
ಕಲಬುರಗಿ:ಏ.2: ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ಶ್ರೀ ಹನುಮಾನ ಜಯಂತಿಯನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಬೆಳಿಗ್ಗೆ ಪಂಚಾಮೃತ ಅಭಿಷೇಕ, ಸೂರ್ಯೋದಯ ಕಾಲಕ್ಕೆ ಶ್ರೀ ಹನುಮಾನ ತೊಟ್ಟಿಲು ಉತ್ಸವ, ನಂತರ ಪವಮಾನ ಹೋಮ, ಸತ್ಯನಾರಾಯಣ ಪೂಜೆ, ವಿವಿಧ ಭಜನಾ ಮಂಡಳಿಗಳ ಭಜನೆಯೊಂದಿಗೆ ಪಲ್ಲಕ್ಕಿ ಉತ್ಸವ ವೈಭವದಿಂದ ನೆರವೇರಿತು. ನಂತರ ಪಂ ದ್ವೈಪಾಯಾನಾಚಾರ್ಯ ಅವರಿಂದ ಪ್ರವಚನ ನೆರವೇರಿತು, ಇದೆ ಸಂದರ್ಭದಲ್ಲಿ ಅರ್ಚಕರಾದ ಗುಂಡಾಚಾರ್ಯ ನರಿಬೋಳ ಮಾತನಾಡಿ ನಿಸ್ವಾರ್ಥ ಸೇವೆಯನ್ನು ಹೇಗೆ ಮಾಡಬೇಕೆಂದು ಕಲಿಸಿದವರು ಶ್ರೀ ಹನುಮಂತ ದೇವರು, ಶ್ರೀ ರಾಮದೇವರ ಸೇವೆಯನ್ನು ವಿಶೇಷವಾಗಿ ಮಾಡಿ ರಾಮದೇವರಲ್ಲಿ ವಿಶೇಷ ಭಕ್ತಿಯನ್ನು ಮಾಡಿದವರು ಹನುಮಪ್ಪ. ಒಂದು ಬಾರಿ ರಾಮದೇವರು ಕೇಳಿದರಂತೆ ಹನುಮಂತ ನೀನು ನನ್ನ ಸೇವೆಯನ್ನು ಇಷ್ಟು ಭಕ್ತಿಯಿಂದ ಮಾಡಿದ್ದಿ ನಿನಗೆ ಏನು ಬೇಕು ಕೇಳು ಅದನ್ನು ಕೊಡುತ್ತೇನೆ ಅಂದರಂತೆ. ಆದರೆ ಹನುಮಪ್ಪ ಕೇಳಿದ್ದು ನಿನ್ನ ಸೇವೆ ಮಾಡುವ ಭಾಗ್ಯ ಅಷ್ಟೇ ಕೊಡು ಎಂದು ಕೇಳಿದನಂತೆ. ಈಗಿನ ಕಾಲದಲ್ಲಿ ಎಲ್ಲರೂ ಇದನ್ನು ಅನುಸರಿಕೊಂಡು ಸೇವೆ ಮಾಡುವದನ್ನು ಕಲಿತರೆ ಜೀವನ ಉದ್ದಾರವಾಗುತ್ತದೆ ಎಂದರು.
ಡಿ ವ್ಹಿ ಕುಲಕರ್ಣಿ, ಸುರೇಶ ವೆಲ್ಲಾಳ, ಪ್ರಕಾಶ ಪಾಟೀಲ, ಗೋಪಾಲರಾವ್ ಕುಲಕರ್ಣಿ, ಶಾಮರಾವ್ ಕುಲಕರ್ಣಿ, ಗುರುರಾಜ ಬಂಕುರ, ದಿಗಂಬರ ಪುರೋಹಿತ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.


















