
ವಾಡಿ : ಜ.೨೩:ತಾಲೂಕಿನ ಕಮರವಾಡಿ ಗ್ರಾಮದ ಅಂಗನವಾಡಿ ಕೇಂದ್ರದ ಎರಡರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ನಾಗಮ್ಮ ಸಂಗಶೆಟ್ಟಿ ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ-ಯುಕೆಜಿ ತರಗತಿ ಉದ್ಘಾಟನೆಗೊಳಿಸುವ ನಿಟ್ಟಿನಲ್ಲಿ ಇಲಾಖೆಯ ಸೌಲಭ್ಯಗಳನ್ನು ವಿವಿರಿಸಿದರು.
ಅಂಗನವಾಡಿ ಕಾರ್ಯಕರ್ತೆ ನೀಲಮ್ಮ ಶಿರವಾಳ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ಉಚಿತವಾಗಿ ಪೂರೈಸಲಾದ ಸಮವಸ್ತ್ರ ವಿತರಣೆ ಹಾಗೂ ಪ್ರಾಥಮಿಕ ತರಗತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ನಾಗಮ್ಮ ಸಂಗಶೆಟ್ಟಿ, ನಿಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳಿಸುವುದಕ್ಕಿಂತ ಅಂಗನವಾಡಿ ಕೇಂದ್ರದಲ್ಲಿ ಆರಂಭಿಸಲಾದ ಶಾಲೆಗೆ ಕಳುಹಿಸಿಕೊಡಬೇಕು. ಆರ್ಥಿಕ ಸ್ಥಿತಿ ತಗ್ಗಿಸಲು ಸರಕಾರ ಶೈಕ್ಷಣಿಕ ಚಟುವಟಿಕೆಗೆ ಪುಷ್ಟಿ ನೀಡುವ ನಿಟ್ಟಿನಲ್ಲಿ ೪-೫ ವರ್ಷದ ಮಕ್ಕಳಿಗೆ ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮ ಶೈಕ್ಷಣಿಕ ಸೌಲಭ್ಯ ಒದಗಿಸಿದೆ. ಮಕ್ಕಳಿಗೆ ಈಗಾಗಲೇ ಪ್ರವೇಶ ಪ್ರಾರಂಭಿಸಲಾಗಿದ್ದು, ಮಕ್ಕಳು ಮಾನಸಿಕವಾಗಿ, ದೈಹಿಕವಾಗಿ ಸದೃಢತೆ ಹೆಚ್ಚಿಸಲು ಇಲಾಖೆ ಕ್ರಮವಹಿಸಿದೆ ಎಂದು ಹೇಳಿದರು.
ಅಂಗನವಾಡಿ ಕೇಂದ್ರಕ್ಕೆ ಬರುವ ಬಾಲ ಮಕ್ಕಳಿಗೆ ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮ ಕಲಿಕಾ ಬೋಧನೆ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಮಕ್ಕಳ ಕಲಿಕಾ ಚೇತರಿಕೆ ಜತೆಗೆ ಅರೋಗ್ಯಕ್ಕೂ ಒತ್ತು ನೀಡಲಾಗುತ್ತಿದೆ. ಆಟದ ಮೂಲಕ ಕಲಿಕಾ ಚಟುವಟಿಕೆ ನಡೆಸಲಾಗುತ್ತದೆ. ಮಕ್ಕಳ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸಲು ಎಲ್‌ಕೆಜಿ, ಯುಕೆಜಿ ಮಕ್ಕಳಿಗಾಗಿ ಪೂರ್ವ ಪ್ರಾಥಮಿಕ ತರಗತಿ ಪ್ರಾರಂಭಿಸಲಾಗಿದೆ. ಖಾಸಗಿ ಶಾಲೆಗಳಿಗೆ ಮಾರು ಹೋಗದೆ ಅಂಗನವಾಡಿ ಕೇಂದ್ರಕ್ಕೆ ನಿಮ್ಮ ಮಕ್ಕಳನ್ನು ಕಳುಹಿಸಬೇಕು ಎಂದು ಮನವಿ ಮಾಡಿದರು.
ಸ್ಥಳೀಯ ಗ್ರಾಪಂ ಅಧ್ಯಕ್ಷೆ ಅನಿತಾ ಹರಿಸಿಂಗ್ ಚವ್ಹಾಣ ಸಭೆಯ ಅಧ್ಯಕ್ಷತೆ ವಹಿಸಿ, ಕೇಂದ್ರದಲ್ಲಿ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಕಾರ್ಯಕ್ರಮ ನೆರವೇರಿಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕಿ ಮಂಜುಳಾ ಕುಲಕರ್ಣಿ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆ ಶಿವಲಿಂಗಮ್ಮ ಗಂಗನೋರ, ಚಂಪಾ ಕುಲಕರ್ಣಿ, ಲಕ್ಷ್ಮಿ ಕಾಂಬಳೆ, ಗ್ರಾಮದ ಹಿರಿಯ ಮುಖಂಡ ಶಿವಶರಣಪ್ಪ ಶಿರವಾಳ, ಪತ್ರಕರ್ತ ರಾಯಪ್ಪ ಕೊಟಗಾರ ಸೇರಿದಂತೆ ಪೋಷಕರು ಭಾಗವಹಿಸಿದ್ದರು. ರೈತ ಸಂಘದ ಮುಖಂಡ ಬಸವರಾಜ ಸುಲೆಪೇಠ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಅಂಗನವಾಡಿ ಕೇಂದ್ರದ ಹದಿನೆಂಟು ಮಕ್ಕಳಿಗೆ ಕಾರ್ಯಕರ್ತೆ ನೀಲಮ್ಮ ಶಿರವಾಳ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ವಿತರಿಸಿ ಗ್ರಾಮಸ್ಥರ ಗಮನ ಸೆಳೆದರು.

























