
ಬೆಂಗಳೂರು,ಮೇ೩೧:ಎಸ್‌ಎಸ್‌ಎಲ್‌ಸಿಯಲ್ಲಿ ಶೇ. ೬೦ಕ್ಕಿಂತ ಕಡಿಮೆ ಅಂಕ ಪಡೆದಿರುವ ಡಿಡಿಪಿಐ ಗಳಿಗೆ ನೋಟಿಸ್ ಜಾರಿ ಮಾಡಿ ನೋಟಿಸ್‌ಗೆ ಕೊಟ್ಟ ಉತ್ತರ ಸಮರ್ಪಕವಾಗಿರದಿದ್ದರೆ ಅವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದರು.
ವಿಧಾನಸೌಧದಲ್ಲಿಂದು ನಡೆದಿರುವ ಎಲ್ಲ ಜಿಲ್ಲಾಧಿಕಾರಿಗಳ ಜಿಪಂ, ಸಿಇಓಗಳ ಸಭೆಯ ೨ನೇ ದಿನದ ಸಭೆಯಲ್ಲಿ ಇಂದು ಆರಂಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್‌ಎಸ್‌ಎಲ್‌ಸಿಯಲ್ಲಿ ಫಲಿತಾಂಶ ಕಡಿಮೆ ಬಂದಿರುವುದಕ್ಕೆ ಶಿಕ್ಷಕರ ಕೊರತೆ, ಸಿಬ್ಬಂದಿ ಕೊರತೆ ಎನ್ನುವ ನೆಪ ಹೇಳಬೇಡಿ. ದ.ಕನ್ನಡ ಮತ್ತು ಇತರೆ ಜಿಲ್ಲೆಗಳಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ. ಡಿಡಿಪಿಐಗಳು ಜವಾಬ್ದಾರಿ ತೆಗೆದುಕೊಳ್ಳಬೇಕು. ಡಿಡಿಪಿಐಗಳು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೋ ಇಲ್ಲವೋ ಎಂಬುದನ್ನು ಪರಿಶೀಲಿಸಿ, ಇಲ್ಲಸಲ್ಲದ ನೆಪ ಬೇಡಿ. ಶಿಕ್ಷಕರು ಮತ್ತು ಡಿಡಿಪಿಐ ಗಳು ಆಸಕ್ತಿಯಿಂದ ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಎಲ್ಲಕಡೆ ಬರುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ವಿವೇಕಾ ಯೋಜನೆಯಡಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಹಣ ಮಂಜೂರು ಮಾಡುವುದರಲ್ಲಿ ವಿಳಂಬವಾಗಬಾರದು., ಕ್ರಿಯಾ ಯೋಜನೆ ತಕ್ಷಣ ಸಿದ್ಧಪಡಿಸಿ ಎಂದು ಸೂಚಿಸಿದರು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆಯಾಗದಂತೆ ಶಿಕ್ಷಕರು ಮತ್ತು ಅಧಿಕಾರಿಗಳು ಪೋಷಕರ ಜತೆ ಮಾತನಾಡಿ ಡ್ರಾಪ್‌ಔಟ್ ತಡೆಯಲು ಏನೆಲ್ಲ ಸಾಧ್ಯವೋ ಅದನ್ನು ಮಾಡಬೇಕು ಪ್ರತಿವರ್ಷ ಸರ್ಕಾರಿ ಶಾಲೆಗಳ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಿರುವುದು ಕೆಟ್ಟ ಬೆಳವಣಿಗೆ ಎಂದರು.
ಬಾಲ್ಯ ವಿವಾಹ ಕ್ರಿಮಿನಲ್ ಪ್ರಕರಣ ದಾಖಲಿಸಿ
ಹಿಂದುಳಿದವರು, ದಲಿತರು, ಅಶಿಕ್ಷಿತರು ಇರುವ ಕಡೆ ಬಾಲ್ಯ ವಿವಾಹ ಮತ್ತು ಬಾಲ್ಯ ಗರ್ಭಿಣಿ ಪ್ರಕರಣಗಳಿರುತ್ತವೆ. ಇದನ್ನು ಸಮರ್ಪಕವಾಗಿ ತಡೆಯಬೇಕು ಎಂದು ನಿಮಗೆ ಅನಿಸಿಲ್ಲವಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿ ಸರಿಯಾಗಿ ನಿಗಾವಹಿಸಿ ವರದಿ ನೀಡದ ಪಿಡಿಓಗಳು ರೆವಿನ್ಯೂ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಬಾಲ್ಯವಿವಾಹಗಳು ಆಗಿರುವ ಕಡೆ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಿ ಎಂದು ತಾಕೀತು ಮಾಡಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಲವು ಯೋಜನೆಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ತಾಂತ್ರಿಕ ತೊಂದರೆಗಳನ್ನು ಅಧಿಕಾರಿಗಳ ಮುಂದಿಟ್ಟಾಗ ಗರಂ ಆದ ಮುಖ್ಯಮಂತ್ರಿಗಳು ಎಷ್ಟು ವರ್ಷಗಳಿಂದ ಇದೇ ಕತೆ ಹೇಳಿಕೊಂಡು ಬರಿತ್ತೀರಿ. ಅಗತ್ಯ ಬಿದ್ದರೆ ಭೂಸ್ವಾಧಿನಕ್ಕಾಗಿಯೇ ವಿಶೇಷ ಅಧಿಕಾರಿಗಳನ್ನು ನೇಮಿಸಲು ನಾವು ಸಿದ್ಧರಿದ್ದೇವೆ. ಹಳೆಯ ಯೋಜನೆಗಳು ಪೂರ್ಣಗೊಳ್ಳದ ಹೊರತು ಹೊಸ ಹೆದ್ದಾರಿ ಯೋಜನೆಗಳು ನಮಗೆ ಸಿಗುವುದಿಲ್ಲ ಎಂದಾಗ ಇದಕ್ಕೆ ದನಿಗೂಡಿಸಿದ ಸಚಿವ ಸತೀಶ್‌ಜಾರಕಿಹೊಳಿ ೪೨ ಬಾಕಿ ಯೋಜನೆಗಳಲ್ಲಿ ೨೨ ಯೋಜನೆಗಳನ್ನು ಮುಗಿಸಿದ್ದೇವೆ. ಕೇಂದ್ರದಿಂದಲೇ ಬಹಳ ಸಮಸ್ಯೆಯಾಗುತ್ತಿದೆ. ಹಲವು ಕಡೆ ಇನ್ನಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಬೇಕಿದೆ ಎಂದರು. ಎಸ್‌ಎಲ್‌ಓಗಳು ಜಿಲ್ಲಾಧಿಕಾರಿಗಳ ಅಧೀನದಲ್ಲಿರುವಂತೆ ಸುತ್ತೋಲೆ ಹೊರಡಿಸುವಂತೆಯೂ ಮುಖ್ಯಮಂತ್ರಿಗಳು ಸೂಚಿಸಿದರು.
ಸಭೆಗೆ ತಡವಾಗಿ ಬಂದ ಸಚಿವರ ಮೇಲೆ ಸಿಎಂ ಗರಂ
೨ನೇ ದಿನದ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಓಗಳ ಸಭೆಗೆ ತಡವಾಗಿ ಬಂದ ಸಚಿವರ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆದರು.
ವಿಧಾನಸೌಧದಲ್ಲಿ ಇಂದು ೨ನೇ ದಿನದ ಬಿಸಿ, ಸಿಇಓ ಸಭೆ ಆರಂಭಕ್ಕೂ ಮುನ್ನ ಸ್ವಾಗತ ಭಾಷಣದ ಸಂದರ್ಭದಲ್ಲಿ ಹಲವು ಸಚಿವರು ಸಭೆಗೆ ಬಂದಿರಲಿಲ್ಲ. ಆಗ ಸಿಟ್ಟಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾರ್‍ಯಾರು ಸಭೆಗೆ ಬಂದಿಲ್ಲವೋ ಅವರ ಹೆಸರು ಗುರುತು ಹಾಕಿಕೊಳ್ಳುತ್ತೇನೆ ಎಂದಾಗ ಸಚಿವ ಕೈಷ್ಣಭೈರೇಗೌಡರು ನೀವೇನು ದಂಡ ಹಾಕಲ್ಲ ಬಿಡಿ ಸರ್ ಎಂದು ಹಾಸ್ಯದ ದಾಟಿಯಲ್ಲಿ ಹೇಳಿದರು. ಆಗ ಮುಖ್ಯಮಂತ್ರಿಗಳು ಇದು ಪ್ರಮುಖವಾದ ಸಭೆ ಎಲ್ಲರೂ ಸರಿಯಾದ ಸಮಯಕ್ಕೆ ಬರಬೇಕು ಇನ್ನೂ ಸಭೆಗೆ ಬಾರದೆ ಹೋದರೆ ಹೇಗೆ ನಮ್ಮ ಡಿಸಿಎಂ ಅವರು ಇನ್ನೂ ಸಭೆಗೆ ಬಂದಿಲ್ಲ ಎಂದು ಹೇಳಿದರು. ಅದಾದ ಬಳಿಕ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಒಬ್ಬೊಬ್ಬರೇ ಸಚಿವರು ಸಭೆಗೆ ಬಂದರು.