ಮೆಕ್ಕೆ ಜೋಳ ಖರೀದಿ,ಸಿಎಂ ನೇತೃತ್ವದಲ್ಲಿ ಸಭೆ

ಉತ್ತರ ಕರ್ನಾಟಕದ ರೈತರು ಮೆಕ್ಕೆ ಜೋಳ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಹಿನ್ನಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾವೇರಿ ನಿವಾಸದಲ್ಲಿ ಇಂದು ಸಭೆ ನಡೆಯಿತು. ಸಭೆಯಲ್ಲಿ ಸಚಿವರಾದ ಎಚ್.ಕೆ.ಪಾಟೀಲ್, ಕೆ.ಎಚ್.ಮುನಿಯಪ್ಪ, ಶಿವಾನಂದ ಪಾಟೀಲ್, ಕೆ.ವೆಂಕಟೇಶ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮ್ಮದ್, ಸರ್ಕಾರದ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಮೆಹ್ತಾ ಆರ್ಥಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬೆಂಗಳೂರು, ನ. ೨೧- ಮೆಕ್ಕೆಜೋಳ ಬೆಳೆ ಬೆಲೆ ಕುಸಿದು ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಉನ್ನತ ಮಟ್ಟದ ಸಭೆ ನಡೆಸಿ, ಮೆಕ್ಕೆಜೋಳ ಬೆಲೆ ಕಡಿಮೆಯಾಗಲು ಕಾರಣವಾದ ಸಂಗತಿಗಳು ಹಾಗೂ ಮೆಕ್ಕೆಜೋಳ ಖರೀದಿ ಸಂಬಂಧ ಚರ್ಚೆ ನಡೆಸಿದರು.


ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿಂದು ನಡೆದ ಈ ಸಭೆಯಲ್ಲಿ ಬೆಲೆ ಕುಸಿತದಿಂದ ಸಂಕಷ್ಟಕ್ಕೊಳಗಾಗಿರುವ ರಾಜ್ಯದ ಮೆಕ್ಕೆಜೋಳ ರೈತರ ನೆರವಿಗೆ ಎಲ್ಲ ರೀತಿಯ ನೆರವು ಒದಗಿಸುವಂತೆ ಸೂಚನೆ ನೀಡಿದರು.


ಕೇಂದ್ರ ಸರ್ಕಾರ ೭೦ ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಆಮದು ಮಾಡಿಕೊಂಡಿದೆ. ನಮ್ಮ ದೇಶದಲ್ಲೇ ಮೆಕ್ಕೆಜೋಳ ಉತ್ಪಾದನೆ ಹೆಚ್ಚಾಗಿರುವುದರಿಂದ ಆಮದು ಮೇಲೆ ನಿರ್ಬಂಧ ವಿಧಿಸಲು ಒತ್ತಾಯಿಸಿ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಸಭೆಯಲ್ಲಿ ನಿರ್ಧರಿಸಲಾಗಿದೆ.


ಎತನಾಲ್ ಉತ್ಪಾದನೆಗೆ ಮೆಕ್ಕೆಜೋಳವನ್ನು ತಕ್ಷಣ ಖರೀದಿಸಲು ಸೂಚಿಸಿ, ರಾಜ್ಯದ ಪ್ರಮುಖ ಡಿಸ್ಟಿಲರಿಗಳೊಂದಿಗೆ ಸಭೆ ನಡೆಸಲು ಮುಖ್ಯಮಂತ್ರಿ ಅವರು ಸೂಚನೆ ನೀಡಿ, ಇದೇ ರೀತಿ ಕುಕ್ಕುಟೋಧ್ಯಮದಲ್ಲೂ ಮೆಕ್ಕೆಜೋಳದ ಬೇಡಿಕೆ ಇದ್ದು ಅವರೊಂದಿಗೂ ಸಹ ಮಾತುಕತೆ ನಡೆಸಲು ಸೂಚನೆ ನೀಡಿದರು.
ಸದ್ಯಕ್ಕೆ ೮ ಲಕ್ಷ ಟನ್ ಮೆಕ್ಕೆಜೋಳವನ್ನು ತಕ್ಷಣ ಖರೀದಿಸಲು ಕೇಂದ್ರ ಸರ್ಕಾರದ ಏಜೆನ್ಸಿಗ ಳುಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ತೀರ್ಮಾನವನ್ನು ಕೈಗೊಳ್ಳಲಾಯಿತು.


ಖರೀದಿ ಕೇಂದ್ರಗಳನ್ನು ನಫೆಡ್, ಎನ್‌ಸಿಎಫ್ ಇನ್ನೂ ಆರಂಭಿಸದೆ ಇರುವುದರಿಂದ ತೊಂದರೆಯಾಗಿದ್ದು, ಮಾರುಕಟ್ಟೆಯಲ್ಲಿ ಧಾರಣೆಯನ್ನು ಸ್ಥಿರಗೊಳಿಸಲು ತಕ್ಷಣ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂಬ ಒತ್ತಾಯವನ್ನು ಕೇಂದ್ರದ ಮೇಲೆ ಹೇರಲು ಸಭೆಯಲ್ಲಿ ತೀರ್ಮಾನಿಸಲಾಯಿತು.


ಈ ಸಭೆಯಲ್ಲಿ ಆನ್‌ಲೈನ್ ಮೂಲಕ ಪಾಲ್ಗೊಂಡಿದ ರಾಜ್ಯದ ಕೃಷಿ ಸಚಿವ ಚಲುವಾರಯಸ್ವಾಮಿಸ, ಕೇಂದ್ರ ಕೃಷಿ ಸಚಿವರನ್ನು ಭೇಟಿ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಆರಂಭಿಸಿ ರೈತರಿಗೆ ನೆರವು ನೀಡುವಂತೆ ಕೇಂದ್ರ ಸಚಿವರನ್ನು ಕೋರಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.


ಮೆಕ್ಕೆಜೋಳ ಬೆಲೆ ದಿಢೀರ್ ಇಳಿಕೆಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದ್ದು, ದೇಶದಲ್ಲಿ ಮೇಕ್ಕೆಜೋಳ ಉತ್ಪಾದನೆ ಹೆಚ್ಚಾಗಿರುವುದು ಗೊತ್ತಿದ್ದರೂ ಕೇಂದ್ರ ಸರ್ಕಾರ ೭೦ ಲಕ್ಷ ಮೆಟ್ರಿಕ್ ಟನ್ ಜೋಳವನ್ನು ಆಮದು ಮಾಡಿಕೊಂಡಿದೆ. ಇದರಿಂದ ರಾಜ್ಯ ಹಾಗೂ ದೇಶದ ಮೆಕ್ಕೆಜೋಳ ಬೆಳೆದ ರೈತರಿಗೆ ವಿಪರೀತ ಹೊರೆಯಾಗುವುದರ ಜತೆಗೆ ಮೆಕ್ಕೆಜೋಳದಿಂದ ಎಥನಾಲ್ ಉಪಯೋಗಿಸಲು ಕೇಂದ್ರ ಸರ್ಕಾರ ರಾಜ್ಯಕ್ಕೆ ನಿಗದಿ ಮಾಡಿರುವ ಕೋಟಾ ಪ್ರಮಾಣ ಅತ್ಯಂತ ಕಡಿಮೆ ಇದೆ. ಇದರಿಂದ ರಾಜ್ಯದ ಡಿಸ್ಟಲರಿಗಳು ಮೆಕ್ಕೆಜೋಳ ಖೀರಿದಿಸುವ ಪ್ರಮಾಣವೂ ಕಡಿಮೆಯಾಗಿ, ಬೆಲೆ ಕುಸಿತವಾಗಿದೆ ಎಂಬ ಅಂಶವನ್ನು ಸಭೆಯಲ್ಲಿ ಚರ್ಚಿಸಲಾಯಿತು.


ಕೇಂದ್ರದ ನೋಡಲ್ ಏಜೆನ್ಸಿಗಳಾದ ನಫೆಡ್ ಮತ್ತ ಎನ್‌ಸಿಎಫ್ ಮೂಲಕ ಬೆಂಬಲ ಬೆಲ ಯೋಜನೆಯಡಿ ಮೆಕ್ಕೆಜೋಳ ಸಂಗ್ರಹಣ ಮತ್ತು ಎತನಾಲ್ ಉತ್ಪಾದನೆಗೆ ಬಳಕೆಗೆ ಈಗಾಗಲೇ ಕೇಂದ್ರದ ಆಹಾರ ಮತ್ತು ಸಾರ್ವಜನಿಕ ವಿತರಣಾ ವೇದಿಕೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆದರೆ ಸಂಬಂಧಪಟ್ಟ ನೋಡಲ್ ಏಜೆನ್ಸಿಗಳು ಮಾರ್ಗಸೂಚಿಯಂತೆ ಇನ್ನೂ ಖರೀದಿ ಪ್ರಕ್ರಿಯೆಯನ್ನು ಆರಂಭಿಸಿಲ್ಲ. ಇದು ಸಮಸ್ಯೆ ಬಿಗಡಾಯಿಸಲು ಮುಖ್ಯ ಕಾರಣ. ಡಿಸ್ಟಲರಿಗಳು ಮೆಕ್ಕೆಜೋಳ ಬೆಲೆ ಕಡಿಮೆ ಇದ್ದಾಗಲೆ ಹಿಂದೆಯೇ ಖರೀದಿಸಿ ಶೇಖರಣೆ ಮಾಡಿಕೊಂಡಿವೆ. ಈಗ ಖರೀದಿಗೆ ಮುಂದೆ ಬರುತ್ತಿಲ್ಲ. ಇದು ಸ್ಪಷ್ಟ ನಿಯಮ ಉಲ್ಲಂಘನೆಯಾಗಿದ್ದು, ಡಿಸ್ಟಲರಿಗಳು ನಿಯಮಾನುಸಾರ ಮೆಕ್ಕೆಜೋಳ ಖರೀದಿಗೆ ಮುಂದೆ ಬರಬೇಕು. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಿ ಎಂದು ಸಭೆಯಲ್ಲಿ ಚರ್ಚಿಸಲಾಯಿತು.


ಇಂದಿನ ಸಭೆಯಲ್ಲಿ ಸಚಿವರುಗಳಾದ ಶಿವಾನಂದ ಪಾಟೀಲ್, ಹೆಚ್.ಕೆ.ಪಾಟೀಲ್, ಕೆ.ಹೆಚ್.ಮುನಿಯಪ್ಪ, ಕೆ. ವೆಂಕಟೇಶ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಆನ್‌ಲೈನ್ ಮೂಲಕ ಸಚಿವ ಚಲುವರಾಯಸ್ವಾಮಿ ಭಾಗಿಯಾಗಿದ್ದರು.