
ಕೋಲಾರ,ಡಿ, ೧೨- ಸ್ಥಳೀಯ ಪ್ರಸಿದ್ಧ ಗಾಯಕರು ಹಾಗೂ ಜಾನಪದ ಹಾಡುಗಳನ್ನು ಕಡೆಗಣಿಸಿ ದೂರದ ಜಿಲ್ಲೆಗಳ ಯಾರಿಗೋ ಜಿಲ್ಲಾಡಳಿತ ಹಾಗೂ ಕನ್ನಡ ಸಂಘಗಳು ಮಣೆ ಹಾಕುತ್ತಿವೆ ಎಂದು ಜಾನಪದ ಗಾಯಕ ಗೋ.ನಾ.ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಜಿಲ್ಲೆಯ ದುರಂತವೆಂದರೆ ಕೆಲ ಕನ್ನಡ ಸಂಘಗಳಿಗೆ, ಜಿಲ್ಲಾಡಳಿತಕ್ಕೆ ನನ್ನಂಥ ಕಲಾವಿದರೂ ಕಣ್ಣಿಗೆ ಕಾಣುತ್ತಿಲ್ಲ. ಜಿಲ್ಲಾ ಕೇಂದ್ರದಿಂದ ೮ ಕಿ.ಮೀ ದೂರದಲ್ಲಿರುವ ಸುಗಟೂರು ಗ್ರಾಮದ ನನ್ನನ್ನೂ ಕಡೆಗಣಿಸಿದ್ದಾರೆ. ಅಮೆರಿಕ, ಜರ್ಮನಿ, ರಷ್ಯಾ, ಫ್ರಾನ್ಸ್‌ನವರು ನನ್ನನ್ನು ಆಹ್ವಾನಿಸಿದ್ದು, ಕಾರ್ಯಕ್ರಮ ನೀಡಿದ್ದೇನೆ. ಆದರೆ, ನಮ್ಮವರಿಗೇ ನಾನು ಗೊತ್ತಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ನಾನು ಯಾರ ಬಳಿಯೂ ಭಿಕ್ಷೆ ಬೇಡುವ ಪರಿಸ್ಥಿತಿಯಲ್ಲಿ ಇಲ್ಲ. ನಾನೇ ಹುಟ್ಟೂರಿಗೆ, ಕಲಾವಿದರಿಗೆ ಸಹಾಯ ಮಾಡುತ್ತಿದ್ದೇನೆ. ಸಂಭಾವನೆ ಪಡೆಯದೆ ನಾನು ಹಾಡಿದ್ದುಂಟು. ಎಸ್.ಪಿ.ಬಾಲಸುಬ್ರಮಣ್ಯ ಅವರಂಥ ಮೇರು ಗಾಯಕರನ್ನು ನಾನು ಕೋಲಾರಕ್ಕೆ ಕರೆಸಿದ್ದೆ ಎಂದಿದ್ದಾರೆ.
ಬೇರೆ ಯಾರೋ ನಮ್ಮೂರಿಗೆ ಬಂದು ಕಾರ್ಯಕ್ರಮ ಮಾಡಿ ಹೋಗುತ್ತಾರೆ. ಕೆಲ ಕನ್ನಡ ಸಂಘಗಳ ಪುಣ್ಯಾತ್ಮರಿಗೆ ನಾವು ಕಾಣುತ್ತಿಲ್ಲ. ನಮಗೆ ಅವರು ಕರೆಯುವುದು ಬೇಕಾಗಿಲ್ಲ. ಆದರೆ, ನಮ್ಮೂರಿನಲ್ಲಿ ನನ್ನವರು ಎಂದು ಹೇಳಿಕೊಳ್ಳುವ ಊರಿನಲ್ಲಿ ಕಂಡವರನ್ನೆಲ್ಲಾ ಕರೆಸುತ್ತಾರೆ. ನಮ್ಮೂರಿನಲ್ಲಿ ನಮಗೆ ಬೆಲೆ ಇಲ್ಲದಂತಾಗಿದೆ ಎಂದು ನುಡಿದಿದ್ದಾರೆ.
ಜಾನಪದ ಕಾರ್ಯಕ್ರಮಗಳಿಗೆ ಮಹತ್ವ ನೀಡಬೇಕು ಎಂಬುದೇ ಸಂಘಟಕರಿಗೆ ಗೊತ್ತಿಲ್ಲ. ಇನ್ನು ಇವರು ಯಾವ ರೀತಿ ಕನ್ನಡ ಉಳಿಸುತ್ತಾರೆ? ಕನ್ನಡ ಉಳಿಯುವುದೇ ಜಾನಪದ ಗೀತೆಗಳಿಂದ. ಆದರೆ, ಇಲ್ಲಿ ಜಾನಪದಕ್ಕೆ ಅನ್ಯಾಯವಾಗುತ್ತಿದೆ. ಯಾರೋ ಬಂದು ಸಿನಿಮಾ ಹಾಡು ಹಾಡಿದರೆ ಕನ್ನಡ ಉಳಿಯುವುದಿಲ್ಲ ಕೋಲಾರ ಜಿಲ್ಲೆಯವರು ಕರಾವಳಿ ಜನರನ್ನು ನೋಡಿ ಕಲಿಯಬೇಕು ಅಲ್ಲಿಯ ಸ್ಥಳೀಯರಿಗೆ ಅವರು ಎಷ್ಟು ಬೆಲೆ ಅವಕಾಶ ಕೊಡುತ್ತಾರೆ ಎಂಬುದನ್ನು ಅರಿಯಬೇಕು ಎಂದರು
ಕೋಲಾರ ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಅದರೊಟ್ಟಿಗೆ ರಂಗಭೂಮಿ ಜಾನಪದ ಕಲೆಗಳಿಗೆ ಪ್ರಶಸ್ತಿ ನೀಡಿದರೆ ಸಂಸ್ಥೆಗಳಿಗೂ ಜಿಲ್ಲಾಡಳಿತಕ್ಕೂ ಒಳ್ಳೆಯ ಕೀರ್ತಿ ಬರುತ್ತದೆ ಇತ್ತೀಚಿನ ಬೆಳವಣಿಗೆಗಳು ನಮ್ಮಂಥ ಕಲಾವಿದರಿಗೆ ತುಂಬಾ ನೋವಾಗುತ್ತದೆ. ನಿಮ್ಮ ನಡೆಗೆ ಜಾನಪದ ಕಲಾವಿದರಿಂದ ಧಿಕ್ಕಾರವಿರಲಿದೆ ನಮ್ಮಂತವರನ್ನು ಗುರುತಿಸುವ ಕೆಲಸವನ್ನು ಜಿಲ್ಲಾಡಳಿತವಾಗಲಿ ಸಂಘ ಸಂಸ್ಥೆಗಳು ಮಾಡಲಿ ಎಂದು ಗೋ.ನಾ ಸ್ವಾಮಿ ಒತ್ತಾಯಿಸಿದರು.



























