ಮದ್ದೂರು ಗಲಾಟೆ: ಬಿಜೆಪಿಯ ರಾಜಕೀಯ ಕಾರ್ಯಸೂಚಿ-ಪ್ರಿಯಾಂಕ್ ಖರ್ಗೆ

ಕಲಬುರಗಿ,ಸೆ.10-ಬಿಜೆಪಿಯವರು ಕರಾವಳಿಯಲ್ಲಿದ್ದ ತಮ್ಮ ಕೋಮುವಾದದ ಪ್ರಯೋಗ ಶಾಲೆಯ ಬ್ರಾಂಚನ್ನು ಹಳೆ ಮೈಸೂರು ಭಾಗದಲ್ಲೂ ಓಪನ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಉರಿಗೌಡ ನಂಜೇಗೌಡ ಪಾತ್ರಗಳ ಸೃಷ್ಟಿ, ಶ್ರೀರಂಗಪಟ್ಟಣದ ಕೋಮು ಸಂಘರ್ಷ, ಕೆರೆಗೋಡು ಧ್ವಜ ಗಲಾಟೆ, ನಾಗಮಂಗಲ ಗಲಾಟೆ, ಮದ್ದೂರು ಗಲಾಟೆ-ಈ ಎಲ್ಲಾ ಘಟನೆಗಳ ಹಿಂದೆ ಬಿಜೆಪಿಯ ರಾಜಕೀಯ ಕಾರ್ಯಸೂಚಿ ಇದೆ, ಕರಾವಳಿಯಲ್ಲಿ ಹಾಕಿದ ವಿಷವನ್ನೇ ಹಳೆ ಮೈಸೂರು ಭಾಗಕ್ಕೂ ಹಾಕಲಾಗುತ್ತಿದೆ. ಬಿಜೆಪಿಯೊಂದಿಗೆ ಜೆಡಿಎಸ್ ಸೈದ್ಧಾಂತಿಕ ಮೈತ್ರಿ ಮಾಡಿಕೊಂಡ ನಂತರ ಕೋಮು ಸಾಮರಸ್ಯಕ್ಕೆ ಹೆಸರಾಗಿದ್ದ ಮಂಡ್ಯ ಸುತ್ತಾ ಮುತ್ತ ಗಲಾಟೆಗಳು ಶುರುವಾಗಿವೆ. ಇದೆಲ್ಲದಕ್ಕೆ ಕಡಿವಾಣ ಹಾಕಲು ನಮ್ಮ ಸರ್ಕಾರ ಶಕ್ತಿಮೀರಿ ಪ್ರಯತ್ನಿಸುತ್ತದೆ. ಸಾಮರಸ್ಯ, ಸಹಬಾಳ್ವೆಯನ್ನು ಸ್ಥಾಪಿಸಲು ಸದಾ ಬದ್ದವಾಗಿದೆ ಎಂದು ಅವರು ತಮ್ಮ “ಎಕ್ಸ್” ಪೋಸ್ಟ್‍ನಲ್ಲಿ ಬರೆದುಕೊಂಡಿದ್ದಾರೆ.