ಚಂದ್ರಗ್ರಹಣ: ಬಹುತೇಕ ದೇವಾಲಯಗಳು ಬಂದ್

ಬೆಂಗಳೂರು, ಸೆ.೭- ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಹಿನ್ನೆಲೆ ಬೆಂಗಳೂರಿನ ಪ್ರಸಿದ್ಧ ದೇವಾಲಯಗಳು ಸೇರಿದಂತೆ ಕರ್ನಾಟಕದ ಬಹುತೇಕ ದೇವಾಲಯಗಳಿಗೆ ಇಂದು ಮಧ್ಯಾಹ್ನವೇ ಬಾಗಿಲು ಮುಚ್ಚಲಾಗಿದೆ.


ಭಾರತದಲ್ಲಿ ಇಂದು ಚಂದ್ರಗ್ರಹಣ ಸಂಭವಿಸಲಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ದೇವಾಲಯಗಳು ಮಧ್ಯಾಹ್ನದ ಬಳಿಕ ಬಂದ್ ಆಗಲಿವೆ.ಅದರಲ್ಲೂ, ತಿರುಪತಿ ತಿರುಮಲ ಸೇರಿದಂತೆ ಕರ್ನಾಟಕ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ದೇವಸ್ಥಾನಗಳು ಮುಚ್ಚಲ್ಪಡಲಿವೆ.


ಬೆಂಗಳೂರಿನ ಗವಿಪುರಂನ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಭಾನುವಾರ ಬೆಳಗ್ಗೆ ೧೧ ಗಂಟೆಗೆ ಬಂದ್ ಆಗಲಿದೆ. ಗ್ರಹಣದ ಮರುದಿನ ಸೋಮವಾರ ಬೆಳಗ್ಗೆ ೬ ಗಂಟೆಗೆ ಶುದ್ಧೀಕರಣ, ಪುಣ್ಯ ಮಾಡಿ ದರ್ಶನ ವ್ಯವಸ್ಥೆ ಮಾಡಲಾಗಿದೆ.


ಬನಶಂಕರಿ ದೇಗುಲದಲ್ಲಿ ದೇವಿ ಜನ್ಮದಿನೋತ್ಸವವಿದ್ದು, ಸಂಜೆ ೪ ಗಂಟೆಯವರೆಗೆ ಚಂಡಿಕಾ ಹೋಮ ಸೇರಿದಂತೆ ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ರಾಹುಕಾಲದ ಪೂಜೆ ಮುಗಿಸಿ ೬ ಗಂಟೆಗೆ ದೇವಾಲಯದ ಎಲ್ಲಾ ಕಡೆ ದರ್ಬೆ ಇಟ್ಟು ಬಾಗಿಲು ಬಂದ್ ಮಾಡಲಾಗುತ್ತದೆ.


ಕಾಡುಮಲ್ಲೇಶ್ವರ ದೇವಾಲಯ, ಮಧ್ಯಾಹ್ನ ೧೨:೩೦ಕ್ಕೆ ಬಂದ್ ಆಗಲಿದೆ. ಸೋಮವಾರ ಬೆಳಿಗ್ಗೆ ೪ ಗಂಟೆಗೆ ದೇವಾಲಯ ತೆರೆಯಲಿದ್ದು, ಶುದ್ಧೀಕರಣ ಕಾರ್ಯ, ನಂತರ ಗ್ರಹಣ ಶಾಂತಿಗಾಗಿ ರುದ್ರ ಹೋಮ, ಪ್ರಸಾದ ಸೇವೆಯಿದೆ.


ನಗರದ ಗಾಳಿ ಆಂಜನೇಯ ದೇವಸ್ಥಾನ ಇಂದು ಮಧ್ಯಾಹ್ನ ೩ ಗಂಟೆಗೆ ಬಂದ್ ಆಗಲಿದ್ದು, ದೇವಾಲಯವನ್ನುಸ ದರ್ಬೆ ಹಾಕಿ ಮುಚ್ಚಲಾಗಿದೆ. ಸೋಮವಾರ ಬೆಳಗ್ಗೆ ೪ಕ್ಕೆ ಗ್ರಹಣ ಮುಕ್ತಿ ಶುಚಿತ್ವ ಕಾರ್ಯ ನಡೆಸಲಿದ್ದು, ೬ ಗಂಟೆಯ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.


ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಚಂದ್ರಗ್ರಹಣವು ಭಾನುವಾರ ರಾತ್ರಿ ೮.೫೦ ಗಂಟೆಗೆ ಆರಂಭ ಆಗಲಿದ್ದು, ಮಧ್ಯರಾತ್ರಿ ೧೨.೨೨ರ ವರೆಗೆ ಇರಲಿದೆ ಎಂದು ತಿಳಿದುಬಂದಿದೆ.


ಈ ವೇಳೆ ಬಿಳಿ ಬಣ್ಣದಲ್ಲಿ ಇರುವ ಚಂದ್ರನು ಕೆಂಪು ಬಣ್ಣದಲ್ಲಿ ಗೋಚರಿಸಲಿದ್ದಾನೆ. ಈ ಹಿನ್ನೆಲೆ ಕರ್ನಾಟಕದ ಬೆಂಗಳೂರು ಸೇರಿದಂತೆ ಇತರ ದೇವಾಲಯಗಳು ಮತ್ತು ಆಂಧ್ರಪ್ರದೇಶದ ತಿರುಪತಿ ಸೇರಿದಂತೆ ಹಲವೆಡೆ ದೇವಸ್ಥಾನಗಳು ಮುಚ್ಚಲ್ಪಡಲಿವೆ ಎಂದು ತಿಳಿದುಬಂದಿದೆ. ಖಗ್ರಾಸ ಚಂದ್ರ ಗ್ರಹಣದ ಸಮಯದಲ್ಲಿ ದೇವಸ್ಥಾನಗಳನ್ನು ಮುಚ್ಚಲು ಪ್ರಮುಖ ಕಾರಣವೂ ಇದೆ.

ಯಾವ ದೇವಸ್ಥಾನಗಳು ಬಂದ್?
ಚಂದ್ರಗ್ರಹಣ ಹಿನ್ನೆಲೆ ಬೀದರ್‌ನಲ್ಲಿನ ಐತಿಹಾಸಿಕ ದೇವಾಲಯಗಳನ್ನು ಭಾನುವಾರ ಮುಚ್ಚಲಾಗುತ್ತದೆ.


ಮೈಸೂರಿನ ಚಾಮುಂಡೇಶ್ವರಿ ದೇವಾಲಯ ರಾತ್ರಿ ೯:೩೦ಕ್ಕೆ, ಕೊಪ್ಪಳದ ಹುಲಗೆಮ್ಮ ದೇವಾಲಯ ಸಂಜೆ ೫ಕ್ಕೆ, ಚಿಕ್ಕಬಳ್ಳಾಪುರದ ಘಾಟಿ ಸುಬ್ರಮಣ್ಯ ದೇವಸ್ಥಾನ ಸಂಜೆ ೪ಕ್ಕೆ, ಕೊಪ್ಪಳದ ಗಂಗಾವತಿಯ ಅಂಜನಾದ್ರಿ ಬೆಟ್ಟ ಸಂಜೆ ೫ಕ್ಕೆ, ಬೇಲೂರಿನ ಚನ್ನಕೇಶವ ದೇವಸ್ಥಾನ ಮಧ್ಯಾಹ್ನ ೩ಕ್ಕೆ, ದಕ್ಷಿಣ ಕನ್ನಡದ ಕುಕ್ಕೆ ಸುಬ್ರಮಣ್ಯ ದೇವಾಲಯ ಸಂಜೆ ೫ಕ್ಕೆ.


ಧರ್ಮಸ್ಥಳದ ಶ್ರೀ ಮಂಜುನಾಥ ದೇವಾಲಯ ಸಂಜೆ ೭ಕ್ಕೆ, ಮಂಗಳೂರಿನ ಕದ್ರೋಳಿ ದೇವಾಲಯ ರಾತ್ರಿ ೮ಕ್ಕೆ, ಮಂಗಳೂರಿನ ಕದ್ರಿ ದೇವಾಲಯ ಸಂಜೆ ೬.೩೦ಕ್ಕೆ, ಬೆಂಗಳೂರಿನ ಗಾಳಿ ಆಂಜನೇಯ ದೇವಾಲಯ ಮಧ್ಯಾಹ್ನ ೩ಕ್ಕೆ, ಬೆಂಗಳೂರಿನ ಮೆಜೆಸ್ಟಿಕ್ ಬಳಿಯ ಅಣ್ಣಮ್ಮ ದೇವಾಲಯ ರಾತ್ರಿ ೮ಕ್ಕೆ, ಆರ್‌ಆರ್ ನಗರದ ರಾಜರಾಜೇಶ್ವರಿ ದೇವಾಲಯ ರಾತ್ರಿ ೮ಕ್ಕೆ.


ಬೆಂಗಳೂರಿನ ಬನಶಂಕರಿ ದೇವಸ್ಥಾನ ಸಂಜೆ ೬ಕ್ಕೆ, ಗವಿ ಗಂಗಾಧರೇಶ್ವರ ದೇವಸ್ಥಾನ: ಬೆಳಗ್ಗೆ ೧೧ಕ್ಕೆ, ಕಾಡು ಮಲ್ಲೇಶ್ವರ ದೇವಸ್ಥಾನ ಮಧ್ಯಾಹ್ನ ೧೨.೨೦ಕ್ಕೆ, ಮಲ್ಲೇಶ್ವರದ ಪ್ರಸಿದ್ಧ ಗಂಗಮ್ಮ ದೇವಾಲಯ ಸಂಜೆ ೭ಕ್ಕೆ, ಚಾಮರಾಜಪೇಟೆಯ ಬಂಡೆ ಮಹಾಕಾಳಿ ದೇವಸ್ಥಾನ ರಾತ್ರಿ ೭.೩೦ಕ್ಕೆ ಬಂದ್ ಆಗಲಿದೆ.