Home ಜಿಲ್ಲೆ ಕೆ.ಇ.ಬಿ ಕಾಲೋನಿಯಲ್ಲಿ ಚರಂಡಿ ಅವ್ಯವಸ್ಥೆ ಸ್ಥಳೀಯರ ಆಕ್ರೋಶ; ಆರೋಗ್ಯ ಮತ್ತು ಸುರಕ್ಷತೆಗೆ ಭೀತಿ

ಕೆ.ಇ.ಬಿ ಕಾಲೋನಿಯಲ್ಲಿ ಚರಂಡಿ ಅವ್ಯವಸ್ಥೆ ಸ್ಥಳೀಯರ ಆಕ್ರೋಶ; ಆರೋಗ್ಯ ಮತ್ತು ಸುರಕ್ಷತೆಗೆ ಭೀತಿ

ಬೀದರ್, ಮೇ 22: ನಗರದ ಕೆ.ಇ.ಬಿ ಎದುರಗಡೆಯಲ್ಲಿರುವ ಎಂ.ಬಿ ಪಾಟೀಲ್ ಬೀಲ್ಡಿಂಗ್ ಸುತ್ತಮುತ್ತಲಿನ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಸಂಪೂರ್ಣ ಅವ್ಯವಸ್ಥೆಯಾಗಿದ್ದು, ಕಳೆದ 15 ದಿನಗಳಿಂದ ನಗರ ಪಾಲಿಕೆ ವತಿಯಿಂದ ಸ್ವಚ್ಛಗೊಳಿಸದ ಕಾರಣ ಸ್ಥಳೀಯರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ಚರಂಡಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಕಸ ತುಂಬಿಕೊಂಡಿರುವುದರಿಂದ ಪ್ರದೇಶದಲ್ಲಿ ಭಾರೀ ದುರ್ವಾಸನೆ ಹರಡುತ್ತಿದೆ. ಕಳೆದ ಎರಡು ವಾರಗಳಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಸುತ್ತಮುತ್ತಲಿನ ನಿವಾಸಿಗಳು ಮತ್ತು ಅಂಗಡಿ ಮಾಲೀಕರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಚರಂಡಿಯ ಮೇಲೆ ಅಳವಡಿಸಲಾಗಿರುವ ಮುಚ್ಚಳದ ಸ್ಲ್ಯಾಬ್‍ಗಳು ತೆರೆದಿರುವುದರಿಂದ ಮಕ್ಕಳು, ವೃದ್ಧರು ಹಾಗೂ ಪಾದಚಾರಿಗಳು ಚರಂಡಿ ದಾಟಲು ಕಷ್ಟಪಡುತ್ತಿದ್ದಾರೆ. ಯಾವುದೇ ಕ್ಷಣದಲ್ಲಿ ಅಪಘಾತ ಸಂಭವಿಸುವ ಭೀತಿ ಹೆಚ್ಚುತ್ತಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆ, ಚರಂಡಿಯಲ್ಲಿರುವ ಕಸ ಹಾಗೂ ತ್ಯಾಜ್ಯ ಮಳೆ ನೀರಿನೊಂದಿಗೆ ರಸ್ತೆ ಮೇಲೆ ಹರಿದು ಬಂದು ದುರ್ವಾಸನೆ ಬರುವ ಸಾಧ್ಯತೆ ಹೆಚ್ಚಾಗಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.

ಈ ಕುರಿತು ಸ್ಥಳೀಯರು ದೂರವಾಣಿ ಮೂಲಕ ಸಿಎಂಸಿ ಸ್ಯಾನಿಟರಿ ಇನ್ಸ್‍ಪೆಕ್ಟರ್ ಶುಭಾಸ್ ಅವರನ್ನು ಹಲವು ಬಾರಿ ಸಂಪರ್ಕಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ದೂರಿದ್ದಾರೆ. ಅನೇಕ ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸದಿರುವುದರಿಂದ ಸಾರ್ವಜನಿಕರಲ್ಲಿ ಆಕ್ರೋಶ ಹೆಚ್ಚಾಗಿದೆ.

ಒಳಚರಂಡಿ ಸ್ವಚ್ಛಗೊಳಿಸದ ಪರಿಣಾಮ ಜನರು ಅಂಗಡಿಗಳಿಗೆ ತೆರಳಲು ಸಹ ತೊಂದರೆ ಅನುಭವಿಸುತ್ತಿದ್ದಾರೆ. ಬಲವಾದ ಗಾಳಿಯಿಂದ ಪ್ಲಾಸ್ಟಿಕ್ ಹಾಗೂ ಕಸ ಚರಂಡಿಯಲ್ಲಿ ಸಿಲುಕಿ ನಿರಂತರ ದುರ್ವಾಸನೆ ಉಂಟಾಗುತ್ತಿದ್ದು, ಇದು ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯ ತಂದೊಡ್ಡುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ತಕ್ಷಣವೇ ಒಳಚರಂಡಿಯನ್ನು ಸ್ವಚ್ಛಗೊಳಿಸಿ, ತೆರೆದಿರುವ ಮುಚ್ಚಳದ ಸ್ಲ್ಯಾಬ್‍ಗಳನ್ನು ಮರುಸ್ಥಾಪಿಸಿ ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡುವಂತೆ ಕೆ.ಇ.ಬಿ ನಿವಾಸಿಗಳು ನಗರ ಪಾಲಿಕೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.