
ಕುಣಿಗಲ್, ಅ.೨೯- ಸರ್ಕಾರಿ ನೌಕರರು ಕುಣಿಗಲ್ ತಾಲ್ಲೂಕನ್ನು ಲಂಚಮುಕ್ತ ತಾಲ್ಲೂಕನ್ನಾಗಿ ಮಾಡಬೇಕು ಎಂದು ಲೋಕಾಯುಕ್ತ ಇನ್ಸ್‌ಪೆಕ್ಟರ್ ಶಿವರುದ್ರಪ್ಪ ಮೇಟಿ ಹೇಳಿದರು.
ಇಲ್ಲಿನ ತಾಲ್ಲೂಕು ಪಂಚಾಯ್ತಿ ಕಚೇರಿಯಲ್ಲಿ ಕರ್ನಾಟಕ ಲೋಕಾಯುಕ್ತ ತುಮಕೂರು ಇವರಿಂದ ಭ್ರಷ್ಟಾಚಾರ ವಿರೋಧಿ ಜಾಗೃತಿ ಅರಿವು ಸಪ್ತಾಹ- ೨೦೨೫ರ ಅಂಗವಾಗಿ ನಡೆದ ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಾಮಾಣಿಕ ಆಡಳಿತ ನೀಡುವ ಮೂಲಕ ನೊಂದವರಿಗೆ, ಬಡವರಿಗೆ, ರೈತರಿಗೆ ಸರ್ಕಾರಿ ಕೆಲಸ ಮಾಡಿ ಕೊಡುವ ಮೂಲಕ ಭ್ರಷ್ಟಾಚಾರಮುಕ್ತ ಆಡಳಿತ ನೀಡಲು ಮುಂದಾಗಬೇಕು ಎಂದರು.
ಸರ್ಕಾರಿ ಅಧಿಕಾರಿ ನೌಕರರು ಪ್ರಾಮಾಣಿಕವಾಗಿ ಸಾಮಾನ್ಯ ಜನರ ಕೆಲಸಗಳನ್ನು ವಿಳಂಬವಿಲ್ಲದೆ ಕೈಗೊಳ್ಳುವ ಮೂಲಕ ಸರ್ಕಾರಿ ಕೆಲಸವನ್ನು ಚಾಚು ತಪ್ಪದೇ ಮಾಡಬೇಕು. ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದ ನೀಡದಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಾದ ಹಿರಿಯರ ವೃದ್ಧಾಪ್ಯ ವೇತನ, ಬಿಪಿಎಲ್ ಕಾರ್ಡ್, ಪಹಣಿ, ಪೋಡಿ ಸೇರಿದಂತೆ ಅನೇಕ ಸರ್ಕಾರಿ ಕೆಲಸಗಳನ್ನು ನೌಕರರು ನಿರ್ಲಕ್ಷ ಧೋರಣೆ ವಿಳಂಬ ಅನುಸರಿಸದೇ ಪ್ರಾಮಾಣಿಕವಾಗಿ ಸಕಾಲದಲ್ಲಿ ಬಡವರ ಕೆಲಸ ಮಾಡಬೇಕು. ನೌಕರರು ನೈತಿಕತೆಯನ್ನು ರೂಡಿಸಿಕೊಂಡು ಕೆಲಸ ಮಾಡಿದಾಗ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರ ಆಗುವುದರೊಂದಿಗೆ ಭ್ರಷ್ಟಾಚಾರ ಇಲ್ಲದೆ ಆಡಳಿತ ನೀಡಬೇಕು ಎಂದರು.
ಸರ್ ಎಂ. ವಿಶ್ವೇಶ್ವರಯ್ಯ ಮಹಾತ್ಮ ಗಾಂಧೀಜಿ, ಸಿದ್ದೇಶ್ವರ ಸ್ವಾಮೀಜಿಗಳು ಅಬ್ದುಲ್ ಕಲಾಂ ಈ ಸಮಾಜಕ್ಕೆ ಆದರ್ಶ ಮಾದರಿ ವ್ಯಕ್ತಿಗಳಾಗಿರುತ್ತಾರೆ. ಅವರ ಹಾದಿಯಲ್ಲಿ ಪ್ರಾಮಾಣಿಕವಾಗಿ ಸರ್ಕಾರಿ ಸೇವೆಯಲ್ಲಿದ್ದಾಗ ಯಾವುದೇ ಲೋಪವಾಗದಂತೆ ಜನರ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಅಕ್ರಮವಾಗಿ ಗಳಿಸಿದಂತಹ ಆಸ್ತಿ, ಅಂತಸ್ತು, ಐಶ್ವರ್ಯ ಯಾವುದು ಜೀವನದಲ್ಲಿ ಶಾಶ್ವತವಾಗಿ ಇರುವುದಿಲ್ಲ. ಭ್ರಷ್ಟಾಚಾರದಲ್ಲಿ ಮುಳುಗಿದಾಗ ತಮ್ಮ ಕುಟುಂಬವು ಮಕ್ಕಳು ಪಶ್ಚಾತ್ತಾಪದಿಂದ ಸಮಾಜದಲ್ಲಿ ತಲೆತಗ್ಗಿಸುವಂತಾಗುತ್ತದೆ. ನಾವು ಸರ್ಕಾರಿ ಸೇವೆಯಲ್ಲಿ ಬಡವರ ಕೆಲಸ ಮಾಡಿದಾಗ ಅವರು ಹಾರೈಸಿ ಒಳ್ಳೆಯದನ್ನು ಬಯಸಿದಾಗ ಆತ್ಮತೃಪ್ತಿ ಲಭಿಸುತ್ತದೆ. ಜನರಿಗೆ, ಸರ್ಕಾರಿ ಕೆಲಸಗಳನ್ನು ಯಾವುದೇ ಲೋಪವಾಗದಂತೆ ಆಸೆ ಆಕಾಂಕ್ಷಿಗಳಿಗೆ ಒಳಗಾಗದೆ ಪ್ರಾಮಾಣಿಕವಾಗಿ ಮಾಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಭ್ರಷ್ಟಾಚಾರ ಮುಕ್ತಗೊಳಿಸಲು ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ನೌಕರರು ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಎ ಡಿ ಎಸ್ ಕಾಂತರಾಜು, ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಮರಿಯಪ್ಪ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು

































