆ ಪರಿಷ್ಕೃತ ವೇತನವನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಮೇ ತಿಂಗಳಲ್ಲಿ ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ಆದೇಶ ಹೊರಡಿಸಿ, ಜೂನ್ ತಿಂಗಳಲ್ಲಿ ಅದರಂತೆ ವೇತನ ಪಾವತಿಸಿದೆ. ಆದರೆ ಜುಲೈ ತಿಂಗಳಲ್ಲಿ ಮತ್ತೆ ಪರಿಷ್ಕೃತ ವೇತನವನ್ನು ತಡೆಹಿಡಿದಿರುವುದು ನೌಕರರಿಗೆ ಮಾಡಿರುವ ಅನ್ಯಾಯವಾಗಿದೆ. ಕೂಡಲೇ ತಡೆಹಿಡಿದಿರುವ ವೇತನ ಪರಿಷ್ಕರಣೆಯನ್ನು ಹಿಂಪಡೆದು, ಮೇ ೨೨, ೨೦೨೬ರಿಂದಲೇ ಅನ್ವಯವಾಗುವಂತೆ ಬಾಕಿ ಆರ್ಥಿಕ ಸೌಲಭ್ಯಗಳನ್ನು ಒಳಗೊಂಡು ವೇತನ ಪಾವತಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಕೂಡಲೇ ಕ್ರಮ ಕೈಗೊಂಡು ಪರಿಷ್ಕೃತ ಕನಿಷ್ಠ ವೇತನವನ್ನು ಜಾರಿಗೊಳಿಸುವುದರ ಜೊತೆಗೆ, ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ನೌಕರರನ್ನು ಹಂತ ಹಂತವಾಗಿ ಖಾಯಂಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯ ವಕ್ತಾರ ಸುನಿಲ್ ಕೆ.ಸಿ., ರಾಜ್ಯ ಕಾರ್ಯದರ್ಶಿ ಸಿ.ಡಿ. ವೆಂಕಟೇಶ್, ನೀರಗಂಟಿ ಸಂಘದ ರಾಜ್ಯ ಸಂಚಾಲಕ ರಾಮಕೃಷ್ಣ, ತಾಲೂಕು ಅಧ್ಯಕ್ಷ ನರಸಿಂಹ ರೆಡ್ಡಿ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ಪ,ದಾಧಿಕಾರಿಗಳಾದ ಕಲ್ಯಾಣಿ, ಸುಮಿತ್ರಾ, ನಾರಾಯಣಸ್ವಾಮಿ, ಮಂಜುನಾಥ, ಸುಬ್ಬರಾಯಪ್ಪ, ಶ್ರೀನಿವಾಸ್, ನಾಗರಾಜು, ಗುರುಮೂರ್ತಿ, ನ್ಯಾತಪ್ಪ, ವೆಂಕಟೇಶ್, ಮಲ್ಲೇಶ್ ಸೇರಿದಂತೆ ವಿವಿಧ ಇಲಾಖೆಗಳ ಹೊರಗುತ್ತಿಗೆ ನೌಕರರು ಭಾಗವಹಿಸಿದ್ದರು.


































