ವಿಜಯಪುರ, ನ.೩:ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಮೊದಲು ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸಬೇಕು ಎಂದು ಕರವೇ(ಶಿವರಾಮೇಗೌಡ ಬಣ) ಜಿಲ್ಲಾ ಉಪಾಧ್ಯಕ್ಷ ಅಣ್ಣಮ್ಮ ತಾಯಿ ಸುರೇಶ್ ಒತ್ತಾಯಿಸಿದರು.
ಇವರು ಪಟ್ಟಣದ ಅಂಗತಟ್ಟಿ ನಂಜುಡಪ್ಪ ಸರ್ಕಲ್ ಬಳಿ ಇರುವ (ಶಿವರಾಮೇಗೌಡ) ಬಣ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಪ್ಪುವಿನ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಧ್ವಜಾರೋಹಣ ನೆರವೇರಿಸಿ, ಮಾತನಾಡಿದರು.
ಇಡೀ ದೇಶದ ಭಾಷೆಗಳಲ್ಲಿ ಕನ್ನಡ ಅತ್ಯಂತ ಶ್ರೇಷ್ಠ ಭಾಷೆಯಾಗಿದೆ. ಪ್ರಾಚೀನ ಇತಿಹಾಸ ಹೊಂದಿರುವ ನಮ್ಮ ಕನ್ನಡ ಭಾಷೆ ಸುಲಿದ ಬಾಳೆ ಹಣ್ಣಿನಷ್ಟೇ ಸುಲಭವಾಗಿದೆ. ಕನ್ನಡಕ್ಕಾಗಿ ನಾವೆಲ್ಲ ಕೈ ಎತ್ತೋಣ, ಕನ್ನಡ ತಾಯಿಯ ಸೇವೆ ಮಾಡಲು ಮುಂದಾಗೋಣ ಎಂದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಕೇಶವ ಮಾತನಾಡಿ, ಇಂದು ಆಂಗ್ಲ ಭಾಷಾ ವ್ಯಾಮೊಹ ಹಾಗೂ ಶಿಕ್ಷಕರ ಕೊರತೆಯಿಂದ ನೂರಾರು ಕನ್ನಡ ಶಾಲೆಗಳು ಮುಚ್ಚುವಂತಾಗಿದ್ದು, ಇದರ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.
ವಿದ್ಯಾರ್ಥಿ ಘಟಕದ ಅಧ್ಯಕ್ಷ ಕಿರಣ್ ಮಾತನಾಡಿ, ಕನ್ನಡ ಭಾಷಾಭಿಮಾನ ಕೇವಲ ನವೆಂಬರ್ ತಿಂಗಳಿಗಷ್ಟೇ ಮೀಸಲಾಗಿರಬಾರದು. ಮನೆಯಿಂದಲೇ ಕನ್ನಡ ಭಾಷೆಗೆ ಪ್ರಾಧಾನ್ಯತೆ ನೀಡುವಂತಾಗಬೇಕು. ಇಲ್ಲಿನ ಅನೇಕ ಕವಿಗಳು, ಸಾಹಿತಿಗಳು ಕನ್ನಡ ಭಾಷೆ ಏಳ್ಗೆಗಾಗಿ ಶ್ರಮಿಸಿದ್ದಾರೆ ಎಂದರು. ಈ ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಪರ ಎಲ್ಲಾ ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಕಾರ್ಮಿಕ ಘಟಕ ಅಧ್ಯಕ್ಷ ಮಂಜುನಾಥ್, ಸೈಪುಲ್ಲ, ಮುನಿಕೃಷ್ಣಪ್ಪ, ಸೋಯಲ್, ಧನ್, ಜಬ್ಬಿವುಲ್ಲ, ಚಂದ್ರು, ಅನೀಲ್, ಶಿವರಾಜ್, ಸಂಜಯ್, ಮಹೇಶ್, ನಾರಾಯಣಸ್ವಾಮಿ ಎಲ್ಲಾ ಕರವೇ ಸದಸ್ಯರು ಹಾಜರಿದ್ದರು.


























