ದೇವನಹಳ್ಳಿ ಬೆಂ.ಗ್ರಾಆ ೦೭, ಜಿಲ್ಲೆಯಾದ್ಯಂತ ಉತ್ತಮ ಮಳೆ ಆಗುತ್ತಿದ್ದು ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಈ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳಿಗೆ ರಸಗೊಬ್ಬರಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳಿ ಎಂದು ಕೃಷಿ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು.
ದೇವನಹಳ್ಳಿ ತಾಲ್ಲೂಕಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ೩ನೇ ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ವಾರ್ಷಿಕ ೮೦೪ ಮಿ.ಮೀ ಮಳೆ ಅಂದಾಜಿಸಲಾಗಿದ್ದು, ಪ್ರಸ್ತುತ ೩೮೩ ಮಿ.ಮೀ ಮಳೆ ಆಗಿದೆ. ಮಳೆಯಾಶ್ರಿತ ಬೆಳೆಗಳಾದ ರಾಗಿ, ಹುರುಳಿ, ತೊಗರಿ ಇನ್ನಿತರ ಬೆಳೆಗಳು ೧೨,೨೭೦ ಹೆಕ್ಟೇರ್ನಷ್ಟು ಅಂದರೆ ಶೇಕಡ ೯೦% ಬಿತ್ತನೆ ಕಾರ್ಯ ಪೂರ್ಣಗೊಂಡಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ. ಯೂರಿಯಾ, ಡಿಎಪಿ ಗೊಬ್ಬರಕ್ಕೆ ಹೆಚ್ಚು ಬೇಡಿಕೆ ಇದೆ. ರಸಗೊಬ್ಬರ ದಾಸ್ತಾನು ಅಂಗಡಿ ಮಳಿಗೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ.
ಜುಲೈ ಮಾಹೆಯ ಅಂತ್ಯದಿಂದ ಆಗಸ್ಟ್ ಮಾಹೆಯಲ್ಲಿ ಬಿತ್ತನೆ ಕಾರ್ಯಗಳು ಗರಿಗೆದರುತ್ತವೆ. ರೈತರಿಗೆ ಸಮರ್ಪಕ ಬಿತ್ತನೆ ಬೀಜ, ರಸಗೊಬ್ಬರ ಸಿಗಬೇಕು. ಯಾವ ರೈತನು ಕೂಡ ಅಂಗಡಿ, ಮಳಿಗೆಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲಬಾರದು. ರೈತರಿಗೆ ರಸಗೊಬ್ಬರ ಸಿಗಲಿಲ್ಲ ಎಂದು ದೂರು ಬರಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ, ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸಲು ರೈತರಿಗೆ ಅರಿವು ಮೂಡಿಸಿ, ಪ್ರಕೃತಿ ವಿಕೋಪಗಳಿಂದ ಸಂಭವಿಸುವ ಬೆಳೆ ನಷ್ಟಕ್ಕೆ ವಿಮೆ ಪರಿಹಾರ ಸಿಗಲಿದೆ. ವಿಮೆ ಪರಿಹಾರದಿಂದ ರೈತರಿಗೆ ಅಲ್ಪ ಪ್ರಮಾಣದ ಆರ್ಥಿಕ ಹೊರೆ ತಗ್ಗಲಿದೆ. ಹಾಗೇಯೇ ತಮ್ಮ ಇಲಾಖೆಗಳಲ್ಲಿ ಸಿಗುವ ಸರ್ಕಾರದ ಯೋಜನೆಗಳ ಬಗ್ಗೆ ಪ್ರತಿ ರೈತರಿಗೆ ಕರಪತ್ರಗಳನ್ನು ಹಂಚಿ ಪ್ರಚಾರ ನೀಡಿ ಎಂದರು.
ಬೂದಿಗೆರೆ ಕುಡಿಯುವ ನೀರು ಸಮಸ್ಯೆ ನಿವಾರಿಸಲು ಒಂದು ತಿಂಗಳ ಗಡುವು
ಬೂದಿಗೆರೆ ಸುಮಾರು ೨೫೦೦ ರಿಂದ ೩೦೦೦ ಮನೆಗಳಿರುವ ಪಟ್ಟಣ. ಅಂತಹ ಪಟ್ಟಣಕ್ಕೆ ಸಮರ್ಪಕವಾಗಿ ನೀರು ಕೊಡಲಿಲ್ಲ ಎಂದರೆ ಏನರ್ಥ. ಅಲ್ಲಿ ಉಂಟಾಗಿರುವ ಕುಡಿಯುವ ನೀರು ಸಮಸ್ಯೆ ಬಗೆಹರಿಸಲು ತಕ್ಷಣ ೨ ಕೊಳವೆ ಬಾವಿ ಕೊರೆಸಿ, ಸುಮಾರು ೮ ಲಕ್ಷ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ಗಳ ನೀರು ಸರಬರಾಜು ಆಗಲು ಒಂದೇ ಪೈಪ್ಲೈನ್ ವ್ಯವಸ್ಥೆ ಇದ್ದು ಎಲ್ಲಾ ಓವರ್ ಹೆಡ್ ಟ್ಯಾಂಕ್ ಗಳಿಗೆ ಸಿಂಗಲ್ ಪೈಪ್ಲೈನ್ ಅಳವಡಿಸಿ ನೀರು ಸರಬರಾಜು ಮಾಡಿ. ಈ ಕೆಲಸ ಒಂದು ತಿಂಗಳ ಒಳಗಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಗಡುವು ನೀಡಿದರು.
ತಾಲ್ಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಬಾಬು ಜಗಜೀವನರಾಂ, ಡಾ.ಬಿ.ಆರ್ ಅಂಬೇಡ್ಕರ್ ಭವನಗಳು ಎಂಟು ಇದ್ದು, ೬ ಭವನಗಳು ಪೂರ್ಣ ಗೊಂಡಿದೆ. ಕೆಲವು ಭವನಗಳಲ್ಲಿ ಕಾಮಗಾರಿಗಳು ಅಪೂರ್ಣವಾಗಿ ಹಾಗೇ ಉಳಿದಿದೆ. ಅನುದಾನ ಬಿಡುಗಡೆ ಆಗಿರುವ ಭವನಗಳನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಿ ಎಂದು ಹೇಳಿದರು.
ವಿಜಯಪುರ ಹೋಬಳಿಯ ಧರ್ಮಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ಭೂ ಒತ್ತುವರಿಯಿಂದ ರೈತರಿಗೆ ಬಹಳಷ್ಟು ತೊಂದರೆ ಆಗಿದೆ. ಆ ಭಾಗದಲ್ಲಿ ರೈತರು ನೂರಾರು ವರ್ಷಗಳಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಸಾಗುವಳಿ ಚೀಟಿ ಕೂಡ ವಿತರಿಸಲಾಗಿದೆ. ಆದರೆ ಏಕಾಏಕಿ ಅರಣ್ಯ ಇಲಾಖೆ ಭೂಮಿ ಎಂದು ಗಿಡ ನೆಡಲು ಬಂದಿದ್ದು ತಕ್ಷಣವೇ ಇದನ್ನು ನಿಲ್ಲಿಸಲಾಗಿದೆ. ತಹಶೀಲ್ದಾರ್, ಸರ್ವೇ ಇಲಾಖೆ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆಯವರು ಧರ್ಮಪುರಕ್ಕೆ ಜಂಟಿ ಭೇಟಿ ನೀಡಿ ರೈತರ ಜಮೀನುಗಳಿಗೆ ಮೊದಲು ಹದ್ದುಬಸ್ತು ಮಾಡಿ ಎಂದರು. ಸರ್ಕಾರದ ಹಂತದಲ್ಲಿ ಈ ವಿಷಯ ಕುರಿತು ಚರ್ಚಿಸಲಾಗುವುದು ಎಂದರು.
ಪೋಡಿ ಮುಕ್ತ ತಾಲ್ಲೂಕು, ನಿವೇಶನ ಹಂಚಿಕೆ, ವಸತಿ ಹಂಚಿಕೆ, ಗ್ರಾಮಗಳಲ್ಲಿ ಸ್ಮಶಾನ ಹಂಚಿಕೆಗೆ ಅಗತ್ಯ ಕ್ರಮ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಎಸ್ಸೆಸ್ಸೆಲ್ಸಿಯಲ್ಲಿ ಈ ಬಾರಿ ಉತ್ತಮ ಫಲಿತಾಂಶ ಬರಲು ಕ್ರಮ ವಹಿಸಿ ಎಂದರಲ್ಲದೆ, ವಿದ್ಯಾರ್ಥಿ ನಿಲಯಗಳಲ್ಲಿ ಗುಣಮಟ್ಟದ ಮೂಲ ಭೂತ ಸೌಕರ್ಯಗಳೊಂದಿಗೆ ಗುಣಮಟ್ಟದ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೊತ್ಸಾಹ ನೀಡಿ ಎಂದರು.
ಸಭೆಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷರಾದ ಜಗನ್ನಾಥ, ತಹಶೀಲ್ದಾರ್ ಅನಿಲ್ ಎಂ, ಇಒ ಶ್ರೀನಾಥ್ ಗೌಡ, ಸಚಿವರ ಆಪ್ತ ಕಾರ್ಯದರ್ಶಿ ನಟರಾಜ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಕೆಡಿಪಿ ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.

























