
ಕಲಬುರಗಿ,ಜ.16-ಚಡಚಣ ತಾಲ್ಲೂಕಿನ ಶ್ರೀಕ್ಷೇತ್ರ ಇಂಚಗೇರಿ ಮಠದಲ್ಲಿ ಭಾವೂಸಾಹೇಬ ಮಹಾರಾಜರ, ಗಿರಿಮಲ್ಲೇಶ್ವರ ಮಹಾರಾಜರ, ಐನಾಥಪ್ರಭು ಮಹಾರಾಜರ, ಗುರುಪುತ್ರೇಶ್ವರ ಮಹಾರಾಜರ ಹಾಗೂ ಸಮರ್ಥ ಸದ್ಗುರು ಜಗನ್ನಾಥ ಮಹಾರಾಜರ ಪುಣ್ಯತಿಥಿ ಆಧ್ಯಾತ್ಮ ಸಪ್ತಾಹವು ಜನೆವರಿ 19 ರಿಂದ 22 ರವರೆಗೆ ನಡೆಯಲಿದೆ.
ಜ.19 ರಂದು ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಅಮೃತ ಹಸ್ತದಿಂದ ಶ್ರೀಮಠದಲ್ಲಿರುವ ವಿವಿಧ ಶ್ರೀಗಳ ಗದ್ದುಗೆಗಳಿಗೆ ಪೂಜೆ, ಶೇಜಾರತಿ ಹಾಗೂ ರಾಮದಾಸ ಮಹಾರಾಜರ ದಾಸಬೋದ ಮತ್ತು ವೀಣಾ ಪೂಜೆಯೊಂದಿಗೆ ಸಪ್ತಾಹ ಆರಂಭಗೊಳ್ಳಲಿದೆ.
22 ರಂದು ಅದ್ದೂರಿಯ ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ಜರುಗಿ ನಂತರ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಆಶೀರ್ವಚನ ಹಾಗೂ ಪುಷ್ಪ ವೃಷ್ಠಿಯೊಂದಿಗೆ ಮಂಗಲಗೊಳ್ಳುವ ಸಪ್ತಾಹದ ಅಂಗವಾಗಿ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮ ಜರುಗಲಿವೆ.
ವಿವಿಧ ಮಠಾಧೀಶರು, ಸಾಹಿತಿಗಳು, ರಾಜಕೀಯ ಮುಖಂಡರು, ಜನಪದ ಕಲಾವಿದರು, ಸರ್ವೋದಯ ಧುರೀಣರು ಭಾಗವಹಿಸುವ ಈ ಪುಣ್ಯಸ್ಮರಣೆ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಲೂ ಹುಬ್ಬಳ್ಳಿ, ಕಲಬುರ್ಗಿ, ಖವಟಕೊಪ್ಪ, ಆಥಣಿ, ಕನ್ನಾಳ, ಕೊಟ್ಟಲಗಿ, ತೆಲಸಂಗ ಹಾಗೂ ಮಹಾರಾಷ್ಟ್ರದ ಖೋಜಾನವಾಡಿ, ನಂದೇಶ್ವರ, ವಳಸಂಗ, ಜುನೋನಿಯಿಂದ ದಿಂಡಿ ಪಲ್ಲಕ್ಕಿ ಪಾದಯಾತ್ರೆಯ ಮೂಲಕ ಹಾಗೂ ಕರ್ನಾಟಕ -ಮಹಾರಾಷ್ಟ್ರದ ಮತ್ತು ವಿವಿಧ ಕಡೆಗಳಿಂದ ಸಹಸ್ರಾರು ಭಕ್ತರು ಆಗಮಿಸುವರು ಎಂದು ಭಾರತೇಶ ಹಾಸಿಲಕರ ತಿಳಿಸಿದ್ದಾರೆ.






















