ಮಹಾ ರಂಗ ಚೇತನ ಸಿಜಿಕೆ : ಹೆಚ್. ಎಸ್. ಬಸವಪ್ರಭು

ಕಲಬುರಗಿ: ಜೂ.೩೦:ಸಮಕಾಲೀನ ಸಾಂಸ್ಕೃತಿಕ, ರಾಜಕೀಯ ಪ್ರಜ್ಞೆ ಮತ್ತು ಹೋರಾಟದ ಮನೋಭಾವನೆಯ ರಂಗ ಚಟುವಟಿಕೆಗಳ ಮೂಲಕ ಪ್ರಭಾವಿಸಿದ ಮಹಾ ರಂಗ ಚೇತನ ಸಿಜಿಕೆ ಆಗಿದ್ದಾರೆ ಎಂದು ಹಿರಿಯ ರಂಗಕರ್ಮಿ ಹೆಚ್.ಎಸ್.ಬಸವಪ್ರಭು ಹೇಳಿದರು.
ಕಲಬುರಗಿಯ ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ ಹಾಗೂ ಕರ್ನಾಟಕ ಬೀದಿ ನಾಟಕ ಅಕಾಡೆಮಿ ಬೆಂಗಳೂರು ಇವುಗಳ ಸಹಯೋಗದಲ್ಲಿ ನಗರದ ಬಿಸಿಲು ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿದ ಸಿಜಿಕೆ ಬೀದಿರಂಗ ದಿನ ಮತ್ತು ಸಿಜಿಕೆ ರಂಗ ಪುರಸ್ಕಾರ ಕಾರ್ಯಕ್ರಮದಲ್ಲಿ ಹಿರಿಯ ರಂಗ ಕಲಾವಿದ ಹಾಗೂ ಗಾಯಕ ಸಂಗಯ್ಯ ಹಳ್ಳದಮಠ ಅವರಿಗೆ ೨೦೨೪ನೇ ಸಾಲಿನ ಸಿಜಿಕೆ ರಂಗ ಪುರಸ್ಕಾರ ಮತ್ತು ರಂಗ ನಿರ್ದೇಶಕ ರಾಘವೇಂದ್ರ ಹಳಿಪೇಟಿ ಅವರಿಗೆ ೨೦೨೫ನೇ ಸಾಲಿನ ಸಿಜಿಕೆ ರಂಗ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದರು.
ಸದಾ ಕ್ರಿಯಾಶೀಲ ಯುವ ರಂಗಕರ್ಮಿಗಳ ಜೊತೆ ಒಡನಾಟದಲ್ಲಿರುತ್ತಿದ್ದ ಸಿಜಿಕೆ ಅವರು ಅನೇಕ ನಾಟಕಕಾರರು, ನಿರ್ದೇಶಕರು, ತಂತ್ರಜ್ಞರು ಮತ್ತು ನಟನಟಿಯರನ್ನು ಬೆಳೆಸಿದ್ದಾರೆ. ಖ್ಯಾತ ಚಲನಚಿತ್ರ ನಟಿ ಉಮಾಶ್ರೀ ಕೂಡ ಸಿಜಿಕೆ ಅವರ ರಂಗ ಗರುಡಿಯಲ್ಲಿ ಬೆಳೆದಿರುವ ಪ್ರತಿಭೆ. ಸಿಜಿಕೆ ಅವರ ‘ಒಡಲಾಳ’ ರಂಗ ಪ್ರಯೋಗ ರಂಗಭೂಮಿ ಇತಿಹಾಸದಲ್ಲಿ ಒಂದು ದೊಡ್ಡ ಮೈಲುಗಲ್ಲು. ಹಾಗೆಯೇ ಬೆಲ್ಚಿ, ಮಹಾಚೈತ್ರ, ದಂಡೆ, ಅಂಬೇಡ್ಕರ್, ರುಡಾಲಿ ರಂಗ ಪ್ರಯೋಗಗಳು ರಂಗಾಸಕ್ತರ ಜನಮಾನಸದಲ್ಲಿ ಅಚ್ಚಳಿಯದ ನೆನಪುಗಳಾಗಿ ಉಳಿದಿವೆ ಎಂದರು.
ಕಲಬುರಗಿ ಸಮುದಾಯದ ದತ್ತಾತ್ರಯ ಇಕ್ಕಳಕಿ ಮುಖ್ಯ ಅತಿಥಿಯಾಗಿ ಮಾತನಾಡಿ ರಂಗಭೂಮಿ ಅತ್ಯಂತ ಶಕ್ತಿಯುತ ಮಾಧ್ಯಮವಾಗಿದ್ದು, ಇದು ಎಲ್ಲಾ ಪ್ರಕಾರದ ಕಲೆಗಳನ್ನು ಒಳಗೊಂಡಿದೆ ಎಂದರು.
೨೦೨೪ನೇ ಸಾಲಿನ ‘ಸಿಜಿಕೆ ರಂಗ ಪುರಸ್ಕಾರ’ ಸ್ವೀಕರಿಸಿ ಮಾತನಾಡಿದ ಹಿರಿಯ ರಂಗ ಕಲಾವಿದ ಸಂಗಯ್ಯ ಹಳ್ಳದಮಠ ಕನ್ನಡ ನಾಡು-ನುಡಿ, ಮತದಾನ, ನೈರ್ಮಲ್ಯ, ಶಿಕ್ಷಣ, ಆರೋಗ್ಯ ಸೇರಿದಂತೆ ಜಾಗೃತಿ ಮೂಡಿಸುವಲ್ಲಿ ಬೀದಿ ನಾಟಕಗಳು ಪ್ರಮುಖ ಪಾತ್ರವಹಿಸುತ್ತವೆ ಎಂದರು.
೨೦೨೫ನೇ ಸಾಲಿನ ‘ಸಿಜಿಕೆ ರಂಗ ಪುರಸ್ಕಾರ’ ಸ್ವೀಕರಿಸಿದ ರಂಗ ನಿರ್ದೇಶಕ ರಾಘವೇಂದ್ರ ಹಳಿಪೇಟಿ ಮಾತನಾಡಿ ಜನರು ನಾಟಕ ನೋಡಲು ಬರುವುದಿಲ್ಲ ಎಂದು ಜನರ ಮಧ್ಯೆ ಸಿಜಿಕೆ ಅವರು ನಾಟಕಗಳನ್ನು ಪ್ರಸ್ತುತಪಡಿಸುವ ಮೂಲಕ ನಾಟಕಾಭಿರುಚಿ ಬೆಳೆಸದಿರು. ಬೀದಿ ನಾಟಕಕ್ಕೆ ಮಾನ್ಯತೆ ದೊರೆಯುವಲ್ಲಿ ಸಿಜಿಕೆ ಪಾತ್ರ ಪ್ರಮುಖವಾಗಿದೆ. ಸಿಜಿಕೆ ಪ್ರಶಸ್ತಿ ದೊರಕಿರುವುದು ನನಗೆ ಹೆಚ್ಚಿನ ಜವಾಬ್ದಾರಿ ನೀಡಿ, ನನ್ನನ್ನು ಮತ್ತಷ್ಟು ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವಂತೆ ಮಾಡಿದೆ ಎಂದರು.
ಹಿರಿಯ ಚಿತ್ರ ಕಲಾವಿದ ವಿ ಬಿ ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಯ ಮುಖ್ಯಸ್ಥ ಡಾ. ಪರಶುರಾಮ ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸೂರ್ಯಕಾಂತ ನಂದೂರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶಂಕ್ರಯ್ಯ ಘಂಟಿ, ಮಹಾಂತೇಶ್ ನವಲಕಲ್ಲ, ಪ್ರಭಾಕರ ಜೋಶಿ, ವಿಕ್ರಮ್ ವಿಸಾಜಿ, ಶಿವಶರಣಪ್ಪ ಮೂಳೆಗಾಂವ್, ಬಸವರಾಜ ಜಾನೆ, ಮಂಜುಳ ಜಾನೆ, ನಾಗೇಂದ್ರಪ್ಪ ಅವರಾದ, ಬಾಬುರಾವ್ ಹೆಚ್, ಚಿದಾನಂದ ಸಾಲಿ, ಪಲ್ಲವ ವೆಂಕಟೇಶ್, ಶಿವಾನಂದ ಭಂಟನೂರು, ಎಂ. ಎಚ್. ಬೆಳಮಗಿ, ಅಯಾಜುದ್ದೀನ್ ಪಟೇಲ್, ಆಶೋಕ ಶೆಟಕಾರ, ಶರಣು ಪಟ್ಟಣಶೆಟ್ಟಿ, ದೌಲತರಾಯ ದೇಸಾಯಿ, ಸಿದ್ದು ಮರಗೋಳ, ನಿಂಗಣ್ಣ ಕೇರಿ, ರೆಹಮಾನ್ ಪಟೇಲ್, ಸಂದೀಪ್ ಬಿ, ಗೋಪಿ ಕುಲಕರ್ಣಿ, ಬಸವರಾಜ ಕಲೆಗಾರ, ಗುರು ಅರಳಿ, ಗರೀಶ್ ಕುಲಕರ್ಣಿ, ಮಲ್ಲಿಕಾರ್ಜುನ ಕೋರಳ್ಳಿ, ಬಿ. ಎಂ. ಪಾಟೀಲ್, ಶಶಿಕಾಂತ ಪಾಟೀಲ್, ಅಶೋಕ್ ಚಿತ್ತಕೋಟಿ ಮುಂತಾದವರಿದ್ದರು.