
ಕೊಲ್ಹಾರ:ಫೆ.೨೬: ಪಟ್ಟಣದ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಸಾರ್ವಜನಿಕರು ಕಸವನ್ನು ಪಟ್ಟಣ ಪಂಚಾಯತಿ ಕಸ ವಿಲೇವಾರಿ ವಾಹನದಲ್ಲೇ ಹಾಕಬೇಕು ಎಂದು ದಿಗಂಬರೇಶ್ವರ ಮಠದ ಕಲ್ಲಿನಾಥ ಶ್ರೀಗಳು ತಿಳಿಸಿದರು.
ಪಟ್ಟಣ ಪಂಚಾಯತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ‘ಸ್ವಚ್ಚೋತ್ಸವ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೊದಲನೇ ಬಸ್ ನಿಲ್ದಾಣದಲ್ಲಿ ಸ್ವತಃ ಪೊರಕೆ ಹಿಡಿದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡು ಅವರು ಮಾತನಾಡಿದರು. ಬಸ್ ನಿಲ್ದಾಣಗಳಲ್ಲಿ ಗೂಟ್ಕಾ ಸೇವಿಸಿ ಉಗುಳುವುದು, ಮಧ್ಯಪಾನ ಮಾಡುವುದು ಹಾಗೂ ಎಲ್ಲೆಂದರಲ್ಲಿ ಕಸ ಎಸೆಯುವುದು ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ ಎಂದು ವಿಷಾದಿಸಿದರು.
ಪಟ್ಟಣದ ಎರಡು ಬಸ್ ನಿಲ್ದಾಣಗಳ ಸ್ವಚ್ಛತಾ ಕೆಲಸವನ್ನು ಕೆಎಸ್‌ಆರ್‌ಟಿಸಿ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದೆ. ಆದರೆ ಈವರೆಗೆ ಸಮರ್ಪಕವಾಗಿ ಸ್ವಚ್ಛತೆ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದರು. ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಮಳಿಗೆಗಳ ಆದಾಯ ಕೆಎಸ್‌ಆರ್‌ಟಿಸಿಗೆ ಹೋಗುತ್ತಿದ್ದರೂ ಸ್ವಚ್ಛತೆಯ ಕಡೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಈ ಹಣವನ್ನು ಪಟ್ಟಣ ಪಂಚಾಯತಿಗೆ ನೀಡಬೇಕು ಹಾಗೂ ಗುತ್ತಿಗೆದಾರರನ್ನು ಬದಲಾಯಿಸಿ ಹೊಸದಾಗಿ ಕಾರ್ಯನಿರ್ವಹಿಸುವವರಿಗೆ ಹೊಣೆಗಾರಿಕೆ ನೀಡಬೇಕು ಎಂದು ಆಗ್ರಹಿಸಿದರು.
ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ವಿರೇಶ ಹಟ್ಟಿ ಮಾತನಾಡಿ, ಸರ್ಕಾರದ ಆದೇಶದಂತೆ ವರ್ಷಪೂರ್ತಿ ಪಟ್ಟಣದ ಸ್ವಚ್ಛತೆ ಕಾಪಾಡುವುದು ಪಟ್ಟಣ ಪಂಚಾಯತಿ, ಸದಸ್ಯರು ಹಾಗೂ ಸಾರ್ವಜನಿಕರ ಜವಾಬ್ದಾರಿಯಾಗಿದೆ ಎಂದರು. ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಉದ್ದೇಶದಿಂದ ಆಡಳಿತ ಮಂಡಳಿಯೊAದಿಗೆ ಚರ್ಚಿಸಿ ‘ಸ್ವಚ್ಛತೆಯೇ ಸೇವೆ’ ಎಂಬ ಘೋಷಣೆಯಡಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೊದಲ ಹಾಗೂ ಎರಡನೇ ಬಸ್ ನಿಲ್ದಾಣಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಪ.ಪಂ ಅಧ್ಯಕ್ಷ ಚನಮಲ್ಲಪ್ಪ ಗಿಡ್ಡಪ್ಪಗೋಳ, ಸದಸ್ಯರಾದ ಶ್ರೀಶೈಲ ಮುಳವಾಡ, ನಿಂಗಪ್ಪ ಗಣಿ, ವಿಜಯಮಹಾತೇಂಶ ಗಿಡ್ಡಪ್ಪಗೋಳ, ಬನಪ್ಪ ಬಾಲಗೊಂಡ, ಅಪ್ಪಾಸಿ ಮಟ್ಯಾಳ, ಮಲ್ಲು ಹೆರಕಲ್,ಅಶೋಕ್ ಜಿಡ್ಡಿಬಾಗಿಲ, ಅನ್ವರ್ ಕಂಕರಪೀರ ಸೇರಿದಂತೆ ಪೌರಕಾರ್ಮಿಕರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.



























