
ಮುಳಬಾಗಿಲು,ಜು,೫-ಸುಮಾರು ೨೫ ವರ್ಷಗಳ ಹಿಂದೆ ನಾನು ಕಂಡಿದ್ದ ಕನಸು ಡಿಸಿಸಿ ಬ್ಯಾಂಕ್ ನಿರ್ದೇಶಕರಾಗುವ ಮೂಲಕ ಕನಸು ಈಡೇರಿದಂತಾಗಿದೆ ಎಂದು ಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕ ನಲ್ಲೂರು ವಿ.ರಘುಪತಿ ರೆಡ್ಡಿ ಎಂದು ಹರ್ಷ ವ್ಯಕ್ತಪಡಿಸಿದರು.
ಮುಳಬಾಗಿಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದಿ||ಆಲಂಗೂರು ಶ್ರೀನಿವಾಸ್ ಶಾಸಕರಾಗಿದ್ದಾಗ ನಾನು ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಮೇಲೆ ಕಣ್ಣಿಟ್ಟಿದ್ದೆ ಕಾರಣಾಂತರಗಳಿಂದ ಆ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ, ಈಗ ನನಗೆ ತೃಪ್ತಿ ಸಿಕ್ಕಿದೆ ಎಂದರು.
ತಾಲೂಕಿನಲ್ಲಿ ಒಟ್ಟು ೨೮ ವಿಎಸ್‌ಎಸ್‌ಎನ್ ಸೊಸೈಟಿಗಳಿದ್ದು, ಈ ಪೈಕಿ ೧೯ ಸೊಸೈಟಿಗಳಲ್ಲಿ ಆಡಳಿತ ಮಂಡಳಿಗಳು ಇವೆ ಉಳಿದ ೯ ಸೊಸೈಟಿಗಳಲ್ಲಿ ಚುನಾವಣೆ ನಡೆಸಿ ಸ್ಥಳೀಯವಾಗಿ ರೈತರಿಗೆ ಅಧಿಕಾರ ಕೊಡಿಸಿ ಶೂನ್ಯ ಬಡ್ಡಿ ದರದಲ್ಲಿ ಮಹಿಳಾ ಸಂಘಗಳಿಗೆ ಮತ್ತು ರೈತರಿಗೆ ಸಾಲ ನೀಡುವುದರಲ್ಲಿ ಮೊದಲ ಆದ್ಯತೆ ಕೊಡಲಾಗುವುದು ಎಂದು ತಿಳಿಸಿದರು.
ಹಲವಾರು ವಿಎಸ್‌ಎಸ್‌ಎನ್ ಸೊಸೈಟಿಗಳು ಕಾರಣಾಂತರಗಳಿಂದ ಮುಚ್ಚಲಾಗಿದ್ದು, ಮತ್ತೆ ಪುನರಾರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ಮನೆ ನಿರ್ಮಾಣ ಸೇರಿದಂತೆ ಇತರೆ ಸಾಲಗಳನ್ನು ಸಹ ಡಿಸಿಸಿ ಬ್ಯಾಂಕ್ ಮುಖಾಂತರ ನೀಡಲಾಗುವುದೆಂದು ಹೇಳಿದರು.
ಹಾಲು ಡೇರಿಗಳಲ್ಲಿ ಹಾಲು ಹಾಕುವ ರೈತರಿಗೂ ಸಹ ಡಿಸಿಸಿ ಬ್ಯಾಂಕ್ ನಿಂದ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಿ ಆರ್ಥಿಕವಾಗಿ ಮುಂದುವರೆಯಲು ಕ್ರಮ ಕೈಗೊಳ್ಳುತ್ತೇನೆ, ಶಾಸಕ ಸಮೃದ್ಧಿ ಮಂಜುನಾಥ್ ಮತ್ತು ಕೋಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಬಿ.ವಿ.ಸಾಮೇಗೌಡರ ಸಹಕಾರದೊಂದಿಗೆ ನಗರದಲ್ಲಿ ಸರ್ಕಾರದಿಂದ ನಿವೇಶನ ಮಂಜೂರು ಮಾಡಿಸಿ ಡಿಸಿಸಿ ಬ್ಯಾಂಕ್ ಸ್ವಂತ ಕಟ್ಟಡವನ್ನು ನಿರ್ಮಿಸಲು ಯೋಜನೆ ರೂಪಿಸಿದೆ ಎಂದು ತಿಳಿಸಿದರು.
ತಾಲೂಕಿನ ಬಲ್ಲ ಸಿದ್ದಘಟ್ಟ ಎಚ್.ಗೊಲ್ಲಹಳ್ಳಿಗಳಲ್ಲಿ ವಿಎಸ್‌ಎಸ್‌ಎನ್ ಸೊಸೈಟಿಗಳು ಕಾರಣಾಂತರಗಳಿಂದ ಮುಚ್ಚಲ್ಪಟ್ಟಿದ್ದು ಮತ್ತೆ ಪುನರಾರಂಭಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಸಮಾಜದಲ್ಲಿ ಮಹಿಳೆಯರ ಪಾತ್ರ ಮಹತ್ವವಾಗಿದ್ದು ಕುಟುಂಬಗಳ ಬೆಳವಣಿಗೆ ದೃಷ್ಟಿಯಿಂದ ಹೆಚ್ಚಿನ ಸಾಲ ಮಹಿಳಾ ಸಂಘಗಳಿಗೆ ಮತ್ತು ರೈತರಿಗೆ ನೀಡಲು ನಿರ್ಧರಿಸಲಾಗಿದೆ.
ಖಾಸಗಿ ಫೈನಾನ್ಸ್ ಮತ್ತು ಮೈಕ್ರೋ ಫೈನಾನ್ಸ್‌ಗಳ ಮೀಟರ್ ಬಡ್ಡಿ ದಂಧೆಯಿಂದ ರೈತರು ಮತ್ತು ಮಹಿಳಾ ಸಂಘಗಳನ್ನು ತಪ್ಪಿಸಲು ಸೂಕ್ತ ಕ್ರಮಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.