ದೇಶಕ್ಕೆ ಮಹಾತ್ಮ ಗಾಂಧಿಯವರ ಕೊಡುಗೆ ಅವಿಸ್ಮರಣೀಯ

ಕಲಬುರಗಿ : ಜ.30:ಮಹಾತ್ಮ ಗಾಂಧೀಜಿಯವರು ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟು, ‘ರಾಷ್ಟ್ರಪಿತ’ರಾಗಿದ್ದಾರೆ. ಸತ್ಯ ಮತ್ತು ಅಹಿಂಸೆಯ ತತ್ವಗಳ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಮಾಡಿರುವುದು ವಿಶೇಷವಾಗಿದೆ. ಅಸಹಕಾರ, ಉಪ್ಪಿನ ಸತ್ಯಾಗ್ರಹ ಮತ್ತು ಕ್ವಿಟ್ ಇಂಡಿಯಾ ಆಂದೋಲನಗಳ ಮೂಲಕ ಲಕ್ಷಾಂತರ ಜನರನ್ನು ಒಗ್ಗೂಡಿಸಿದರು, ಅಸ್ಪೃಶ್ಯತೆ ನಿವಾರಣೆ, ಖಾದಿ ಬಳಕೆ, ಮತ್ತು ಕೋಮು ಸೌಹಾರ್ದತೆಗಾಗಿ ಶ್ರಮಿಸಿದ್ದಾರೆ. ಗಾಂಧಿಯವರು ದೇಶಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು. ನಗರದ ಖಾದ್ರಿ ಚೌಕ್ ‘ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಮಹಾತ್ಮ ಗಾಂಧೀಜಿಯವರ 78ನೇ ಹುತಾತ್ಮ ದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು. ಖಾದಿ ಬಟ್ಟೆಯ ಬಳಕೆ ಮತ್ತು ಚರಕದ ಮೂಲಕ ಸ್ವದೇಶಿ ಉತ್ಪನ್ನಗಳನ್ನು ಉತ್ತೇಜಿಸಿ, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಶ್ರಮಿಸಿದರು. ಹಿಂದೂ-ಮುಸ್ಲಿಂ ಏಕತೆ ಮತ್ತು ಸಾಮಾಜಿಕ ಸಾಮರಸ್ಯಕ್ಕಾಗಿ ಜೀವನಪೂರ್ತಿ ಹೋರಾಡಿದರು. ಅವರು ವಕೀಲರು,ವಸಾಹತುಶಾಹಿ ವಿರೋಧಿ, ರಾಷ್ಟ್ರೀಯವಾದಿ ಮತ್ತು ರಾಜಕೀಯ ನೀತಿಶಾಸ್ತ್ರಜ್ಞರಾಗಿದ್ದರು. ಪ್ರಪಂಚದಾದ್ಯಂತ ನಾಗರಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕಾಗಿ ಚಳುವಳಿಗಳಿಗೆ ಸ್ಫೂರ್ತಿ ನೀಡಿದರು. ಗಾಂಧೀಜಿಯವರ ಸಂದೇಶ, ತ್ಯಾಗ, ಹೋರಾಟ ಮರೆಯುವಂತಿಲ್ಲ ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಶಿಕ್ಷಕ ಸೈಯದ್ ಹಮೀದ್, ವಿದ್ಯಾರ್ಥಿಗಳು ಭಾಗವಹಿಸಿದ್ದರು.