
ಆಳಂದ: ಜ.19:ಮಾಡಿಯಾಳ ಗ್ರಾಮದ ಶ್ರೀ ಚನ್ನಮಲ್ಲೇಶ್ವರ ಮಠದ ಜಾತ್ರೆಯ ಅಂಗವಾಗಿ ಜ.19ರಿಂದ 30ರವರೆಗೆ ರಾತ್ರಿ 8:00 ಗಂಟೆಗೆ ಶ್ರೀ ಚನ್ನಮಲ್ಲೇಶ್ವರ ಚರಿತಾಮೃತ ಮಹಾಪುರಾಣ ಪ್ರವಚನ ಕಾರ್ಯಕ್ರಮ ಜರುಗಲಿದೆ.
ಈ ಕುರಿತು ಶ್ರೀಮಠದಲ್ಲಿ ಕಾರ್ಯಕ್ರಮದ ವಾಲ್‍ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಮಠದ ಪೀಠಾಧಿಪತಿ ಶ್ರೀ ಚನ್ನಮಲ್ಲ ಶಿವಾಚಾರ್ಯರು ಕಾರ್ಯಕ್ರಮ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಳ್ಗೊಳ್ಳಬೇಕು ಎಂದು ಅವರು ಹೇಳಿದರು.
ಪ್ರವಚನವನ್ನು ಶ್ರೀ ಉಪಮನ್ಯು ಶಿವಾಚಾರ್ಯರು (ಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠ, ಐನಾಪುರ) ಪ್ರವಚನ ನೀಡಲಿದ್ದು, ಸಂಗೀತಕ್ಕೆ ಸಂತೋಷ ಸಿಂದಗಿ ಹಾಗೂ ತಬಲಾ ಸಾಥ್‍ಗೆ ವಿರೇಶ ಹಿರೆಜೇವರ್ಗಿ ಸಹಕಾರ ನೀಡಲಿದ್ದಾರೆ ಎಂದು ಜ.21ರಂದು ಪುರಾಣ ಪ್ರವಚನದ ನಂತರ ನಿವೃತ್ತ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಜ.26ರಂದು ಬೆಳಿಗ್ಗೆ 10 ಗಂಟೆಗೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಖ್ಯಾತ ನೇತ್ರ ತಜ್ಞ ಡಾ. ವಿಶ್ವನಾಥ ರೆಡ್ಡಿಯವರಿಂದ ಉಚಿತ ನೇತ್ರ ತಪಾಸಣೆ ನಡೆಯಲಿದೆ.
ಜ.27ರಂದು ಸಾಯಂಕಾಲ ಶ್ರೀ ಚನ್ನಮಲ್ಲೇಶ್ವರ ಶಿಕ್ಷಣ ಸಂಸ್ಥೆಯ ಬಡದಾಳ ಶಾಲಾ ವಿದ್ಯಾರ್ಥಿಗಳಿಂದ ಶ್ರೀ ಚನ್ನಮಲ್ಲ ಶಿವಾಚಾರ್ಯರ ಪವಾಡಗಳನ್ನು ಆಧರಿಸಿದ ಕಿರು ನಾಟಕ ಪ್ರದರ್ಶನ ನಡೆಯಲಿದೆ. ಜ.28ರಂದು ಸಾಯಂಕಾಲ ಹಿರಿಯ ಕೃಷಿ ವಿಜ್ಞಾನಿ ರಾಜು ತೆಗ್ಗೆಳಿ ಹಾಗೂ ಡಾ. ಯೂಸುಫ್ ಅಲಿ ಅವರು ರೈತರಿಗೆ ಕೃಷಿ ಕುರಿತು ವಿಶೇಷ ಮಾರ್ಗದರ್ಶನ ನೀಡಲಿದ್ದಾರೆ. ನಂತರ ಸುಚಿತ ಕಿಣಗಿ ಹಾಗೂ ತಂಡದಿಂದ ಭರತನಾಟ್ಯ ಕಾರ್ಯಕ್ರಮ ಜರುಗಲಿದೆ.
ಜ.29ರಂದು ಬೆಳಿಗ್ಗೆ 10 ಗಂಟೆಗೆ ಮಾಡಿಯಾಳ ಆಯುರ್ವೇದ ಆಸ್ಪತ್ರೆಯ ವತಿಯಿಂದ ಬಡ ರೋಗಿಗಳಿಗೆ ಉಚಿತ ಸಂಧಿವಾತ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ರಾತ್ರಿ 8 ಗಂಟೆಗೆ ಧರ್ಮಸಭೆ ನಡೆಯಲಿದ್ದು, ನಾಗುರ ಮಠಾಧ್ಯಕ್ಷರು ಹಾಗೂ ಮಾತೋಶ್ರೀ ಸಿದ್ದಮಾಂಬೆ ಸಾನಿಧ್ಯ ವಹಿಸಲಿದ್ದಾರೆ. ಹಜರತ್ ಸೈಯದ್ ಭಾμÁ ಹುಸೇನ ಮಠಾಧ್ಯಕ್ಷರು (ಬಟ್ಟರಗಾ ದರ್ಗಾ) ಹಾಗೂ ಗರೀಬ ಸಾಹೇಬ ಮಠಾಧ್ಯಕ್ಷರು (ಹಿತ್ತಲಶಿರೂರು) ನೇತೃತ್ವ ವಹಿಸಲಿದ್ದಾರೆ. ರಾತ್ರಿ 9 ಗಂಟೆಗೆ ಜೀ ಕನ್ನಡ ವಾಹಿನಿಯ ಸರಿಗಮಪ ಸೀಸನ್-21ರ ವಿನ್ನರ್ ಹಾಗೂ ಇಂಡಿಯನ್ ಐಡಲ್ ಖ್ಯಾತ ಗಾಯಕಿ ಶಿವಾನಿ ಶಿವದಾಸ ಸ್ವಾಮಿ ಹಿರೇಮಠ ಮತ್ತು ತಂಡದಿಂದ ಭಕ್ತಿ ಸಂಗಮ ಕಾರ್ಯಕ್ರಮ ನಡೆಯಲಿದೆ.
ಜ.30ರಂದು ಬೆಳಿಗ್ಗೆ 10.30ಕ್ಕೆ ಸುಮಂಗಲಿಯರ ಕುಂಭಕಳಸ, ಮುತ್ತಿನಾರತಿ ಸಹಿತ ಡಾ. ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರ ಅಡ್ಡಪಲ್ಲಕಿ ಮಹೋತ್ಸವ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ವಿಜೃಂಭಣೆಯಿಂದ ಜರುಗಲಿದೆ. ಸಾಯಂಕಾಲ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಬೀದರ್ ಸಂಸದ ಸಾಗರ ಖಂಡ್ರೆ, ಶಾಸಕರಾದ ಬಿ.ಆರ್. ಪಾಟೀಲ್, ಎಂ.ವೈ. ಪಾಟೀಲ್, ಬಸವರಾಜ ಮತ್ತಿಮೂಡ, ಶರಣು ಸಲಗರ, ಮಾಜಿ ಶಾಸಕ ಸುಭಾಷ ಗುತ್ತೇದಾರ ಸೇರಿದಂತೆ ಹಲವು ಗಣ್ಯರು ಸೇರಿದಂತೆ ಹರ ಗುರು ಚರಮೂರ್ತಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಹಿರಿಯ ಮುಖಂಡ ಸಂಗಣ್ಣ ಮದ್ದಡಗಿ, ಸೂರ್ಯಕಾಂತ ರಾಮಜಿ ಸೇರಿದಂತೆ ಅನೇಕರು ಇದ್ದರು.























